Duleep Trophy: ಮೊದಲ ದಿನ ಮಿಂಚಿದ ವಿಜಯ್‌ಕುಮಾರ್ ವೈಶಾಖ್, ಮುಶೀರ್ ಖಾನ್
ದುಲೀಪ್ ಟ್ರೋಫಿ ಪಂದ್ಯಾವಳಿಗೆ ಇಂದಿನಿಂದ ಚಾಲನೆ ಸಿಕ್ಕಿದೆ. ಇಂಡಿಯಾ ಎ vs ಇಂಡಿಯಾ ಬಿ ಹಾಗೂ ಇಂಡಿಯಾ ಸಿ vs ಇಂಡಿಯಾ ಡಿ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಮೊದಲ ದಿನವೇ ಇಂಡಿಯಾ ಸಿ ತಂಡದ ಪರವಾಗಿ ಕನ್ನಡಿಗೆ ವಿಜಯ್‌ಕುಮಾರ್ ವೈಶಾಖ್ ಮಿಂಚಿದರೆ, ಇಂಡಿಯಾ ಬಿ ತಂಡಕ್ಕೆ ಮುಶೀರ್ ಖಾನ್ ಆಸರೆಯಾಗಿದ್ದು, ಮೊದಲ ದಿನ ಗೌರವಯುತ ಮೊತ್ತ ಕಲೆಹಾಕಿದೆ.
ಇಂಡಿಯಾ ಡಿ ವಿರುದ್ಧದ ಪಂದ್ಯದಲ್ಲಿ ಇಂಡಿಯಾ ಸಿ ತಂಡದ ಬೌಲರ್ ವಿಜಯ್ ಕುಮಾರ್ ವೈಶಾಖ್ ಮಿಂಚಿದರು. ಪ್ರಮುಖ ಮೂರು ವಿಕೆಟ್ ಪಡೆಯುವ ಮೂಲಕ ಇಂಡಿಯಾ ಡಿ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 164 ರನ್‌ಗಳಿಗೆ ಆಲೌಟ್ ಆಗಿದೆ. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಡಿಯಾ ಸಿ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 91 ರನ್ ಗಳಿಸಿದೆ.

ಮುಶೀರ್ ಖಾನ್ ಆಸರೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯಾ ಎ vs ಇಂಡಿಯಾ ಬಿ ತಂಡದ ನಡುವಿನ ಪಂದ್ಯದಲ್ಲಿ ಮೊದಲ ದಿನ ಇಂಡಿಯಾ ಬಿ ತಂಡ 7 ವಿಕೆಟ್ ಕಳೆದುಕೊಂಡು 202 ರನ್ ಕಲೆಹಾಕಿದೆ. ಇಂಡಿಯಾ ಎ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. 94 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಡಿಯಾ ಬಿ ತಂಡಕ್ಕೆ ಮುಶೀರ್ ಖಾನ್ ಆಸರೆಯಾದರು. ಮುಶೀರ್ ಖಾನ್ ಮತ್ತು ನವದೀಪ್ ಸೈನಿ 8 ನೇ ವಿಕೆಟ್‌ಗೆ 108 ರನ್‌ಗಳ ಜೊತೆಯಾಟದ ಮೂಲಕ ನೆರವಾದರು. ಮುಶೀರ್ ಖಾನ್ ಅಜೇಯ 105 ರನ್ ಗಳಿಸಿದ್ದು, ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ನವದೀಪ್ ಸೈನಿ ಅಜೇಯ 29 ರನ್ ಗಳಿಸಿದ್ದಾರೆ. ಇಂಡಿಯಾ ಎ ಪರವಾಗಿ ಖಲೀಲ್ ಅಹ್ಮದ್, ಆಕಾಶ್ ದೀಪ್ ಮತ್ತು ಆವೇಶ್ ಖಾನ್ ತಲಾ 2 ವಿಕೆಟ್ ಗಳಿಸಿದರು.
ವೈಶಾಖ್, ಅಕ್ಷರ್ ಮಿಂಚು
ಇಂಡಿಯಾ ಡಿ ಮತ್ತು ಇಂಡಿಯಾ ಸಿ ನಡುವಿನ ಮತ್ತೊಂದು ಪಂದ್ಯದಲ್ಲಿ ಇಂಡಿಯಾ ಸಿ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಂಡಿಯಾ ಡಿ ಮೊದಲ ದಿನವೇ 164 ರನ್ ಗಳಿಸಿ ಆಲೌಟ್ ಆಯಿತು. ಅಕ್ಷರ್ ಪಟೇಲ್ 118 ಎಸೆತಗಳಲ್ಲಿ 86 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ದೇವದತ್ ಪಡಿಕ್ಕಲ್, ಶ್ರೇಯಸ್ ಅಯ್ಯರ್, ಯಶ್ ದುಬೆ, ಅಥರ್ವ ಟೈಡೆ, ಎಸ್ ಭರತ್ ಬ್ಯಾಟಿಂಗ್‌ನಲ್ಲಿ ವಿಫಲವಾದರು.
ವಿಜಯ್‌ಕುಮಾರ್ ವೈಶಾಖ್ 3 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಹಿಮಾಂಶು ಚೌಹಾನ್ ಮತ್ತು ಅನ್ಶುಲ್ ಕಾಂಬೋಜ್ ತಲಾ ಎರಡು ವಿಕೆಟ್ ಪಡೆದರು. ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಡಿಯಾ ಸಿ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 91 ರನ್ ಕಲೆಹಾಕಿದೆ.












Click it and Unblock the Notifications