ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ಹರ್ಮನ್ಪ್ರೀತ್ ಕೌರ್ ಭಾವನಾತ್ಮಕ ಪೋಸ್ಟ್
Harmanpreet Kaur: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ಹರ್ಮನ್ಪ್ರೀತ್ ಕೌರ್ ಅವರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾನಲ್ಲಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದು ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ಹಾಗೂ ದೀರ್ಘಾವಧಿ ನಾಯಕಿಯಾಗಿದ್ದ 37 ವರ್ಷದ ಹರ್ಮನ್ಪ್ರೀತ್ ಕೌರ್ ಅವರು ಎಲ್ಲಾ ಮೂರು ಮಾದರಿಯ (ಟಿ20, ಏಕದಿನ ಮತ್ತು ಟೆಸ್ಟ್) ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯುವುದಾಗಿ ಮಂಗಳವಾರ (ಅಕ್ಟೋಬರ್ 6) ಅಧಿಕೃತವಾಗಿ ಘೋಷಿಸಿದ್ದಾರೆ. ತಮ್ಮ ಈ ಜವಾಬ್ದಾರಿಯಿಂದ ಕೆಳಗಿಳಿದ ಅವರು, ಒಬ್ಬ ಆಟಗಾರ್ತಿಯಾಗಿ ತಂಡದಲ್ಲಿ ಸೇವೆ ಮುಂದುವರೆಸುವುದಾಗಿ ಹೇಳಿದ್ದಾರೆ.

ಹರ್ಮನ್ಪ್ರೀತ್ ಕೌರ್ ಮುಂದಿನ ಗುರಿ ಏನು?
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಿರ್ಧಾರವನ್ನು ಹಂಚಿಕೊಂಡಿರುವ ಹರ್ಮನ್ಪ್ರೀತ್ ಕೌರ್ ಅವರು, 'ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ. ದೇಶಕ್ಕಾಗಿ ಹಲವು ಸರಣಿ ಮತ್ತು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟ ತೃಪ್ತಿ ನನಗಿದೆ. ಇದೀಗ ಮುಂದಿನ ಪೀಳಿಗೆಯವರಿಗೆ ನಾಯಕತ್ವಕ್ಕೆ ಹಾದಿ ಸುಗಮಗೊಳಿಸುವ ಸೂಕ್ತ ಸಮಯ ಬಂದಿದೆ. ತಂಡಕ್ಕೆ ಒಬ್ಬ ಹಿರಿಯ ಬ್ಯಾಟರ್ ಆಗಿ ಕೊಡುಗೆ ನೀಡುವುದು ಹಾಗೂ ಬ್ಯಾಟಿಂಗ್ ಪ್ರದರ್ಶನವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳುವುದು ನನ್ನ ಮುಂದಿನ ಆದ್ಯತೆಯಾಗಿದೆ,' ಎಂದು ತಿಳಿಸಿದ್ದಾರೆ.
ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತದ ಸಾಧನೆಗಳು
ಮಿತಾಲಿ ರಾಜ್ ಅವರ ಬಳಿಕ ಭಾರತ ತಂಡದ ನಾಯಕತ್ವದ ವಹಿಸಿಕೊಂಡಿದ್ದ ಹರ್ಮನ್ಪ್ರೀತ್ ಕೌರ್, ಭಾರತೀಯ ಮಹಿಳಾ ಕ್ರಿಕೆಟ್ಗೆ ಜಾಗತಿಕ ಮಟ್ಟದಲ್ಲಿ ಹೊಸ ಮೆರುಗು ತಂದುಕೊಟ್ಟಿದ್ದಾರೆ. ಹಾಗಾದ್ರೆ ಯಾವೆಲ್ಲಾ ಕೊಡುಗೆಗಳನ್ನ ನೀಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
* ವಿಶ್ವಕಪ್ ಮತ್ತು ಏಷ್ಯನ್ ಗೇಮ್ಸ್: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಜೊತೆಗೆ ಇತ್ತೀಚೆಗೆ ಮುಕ್ತಾಯಗೊಂಡ 2026ರ ಏಷ್ಯನ್ ಗೇಮ್ಸ್ನಲ್ಲೂ ತಂಡವನ್ನು ಮುನ್ನಡೆಸಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು.
