GT vs MI: ಕನ್ನಡಿಗನ ಮಾರಕ ಬೌಲಿಂಗ್; ಮುಂಬೈ ಇಂಡಿಯನ್ಸ್‌ಗೆ ಸತತ ಎರಡನೇ ಸೋಲು
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 9ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 36 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಸರಣಿ ಮುಂದುವರೆಸಿದೆ. ಈವರೆಗೆ ಮುಂಬೈ ಇಂಡಿಯನ್ಸ್ ಅಹಮಾದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 4 ಪಂದ್ಯಗಳನ್ನಾಡಿದ್ದು 4 ಪಂದ್ಯಗಳಲ್ಲಿ ಸೋಲು ಕಂಡಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು. ಆರಂಭಿಕ ಆಟಗಾರ ಸಾಯಿ ಸುದರ್ಶನ್ ಈ ಐಪಿಎಲ್‌ನಲ್ಲಿ ಸತತ ಎರಡನೇ ಅರ್ಧಶತಕ ಗಳಿಸಿ ಮಿಂಚಿದರು. 41 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ 63 ರನ್ ಗಳಿಸಿದರು.

ನಾಯಕ ಶುಭಮನ್ ಗಿಲ್ 38 ರನ್ ಗಳಿಸಿದರೆ, ಜೋಸ್ ಬಟ್ಲರ್ 24 ಎಸೆತಗಳಲ್ಲಿ 39 ರನ್ ಗಳಿಸಿದರು. ಶೆರ್ಫಾನೆ ರುಥರ್ ಫೊರ್ಡ್ 18 ರನ್ ಗಳಿಸಿದರೆ ಉಳಿದ ಬ್ಯಾಟರ್ ಗಳಿಂದ ಹೆಚ್ಚಿನ ಕೊಡುಗೆ ಬರಲಿಲ್ಲ. ಆದರೂ ಗುಜರಾತ್ ಟೈಟಾನ್ಸ್ ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಕನ್ನಡಿಗನ ಮಾರಕ ಬೌಲಿಂಗ್
ಈ ಸವಾಲಿನ ಮೊತ್ತ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ಗೆ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದರು. ಮೊದಲ ಓವರ್ ನಲ್ಲೇ ರೋಹಿತ್ ಶರ್ಮಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮತ್ತೊಬ್ಬ ಆರಂಭಿಕ ಆಟಗಾರ ರಿಯಾನ್ ರಿಕಲ್‌ಸ್ಟನ್ ಅವರನ್ನೂ ಬೌಲ್ಡ್ ಮಾಡುವ ಮೂಲಕ ಎರಡನೇ ಆಘಾತ ನೀಡಿದರು. ತಿಲಕ್ ವರ್ಮಾ 36 ಎಸೆತಗಳಲ್ಲಿ 39 ರನ್, ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 48 ರನ್ ಗಳಿಸುವ ಮೂಲಕ ಹೋರಾಟ ನೀಡಿದರೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಮಾರಕ ಬೌಲಿಂಗ್ ಮೂಲಕ ಇವರಿಬ್ಬರನ್ನೂ ಔಟ್ ಮಾಡಿದರು.
ರಶೀದ್ ಖಾನ್ ಕೂಡ ಮುಂಬೈ ಇಂಡಿಯನ್ಸ್‌ಗೆ ರನ್ ಗಳಿಸಲು ಅವಕಾಶ ನೀಡಲೇ ಇಲ್ಲ. 2 ಓವರ್ ಗಳಲ್ಲಿ 10 ರನ್ ಬಿಟ್ಟುಕೊಟ್ಟರು. ಪ್ರಸಿದ್ಧ್ ಕೃಷ್ಣ 4 ಓವರ್ ಗಳಲ್ಲಿ ಕೇವಲ 18 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಗುಜರಾತ್ ಟೈಟಾನ್ಸ್ ಕಡೆ ತಿರುಗಿಸಿದರು. ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 11 ರನ್‌ಗಳಿಂದ ಸೋತಿದ್ದ ಗುಜರಾತ್ ಟೈಟಾನ್ಸ್ ಎರಡನೇ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಿಸಿದೆ. ಮುಂಬೈ ಇಂಡಿಯನ್ಸ್ ಕಳೆದ ಆವೃತ್ತಿಯ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದು ಈ ಆವೃತ್ತಿಯಲ್ಲೂ ಸತತವಾಗಿ ಎರಡನೇ ಸೋಲು ಅನುಭವಿಸಿದೆ. ಗುಜರಾತ್ ಟೈಟಾನ್ಸ್ ಏಪ್ರಿಲ್ 2ರಂದು ನಡೆಯುವ ಮುಂದಿನ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಆಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.












Click it and Unblock the Notifications