ಭಾರತದ ಬೌಲರ್‌ಗಳ ಅಬ್ಬರಕ್ಕೆ ‘ಲಂಕೆ’ ಉಡೀಸ್!
ಭಾರತದ ಬೌಲರ್‌ಗಳು ಮತ್ತೊಮ್ಮೆ 2023 ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಬಲ ತೋರಿಸಿದ್ದಾರೆ. ಭಾರತದ ವಿರುದ್ಧ ಮ್ಯಾಚ್ ಆಡಿದ ಶ್ರೀಲಂಕಾಗೆ ಆಟದ ಪಾಠವನ್ನು ಮಾಡಿದ್ದಾರೆ. ಭಾರತ ನೀಡಿದ್ದ 358 ರನ್‌ಗಳ ಬೃಹತ್ ಗುರಿ ಬೆನ್ನುಹತ್ತಿದ ಶ್ರೀಲಂಕಾ ಟೀಂ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಡ್ಡಡ್ಡ, ಉದ್ದದ ಮಕಾಡೆ ಮಲಗಿದೆ. ಹಾಗಾದರೆ ಹೇಗಿತ್ತು ಇಬ್ಬರ ನಡುವೆ ಸೆಣೆಸಾಟ? ಶ್ರೀಲಂಕಾ ಇಷ್ಟು ಹೀನಾಯವಾಗಿ ಸೋತಿದ್ದು ಏಕೆ?
1996ರಲ್ಲಿ ಭಾರತದಲ್ಲೇ ವಿಶ್ವಕಪ್ ಆಡಿ, ಗೆದ್ದು ಬೀಗಿದ್ದ ಮಾಜಿ ಚಾಂಪಿಯನ್ ಶ್ರೀಲಂಕಾ ಈ ಬಾರಿ ಹೀನಾಯ ಪ್ರದರ್ಶನ ನೀಡಿದೆ. ಕ್ರಿಕೆಟ್ ಶಿಶುಗಳ ಎದುರಲ್ಲೂ ಶ್ರೀಲಂಕಾ ತಂಡ ಈ ಬಾರಿ ಭೀಕರ ಸೋಲು ಕಂಡಿತ್ತು. ಹೀಗಿದ್ದಾಗ ಇಂದು ಬಲಿಷ್ಠ ಭಾರತದ ಎದುರು ಈ ಸಿಂಹಳಿಯರ ತಂಡ ಹೋರಾಟಕ್ಕೆ ಬಂದಿತ್ತು. ಆದರೆ ಸಿಕ್ಕಿದ್ದು ಏನು ಗೊತ್ತಾ? ಹೀನಾಯ ಸೋಲು ಕಣ್ರೀ! ಭಾರತ ತಂಡದ ವಿರುದ್ಧ ಗೆಲುವು ಸಾಧಿಸಿ, ಸೆಮಿಫೈನಲ್ ಸೇರುವ ಆಸೆ ಜೀವಂತವಾಗಿ ಇರಿಸಿಕೊಳ್ಳುವ ವಿಶ್ವಾಸದಲ್ಲಿದ್ದ ಶ್ರೀಲಂಕಾ ತಂಡಕ್ಕೆ ಭಾರತ ತಂಡ ಇದೀಗ ಸೋಲಿನ ಪಾಠ ಕಲಿಸಿದೆ.

ಶ್ರೀಲಂಕಾ ಬ್ಯಾಟಿಂಗ್ = ಲ್ಯಾಂಡ್‌ಲೈನ್ ನಂಬರ್?