* ತಮ್ಮ ಚಾಣಾಕ್ಷ ಹಾಗೂ ಆಕ್ರಮಣಕಾರಿ ಆಟದ ಶೈಲಿಯಿಂದ ಆಸ್ಟ್ರೇಲಿಯಾ, ಇಂಗ್ಲೆಂಡ್ನಂತಹ ಬಲಿಷ್ಠ ತಂಡಗಳ ವಿರುದ್ಧ ಅವರದ್ದೇ ಮಣ್ಣಿನಲ್ಲಿ ಐತಿಹಾಸಿಕ ಸರಣಿ ಗೆಲುವುಗಳನ್ನು ಸಾಧಿಸಿದ್ದಾರೆ.
* ಟಿ-20 ಮತ್ತು ಏಕದಿನ ಕ್ರಿಕೆಟ್ನಲ್ಲಿ ನಾಯಕಿಯಾಗಿ ನೂರಕ್ಕೂ ಹೆಚ್ಚು ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿ ಅತ್ಯಂತ ಯಶಸ್ವಿ ನಾಯಕಿ ಎನಿಸಿಕೊಂಡಿದ್ದಾರೆ.
ಹರ್ಮನ್ಪ್ರೀತ್ ಕೌರ್ ಅವರ ಈ ತೀರ್ಮಾನದ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ಕ್ರಿಕೆಟ್ ಪ್ರೇಮಿಗಳು ಅವರಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ. 'ಹರ್ಮನ್ಪ್ರೀತ್ ಕೌರ್ ಭಾರತೀಯ ಮಹಿಳಾ ಕ್ರಿಕೆಟ್ನ ದಿಕ್ಕನ್ನೇ ಬದಲಿಸಿದ ನಾಯಕಿ. ತಂಡಕ್ಕೆ ಅವರ ಅಪಾರ ಕೊಡುಗೆ ಎಂದಿಗೂ ಸ್ಮರಣೀಯ. ಆಟಗಾರ್ತಿಯಾಗಿ ಅವರ ಮುಂದಿನ ಇನ್ನಿಂಗ್ಸ್ಗೆ ಶುಭ ಹಾರೈಸುತ್ತೇವೆ,' ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.
ಹರ್ಮನ್ಪ್ರೀತ್ ಕೌರ್ ನಾಯಕತ್ವ ತೊರೆದಿರುವುದರಿಂದ ಭಾರತ ಮಹಿಳಾ ತಂಡದ ಮುಂದಿನ ಸಾರಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯ ತಂಡದ ಉಪನಾಯಕಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್ನ ನಾಯಕತ್ವ ಒಲಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಬಿಸಿಸಿಐ ಶೀಘ್ರದಲ್ಲೇ ಹೊಸ ನಾಯಕಿಯ ಹೆಸರನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಹರ್ಮನ್ಪ್ರೀತ್ ಕೌರ್ ಭಾವನಾತ್ಮಕ ಸಂದೇಶ
