India vs Sri Lanka: 27 ವರ್ಷಗಳ ಬಳಿಕ ಭಾರತಕ್ಕೆ ಶ್ರೀಲಂಕಾದಲ್ಲಿ ಸರಣಿ ಸೋಲು! ಲಂಕಾ ಸ್ಪಿನ್ ಬಲೆಗೆ ಬಿದ್ದ ರೋಹಿತ್ ಪಡೆ
ಟಿ20 ವಿಶ್ವಕಪ್ ಗೆದ್ದ ಬಳಿಕ, ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ಏಕದಿನ ಸರಣಿಯಲ್ಲಿ ಮುಗ್ಗರಿಸಿದೆ. ಏಕದಿನ ಸರಣಿಯ ಮೊದಲನೇ ಪಂದ್ಯ ಟೈ ಆದ ಬಳಿಕ ಉಳಿದ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಶ್ರೀಲಂಕಾ ಯಶಸ್ವಿಯಾಗಿದ್ದು, 27 ವರ್ಷಗಳ ಬಳಿಕ ಭಾರತದ ವಿರುದ್ಧ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಎರಡನೇ ಏಕದಿನ ಪಂದ್ಯದಲ್ಲಿ 241 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ವಿಫಲವಾಗಿದ್ದ ಭಾರತ ಮೂರನೇ ಏಕದಿನ ಪಂದ್ಯದಲ್ಲಿ 249 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿದೆ. ಶ್ರೀಲಂಕಾ ಸತತವಾಗಿ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ 27 ವರ್ಷಗಳ ಶಾಪ ವಿಮೋಚನೆಯಾಗಿದೆ. ಶ್ರೀಲಂಕಾ 27 ವರ್ಷಗಳ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಶ್ರೀಲಂಕಾದ ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ಭಾರತ ಮತ್ತೆ ವಿಫಲವಾಗಿದೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ 9ನೇ ಸ್ಥಾನ ಗಳಿಸಿದ್ದ ಶ್ರೀಲಂಕಾ, ರನ್ನರ್ ಅಪ್ ಆಗಿದ್ದ ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಟಿ20 ಸರಣಿಯನ್ನು ಸೋತಿದ್ದ ಶ್ರೀಲಂಕಾ ಏಕದಿನ ಸರಣಿಯಲ್ಲಿ ವಾಪಸಾತಿ ಮಾಡುವಲ್ಲಿ ಯಶಸ್ವಿಯಾಗಿದೆ.
ಸ್ಪಿನ್ ಮೋಡಿಗೆ ಕುಸಿದ ರೋಹಿತ್ ಪಡೆ
ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 248 ರನ್ ಕಲೆಹಾಕಿತು. ಆವಿಷ್ಕಾ ಫರ್ನಾಂಡೊ 102 ಎಸೆತಗಳಲ್ಲಿ 96 ರನ್ ಗಳಿಸುವ ಮೂಲಕ ಶತಕದಿಂದ ವಂಚಿತವಾದರು. ಕುಸಾಲ್ ಮೆಂಡಿಸ್ 59 ರನ್ ಗಳಿಸಿದರೆ, ಪಾಥುಮ್ ನಿಸಂಕ 45 ರನ್ ಗಳಿಸಿದರು. ರಿಯಾನ್ ಪರಾಗ್ 3 ವಿಕೆಟ್ ಪಡೆಯುವ ಮೂಲಕ ಭಾರತದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು. ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
249 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ 26.1 ಓವರ್ ಗಳಲ್ಲಿ ಕೇವಲ 138 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ರೋಹಿತ್ ಶರ್ಮಾ 35 ರನ್ ಗಳಿಸಿದರೆ, ವಾಷಿಂಗ್ಟನ್ ಸುಂದರ್ 30 ರನ್ ಗಳಿಸಿದರು. ವಿರಾಟ್ ಕೊಹ್ಲಿ 20 ರನ್ ಗಳಿಸಿ ಔಟಾದರು.
ದುನಿತ್ ವೆಲ್ಲಲಗೆ 5.1 ಓವರ್ ಗಳಲ್ಲಿ 27 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು. ಜೆಫೆರಿ ವೆಂಡರ್ಸೆ ಮತ್ತು ಮಹೀಶ್ ತೀಕ್ಷಣ ತಲಾ 2 ವಿಕೆಟ್ ಪಡೆದರು. ಅಸಿತಾ ಫರ್ನಾಂಡೋ 1 ವಿಕೆಟ್ ಪಡೆದರು.












Click it and Unblock the Notifications