ಅಂದಹಾಗೆ ಭಾರತ ನೀಡಿದ್ದ ಬೃಹತ್ ಗುರಿಯನ್ನು ಬೆನ್ನುಹತ್ತಲು ಬಂದ ಶ್ರೀಲಂಕಾ ಟೀಂ ದಾಂಡಿಗರು, ಒಬ್ಬರ ನಂತರ ಒಬ್ಬರು ಪೆವಿಲಿಯನ್ ಪರೇಡ್ ನಡೆಸಿದರು. ಹೀಗೆ ಲಂಕಾ ತಂಡ ಹೀನಾಯ ಸೋಲು ಕಂಡಿತು. ಇನ್ನು ಲಂಕಾ ಬ್ಯಾಟ್ಸ್‌ಮನ್‌ಗಳು ಗಳಿಸಿದ ಸ್ಕೋರ್ ನೋಡುವುದಾದರೆ, ಆರಂಭಿಕರಾಗಿ ಬಂದಿದ್ದ ಪಾತುಮ್ ನಿಸಾಂಕ & ದಿಮುತ್ ಕರುಣರತ್ನೆ ಸೊನ್ನೆ ಸುತ್ತಿ ಡಕ್ ಔಟ್ ಬಿರುದು ಪಡೆದು ಹೋದರು. ನಂತರ ಬಂದ ಆಟಗಾರರು ಈ ಆಟಗಾರರನ್ನೇ ಫಾಲೋ ಮಾಡಿ ಗೂಡು ಸೇರಿದರು.
ಹೇಗಿತ್ತು ಶ್ರೀಲಂಕಾ ಸ್ಕೋರ್ ಬೋರ್ಡ್?
ಹೀಗೆ ಶ್ರೀಲಂಕಾ ತಂಡದ ಮೊದಲ ಬ್ಯಾಟ್ಸ್‌ಮನ್‌ನಿಂದ ಹಿಡಿದು ಕೊನೆಯ ತನಕ ಸ್ಕೋರ್ ನೋಡುವುದಾದರೆ, 0, 0, 1, 0, 1, 12, 0, 0, 12, 14, 5 ಆಗಿತ್ತು. ಈ ಮೂಲಕ ಭಾರತ ನೀಡಿದ್ದ 358 ರನ್ ಬೃಹತ್ ಗುರಿ ಬೆನ್ನುಹತ್ತಿದ ಲಂಕಾ ತಂಡ, ಕೇವಲ 55 ರನ್ ಗಳಿಸಿ ಆಲೌಟ್ ಆಗಿ ವಿಶ್ವಕಪ್ ಅಖಾಡದಿಂದ ಮನೆ ಕಡೆಗೆ ಹೆಜ್ಜೆ ಹಾಕಿದೆ. ಹಾಗೇ ಭಾರತ ತಂಡ 302 ರನ್‌ಗಳ ಬೃಹತ್ ಅಂತರದ ಗೆಲುವು ದಾಖಲಿಸಿ, ಈಗ ಅಧಿಕೃತವಾಗಿ ಸೆಮೀಸ್ ಅಖಾಡದಲ್ಲಿ ತನ್ನ ಸ್ಥಾನ ಗ್ಯಾರಂಟಿ ಮಾಡಿಕೊಂಡಿದೆ.
ಕೊಹ್ಲಿ ಸೆಂಚ್ಯುರಿ ಮಿಸ್ ಆಯ್ತು!
ಮೊದಲ ಇನ್ನಿಂಗ್ಸ್‌ನಲ್ಲಿ, ಭಾರತ ಗುಡ್ ಸ್ಕೋರ್ ಮಾಡಲು ಹಲವರು ಸಾಥ್ ನೀಡಿದರು. ಲಂಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಭಾರತಕ್ಕೆ, ನಾಯಕ ರೋಹಿತ್ ಶರ್ಮಾ ಮೊದಲ ಆಘಾತ ನೀಡಿದರು. ಕೇವಲ 4 ರನ್‌ಗೆ ರೋಹಿತ್ ಔಟ್ ಆಗಿ ಪೆವಿಲಿಯನ್ ಸೇರಿದ್ರು. ಹೀಗಿದ್ದಾಗ ಗಿಲ್ & ವಿರಾಟ್ ಕೊಹ್ಲಿ ಜೋಡಿ ಒಂದಾಗಿ ಶ್ರೀಲಂಕಾ ಬೌಲಿಂಗ್ ದಾಳಿ ಚಚ್ಚಿ ಬಿಸಾಡಿತು. ಆದರೆ ಅತ್ಯುತ್ತಮವಾಗಿ ಆಟ ಆಡುತ್ತಿದ್ದ ಗಿಲ್ ಅವರು, ಕೆಟ್ಟ ಹೊಡೆತಕ್ಕೆ ಕೈಹಾಕಿ 92 ರನ್ ಗಳಿಸಿದ್ದಾಗ ಔಟ್ ಆಗಿ ಪೆವಿಲಿಯನ್ ಸೇರಿದರು. ಇನ್ನ ಈ ಆಘಾತ ಎದುರಾದ ಕೆಲವೇ ಕ್ಷಣಗಳಲ್ಲಿ, ವಿರಾಟ್ ಕೊಹ್ಲಿ ಔಟ್ ಆಗಿ ಶತಕ ವಂಚಿತರಾದರು.