'ಇಂದು ನಾನು ಭಾರತ ಮಹಿಳಾ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ನನಗೆ ಅತ್ಯಂತ ಕಠಿಣ ನಿರ್ಧಾರ. ಈ ಸುದೀರ್ಘ ಪಯಣದಲ್ಲಿ ವರ್ಷಗಳ ನೆನಪುಗಳು, ಭಾವನೆಗಳು, ತ್ಯಾಗಗಳು ಸೇರಿವೆ. ನನ್ನ ರಕ್ತ, ಬೆವರು, ಸಮಯ ಹಾಗೂ ಹಲವು ಬಾರಿ ನನ್ನ ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನೇ ಬದಿಗೊತ್ತಿ ನಾನು ಭಾರತೀಯ ಕ್ರಿಕೆಟ್ಗಾಗಿ ಸರ್ವಸ್ವವನ್ನೂ ನೀಡಿದ್ದೇನೆ. ವೈಯಕ್ತಿಕ ಸಾಧನೆಗಿಂತ ತಂಡದ ಗೆಲುವೇ ನನಗಾಗ ಮುಖ್ಯವಾಗಿತ್ತು,' ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
'ತಂಡದ ಹಿತದೃಷ್ಟಿಯಿಂದ ಹಾಗೂ ಯುವ ಆಟಗಾರರಿಗೆ ಬೆಳೆಯಲು ಅವಕಾಶ ನೀಡುವ ಉದ್ದೇಶದಿಂದ ಹಲವು ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಯಿತು. ಕೆಲವೊಮ್ಮೆ ಅವುಗಳಿಗೆ ಬೆಲೆ ತೆರಬೇಕಾಗಿ ಬಂತು. ಕ್ರಿಕೆಟ್ ಜೀವನದ ಅತ್ಯಂತ ಕೆಟ್ಟ ದಿನಗಳು, ನಿರಾಸೆಗಳು, ವಿಮರ್ಶೆಗಳನ್ನು ನೋಡಿದ್ದೇನೆ. ಅದೇ ರೀತಿ ದೇಶವನ್ನು ಪ್ರತಿನಿಧಿಸಿ ಜಯಗಳಿಸಿದ ಅತ್ಯುನ್ನತ ಯಶಸ್ಸಿನ ಕ್ಷಣಗಳನ್ನೂ ಅನುಭವಿಸಿದ್ದೇನೆ. ಇಂದು ಸಂಪೂರ್ಣ ತೃಪ್ತಿ ಹಾಗೂ ನೆಮ್ಮದಿಯ ಮನಸ್ಸಿನಿಂದ ನಾಯಕತ್ವ ತೊರೆಯುತ್ತಿದ್ದೇನೆ,' ಎಂದು ತಿಳಿಸಿದ್ದಾರೆ.
'ತಂಡವು ಈಗ ಅತ್ಯುತ್ತಮ ಸ್ಥಿತಿಯಲ್ಲಿದೆ ಮತ್ತು ಉತ್ತಮ ಭವಿಷ್ಯವನ್ನು ಹೊಂದಿದೆ ಎಂಬ ಭರವಸೆ ನನಗಿದೆ. ನಾಯಕಿಯಾಗಿ ನನ್ನ ಕರ್ತವ್ಯವನ್ನು ಸಂಪೂರ್ಣವಾಗಿ ಪೂರೈಸಿದ್ದೇನೆ. ನಾಯಕತ್ವ ಕೊನೆಗೊಂಡಿರಬಹುದು, ಆದರೆ ಭಾರತೀಯ ಕ್ರಿಕೆಟ್ ಮೇಲಿನ ನನ್ನ ಪ್ರೀತಿ ಎಂದಿಗೂ ಕೊನೆಗೊಳ್ಳುವುದಿಲ್ಲ. ಇನ್ಮುಂದೆ ನಾಯಕತ್ವದ ಒತ್ತಡವಿಲ್ಲದೆ, ಕ್ರಿಕೆಟ್ ಮೇಲಿನ ಪ್ರೀತಿಗಾಗಿ ಆಟಗಾರ್ತಿಯಾಗಿ ಮೈದಾನಕ್ಕಿಳಿಯಲು ಕಾಯುತ್ತಿದ್ದೇನೆ,' ಎಂದು ಬರೆದುಕೊಂಡು ಗಮನ ಸೆಳೆದಿದ್ದಾರೆ.


Click it and Unblock the Notifications
