Ind vs WI T20: ಸೋಲುವುದು ಕೆಲವೊಮ್ಮೆ ಒಳ್ಳೆಯದು! ಸರಣಿ ಸೋತ ಬಳಿಕ ಪಾಂಡ್ಯ ಹೀಗಂದಿದ್ದೇಕೆ?
ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯನ್ನು ಭಾರತ ಕಳೆದುಕೊಂಡಿದೆ. ಇದೇ ಮೊದಲ ಭಾರಿಗೆ ವೆಸ್ಟ್ ಇಂಡೀಸ್ ಭಾರತದ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು 3-2 ಅಂತರದಲ್ಲಿ ಗೆದ್ದುಕೊಂಡಿದೆ. ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದ ಭಾರತ ನಂತರದ ಎರಡು ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಸರಣಿ ಗೆಲ್ಲುವ ಉತ್ಸಾಹದಲ್ಲಿತ್ತು. ಆದರೆ ಕೊನೆಯ ಪಂದ್ಯದಲ್ಲಿ ಸೋಲುವ ಮೂಲಕ ಸರಣಿ ಕಳೆದುಕೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ ಜೈಸ್ವಾಲ್, ಶುಭಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸೂರ್ಯಕುಮಾರ್ ಯಾದವ್ 45 ಎಸೆತಗಳಲ್ಲಿ 61 ರನ್, ತಿಲಕ್ ವರ್ಮಾ 18 ಎಸೆತಗಳಲ್ಲಿ 27 ರನ್ ಗಳಿಸುವ ಮೂಲಕ ಭಾರತ ಸವಾಲಿನ ಮೊತ್ತ ಗಳಿಸುವಲ್ಲಿ ಸಹಾಯ ಮಾಡಿದರು.
20 ಓವರ್ ಗಳಲ್ಲಿ ಭಾರತ 9 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್, 18 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ಬ್ರಾಂಡನ್ ಕಿಂಗ್ 55 ಎಸೆತಗಳಲ್ಲಿ 85 ರನ್ ಗಳಿಸಿದರೆ, ನಿಕೋಲಸ್ ಪೂರನ್ 47 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸೋಲುವುದು ಪರವಾಗಿಲ್ಲ ಎಂದ ಪಾಂಡ್ಯ
ಪಂದ್ಯದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, "ನಾನು ನಿಧಾನಗತಿಯಲ್ಲಿ ರನ್ ಗಳಿಸಿದ್ದು ಕೂಡ ಹಿನ್ನಡೆಗೆ ಕಾರಣವಾಯಿತು, 10 ಓವರ್ ಗಳ ಬಳಿಕ ಉತ್ತಮವಾಗಿ ರನ್ ಗಳಿಸಲಿಲ್ಲ" ಎಂದು ಹೇಳಿದರು.
"ತಂಡವಾಗಿ ನಾವು ನಮಗೆ ಸವಾಲು ಹಾಕಿಕೊಳ್ಳಬೇಕು ಎಂದು ನಾನು ನಂಬುತ್ತೇನೆ. ಈ ಎಲ್ಲಾ ಪಂದ್ಯಗಳಿಂದ ನಾವು ಕಲಿಯಬೇಕಾದದ್ದು ಇದೆ. ಕಷ್ಟದ ಸಂದರ್ಭದಲ್ಲಿ ತಂಡವಾಗಿ ಆಡಬೇಕು, ಒಂದು ಸರಣಿ ಕಳೆದುಕೊಂಡರೆ ಪರವಾಗಿಲ್ಲ ಆದರೆ ಗುರಿಗೆ ಬದ್ಧತೆ ಮುಖ್ಯ" ಎಂದು ಹೇಳಿದರು.
ಏಕದಿನ ವಿಶ್ವಕಪ್ ಬರುತ್ತಿದೆ. ಮತ್ತು ಕೆಲವೊಮ್ಮೆ ಸೋಲುವುದು ಒಳ್ಳೆಯದು. ಸೋಲಿನಿಂದ ನೀವು ಬಹಳಷ್ಟು ಕಲಿಯುವಿರಿ. ಎಲ್ಲಾ ಟಗಾರರು ಉತ್ತಮವಾಗಿ ಆಡಿದರು. ಸೋಲು ಗೆಲುವು ಆಟದ ಒಂದು ಭಾಗವಾಗಿದೆ. ಸೋಲಿನಿಂದ ನಾವು ಮತ್ತಷ್ಟು ಕಲಿಯುತ್ತೇನೆ ಎಂದು ನಂಬಿದ್ದೇನೆ ಎಂದು ಪಾಂಡ್ಯ ಹೇಳಿದರು.
ಆಗಸ್ಟ್ 18ರಿಂದ ಭಾರತ ತಂಡ ಮೂರು ಪಂದ್ಯ ಟಿ20 ಸರಣಿಯನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ನಾಯಕ ಹಾರ್ದಿಕ್ ಪಾಂಡ್ಯ ಈ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದು ವೇಗಿ ಜಸ್ಪ್ರೀತ್ ಬುಮ್ರಾ ಸರಣಿಯ ನಾಯಕತ್ವ ವಹಿಸಿಕೊಳ್ಳಿದ್ದಾರೆ. ಹಲವು ಹೊಸ ಆಟಗಾರರಿಗೂ ಅವಕಾಶ ಮಾಡಿಕೊಡಲಾಗಿದೆ.












Click it and Unblock the Notifications