ಭಾರತದ ಬ್ಯಾಟ್ಸ್‌ಮನ್‌ಗಳ ಅಬ್ಬರ ಜೋರು
ಹೀಗೆ ವಿರಾಟ್ ಕೊಹ್ಲಿ, ಗಿಲ್ ಔಟಾದ ಬಳಿಕ ಶ್ರೇಯಸ್ ಅಯ್ಯರ್ ಭಾರತ ತಂಡಕ್ಕೆ ಆಸರೆಯಾಗಿ ನಿಂತರು. ಕೇವಲ 56 ಬಾಲ್ ಆಡಿದ ಶ್ರೇಯಸ್ ಅಯ್ಯರ್, 82 ರನ್ ಬಾರಿಸಿ ಲಂಕಾಗೆ ಆಘಾತ ನೀಡಿದರು. 3 ಬೌಂಡರಿ & 6 ಸಿಕ್ಸರ್‌ನ ಸಿಡಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಲು ಭಾರತಕ್ಕೆ ನೆರವಾದರು. ಆದ್ರೆ ಶ್ರೇಯಸ್ ಅಯ್ಯರ್‌ಗೆ ಇಂದು ಶತಕ ಸಿಡಿಸುವ ಸುವರ್ಣಾವಕಾಶ ಇತ್ತು. ಆದರೆ 82 ರನ್ ಗಳಿಸಿದ್ದಾಗ ಅಯ್ಯರ್ ಎಡವಟ್ಟು ಮಾಡಿಕೊಂಡರು.
ಹಾಗೇ, ನಂತರ ಬಂದ ರವೀಂದ್ರ ಜಡೇಜಾ 24 ಬಾಲ್‌ಗಳಲ್ಲಿ ಭರ್ಜರಿ 35 ರನ್ ಗಳಿಸಿ ಭಾರತ ತಂಡವನ್ನು 300 ರನ್ ಗಡಿಯನ್ನು ದಾಟಿಸಿದರು. ಹೀಗೆ ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಹಾಗೇ ಜಡೇಜಾ ಅವರ ನೆರವಿನಿಂದ ಭಾರತ ತಂಡ 357 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಈ ಗುರಿ ಬೆನ್ನುಹತ್ತಿದ ಲಂಕಾ 55 ರನ್‌ಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿದೆ. ಈ ಮೂಲಕ 2023ರ ಐಸಿಸಿ ಏಕದಿನ ವಿಶ್ವಕಪ್ ಅಖಾಡದಿಂದ ಲಂಕಾ ತಂಡ ಬಹುತೇಕ ಹೊರಗೆ ಬಿದ್ದಿದೆ. ಒಂದು ಕಾಲದ ಚಾಂಪಿಯನ್ ಶ್ರೀಲಂಕಾ, ಈಗ ಹೀಗೆ ಭೀಕರ ಸೋಲಿನ ಮೂಲಕ 2023ರ ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಿದಂತಾಗಿದೆ.












Click it and Unblock the Notifications