ಸರಣಿ ಗೆದ್ದರೂ ಕ್ರಿಕೆಟ್ ವೆಸ್ಟ್ ಇಂಡೀಸ್ ವಿರುದ್ಧ ಕಿಡಿ ಕಾರಿದ ಹಾರ್ದಿಕ್ ಪಾಂಡ್ಯ: ಕಾರಣ ಇಲ್ಲಿದೆ
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡ 2-1 ಅಂತರದಲ್ಲಿ ಸರಣಿ ಗೆದ್ದು ಬೀಗಿದೆ. ನಾಯಕ ರೋಹಿತ್ ಶರ್ಮಾ ಮೂರನೇ ಪಂದ್ಯದಲ್ಲೂ ವಿಶ್ರಾಂತಿ ಪಡೆದ ಕಾರಣ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದರು.
ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಕಿಡಿ ಕಾರಿದರು. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ತಮ್ಮ ಪ್ರವಾಸದ ಸಮಯದಲ್ಲಿ ಪ್ರಯಾಣದ ವ್ಯವಸ್ಥೆಗಳು ಮತ್ತು ಲಗೇಜ್ ಸಮಸ್ಯೆಗಳಂತಹ ಮೂಲಭೂತ ಅವಶ್ಯಕತೆಗಳನ್ನು ನಿರ್ಲಕ್ಷಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಭಾರತ ಕ್ರಿಕೆಟ್ ತಂಡದ ಆಟಗಾರರ ಪ್ರಯಾಣಕ್ಕೂ ತೊಂದರೆಯಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಸರಿಪಡಿಸಬಹುದು ಎಂದು ಪಾಂಡ್ಯ ಭರವಸೆ ವ್ಯಕ್ತಪಡಿಸಿದರು. ನಮಗೆ ಐಷಾರಾಮಿ ಸೌಲಭ್ಯಗಳು ಬೇಕು ಎಂದು ಕೇಳುತ್ತಿಲ್ಲ, ಆದರೆ ಮೂಲಭೂತ ಅವಶ್ಯಕತೆಗಳನ್ನು ನೋಡಿಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
"ಇದು ನಾವು ಆಡಿದ ಉತ್ತಮ ಮೈದಾನಗಳಲ್ಲಿ ಒಂದಾಗಿದೆ. ನಾವು ಮುಂದಿನ ಬಾರಿ ವೆಸ್ಟ್ ಇಂಡೀಸ್‌ಗೆ ಬಂದಾಗ ಎಲ್ಲವೂ ಉತ್ತಮವಾಗಬಹುದು. ಪ್ರಯಾಣದಂತಹ ವಿಷಯಗಳ ಬಗ್ಗೆ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಗಮನಿಸಬಹುದು ಮತ್ತು ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು." ಎಂದು ಪಂದ್ಯದ ನಂತರದ ಹಾರ್ದಿಕ್ ಪಾಂಡ್ಯ ಹೇಳಿದರು.
ಅಸಮಾಧಾನಕ್ಕೆ ಕಾರಣವೇನು?
ಟ್ರಿನಿಡಾಡ್‌ನಿಂದ ಬಾರ್ಬಡೋಸ್‌ಗೆ ತೆರಳುವ ಸಂದರ್ಭದಲ್ಲಿ ತಡರಾತ್ರಿಯ ವಿಮಾನದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ವಿಳಂಬವಾದ ನಂತರ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಬಿಸಿಸಿಐಗೆ ತಮ್ಮ ಅಸಮಾಧಾನದ ಬಗ್ಗೆ ತಿಳಿಸಿದ್ದರು. ಈ ವಿಳಂಬದಿಂದಾಗಿ ಆಟಗಾರರು ಏಕದಿನ ಸರಣಿಯ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ನಿದ್ರೆಯಿಂದ ವಂಚಿತರಾಗಿದ್ದರು. ಹಿರಿಯ ಆಟಗಾರರು ಬಿಸಿಸಿಐಗೆ ನಿರ್ದಿಷ್ಟ ವಿನಂತಿಯನ್ನು ಮಾಡಿದರು, ಪಂದ್ಯಗಳ ನಡುವೆ ಕನಿಷ್ಠ ಸಮಯವಿದ್ದಾಗ ತಡರಾತ್ರಿಯ ವಿಮಾನಗಳನ್ನು ನಿಗದಿಪಡಿಸುವುದನ್ನು ತಪ್ಪಿಸುವಂತೆ ಕೇಳಿದ್ದರು.
ಏಕದಿನ ಸರಣಿ ಗೆದ್ದ ಭಾರತ
ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದರು, ಭಾರತ ಈ ಪಂದ್ಯದಲ್ಲಿ ಸೋತ ಬಳಿಕ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಕೊಹ್ಲಿ, ರೋಹಿತ್ ಶರ್ಮಾರಿಗೆ ವಿಶ್ರಾಂತಿ ನೀಡಿದ್ದಕ್ಕೆ ಟೀಕೆಗಳು ಕೇಳಿಬಂದವು. ಆದರೆ ಮೂರನೇ ಪಂದ್ಯದಲ್ಲೂ ಕೋಚ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಪ್ರಯೋಗಕ್ಕೆ ಮುಂದಾದರು.
ಸರಣಿ ನಿರ್ಣಾಯಕ ಪಂದ್ಯದಲ್ಲೂ ಯುವ ಪಡೆ ಕಣಕ್ಕಿಳಿಯಿತು, ಕೊಹ್ಲಿ, ರೋಹಿತ್ ವಿಶ್ರಾಂತಿ ಪಡೆದರು. ಆದರೂ ಭಾರತ ತಂಡ 200 ರನ್‌ಗಳ ಭರ್ಜರಿ ಹೆಲುವು ಸಾಧಿಸಿತು. ವೇಗಿಗಳಾದ ಮುಖೇಶ್ ಕುಮಾರ್ ಮತ್ತು ಶಾರ್ದೂಲ್ ಠಾಕೂರ್ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 351 ರನ್ ಕಲೆಹಾಕಿತು. ಇಶಾನ್ ಕಿಶನ್ 77 ರನ್ ಗಳಿಸಿದರೆ, ಶುಭಮನ್ ಗಿಲ್ 85 ರನ್ ಗಳಿಸಿದರು. ಸಂಜು ಸ್ಯಾಮ್ಸನ್ 51, ನಾಯಕ ಹಾರ್ದಿಕ್ ಪಾಂಡ್ಯ 70 ರನ್ ಗಳಿಸಿ ಭಾರತ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು.
ಈ ಮೊತ್ತವನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ 151 ರನ್‌ಗಳಿಗೆ ಆಲೌಟ್ ಆಯಿತು. ಶಾರ್ದೂಲ್ ಠಾಕೂರ್ 4 ವಿಕೆಟ್ ಪಡೆದರೆ, ಮುಖೇಶ್ ಕುಮಾರ್ 3 ವಿಕೆಟ್ ಪಡೆದರು. ಕುಲದೀಪ್ ಯಾದವ್ 2 ಮತ್ತು ಜಯದೇವ್ ಉನದ್ಕತ್ 1 ವಿಕೆಟ್ ಪಡೆದರು. ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸತತವಾಗಿ 16 ದ್ವಿಪಕ್ಷೀಯ ಸರಣಿಗಳನ್ನು ಗೆದ್ದ ಸಾಧನೆ ಮಾಡಿದೆ.












Click it and Unblock the Notifications