ಆಂಧ್ರ ಪ್ರದೇಶ ಅನಕಪಲ್ಲಿಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ; 8 ಕಾರ್ಮಿಕರು ಸಾವು
ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಪಟಾಕಿ ಉತ್ಪಾದನಾ ಘಟಕದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಎಂಟು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆಘಾತ ವ್ಯಕ್ತಪಡಿಸಿದ್ದು, ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಜನರು ಬೆಂಕಿಯ ಅಪಘಾತದಲ್ಲಿ ಮೃತಪಟ್ಟಿದ್ದು, ಏಳು ಜನರು ಗಾಯಗೊಂಡಿದ್ದಾರೆ, ಎಂದು ಆಂಧ್ರಪ್ರದೇಶ ಗೃಹ ಸಚಿವೆ ವಿ ಅನಿತಾ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ಹೇಳಿದರು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುವುದಾಗಿ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ
ಈ ದುರ್ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ಕಾರ್ಖಾನೆ ಅಪಘಾತದಲ್ಲಿ ಸಂಭವಿಸಿದ ಸಾವು ನೋವುಗಳಿಂದ ಪ್ರಧಾನಿ ಮೋದಿ ತೀವ್ರ ದುಃಖಿತರಾಗಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಮೃತರ ಹತ್ತಿರದ ಸಂಬಂಧಿಕರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) 2 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಲಾಗಿದೆ.
ಘಟನೆಯ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಜಿಲ್ಲಾಧಿಕಾರಿ, ಎಸ್‌ಪಿ ಮತ್ತು ಗೃಹ ಸಚಿವೆ ಅನಿತಾ ಅವರೊಂದಿಗೆ ಘಟನೆಯ ಬಗ್ಗೆ ಮಾತನಾಡಿದ್ದು, ವಿವರವಾದ ವರದಿಯನ್ನು ಸಲ್ಲಿಸಲು ಸೂಚನೆ ಕೊಟ್ಟಿದ್ದಾರೆ.
ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಜಿಲ್ಲಾಧಿಕಾರಿ, ಎಸ್‌ಪಿ ಮತ್ತು ಗೃಹ ಸಚಿವೆ ಅನಿತಾ ಅವರೊಂದಿಗೆ ಘಟನೆಯ ಬಗ್ಗೆ ಮಾತನಾಡಿದ್ದೇನೆ ಮತ್ತು ಅಪಘಾತದಲ್ಲಿ ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಸೇವೆಗಳನ್ನು ನೀಡುವಂತೆ ಆದೇಶ ಕೊಟ್ಟಿದ್ದೇನೆ. ಅಪಘಾತದ ಸಮಯದಲ್ಲಿ ಕಾರ್ಖಾನೆಯಲ್ಲಿದ್ದ ಕಾರ್ಮಿಕರ ಸಂಖ್ಯೆ ಮತ್ತು ಅವರ ಪ್ರಸ್ತುತ ಸ್ಥಿತಿಯ ಬಗ್ಗೆ ನಾನು ವಿಚಾರಿಸಿದೆ. ಸಂತ್ರಸ್ತ ಕುಟುಂಬಗಳಿಗೆ ನಾವು ಬೆಂಬಲ ನೀಡುತ್ತೇವೆ. ಧೈರ್ಯದಿಂದ ಇರಬೇಕೆಂದು ನಾನು ಅವರನ್ನು ಒತ್ತಾಯಿಸುತ್ತೇನೆ. ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ." ಎಂದು ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಬೆಂಕಿ ಅವಘಡದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.












Click it and Unblock the Notifications