Deodhar Trophy: ಸಾಯಿ ಸುದರ್ಶನ್ ಭರ್ಜರಿ ಶತಕ: ಕೇಂದ್ರ ವಲಯದ ವಿರುದ್ಧ ಗೆದ್ದು ಬೀಗಿದ ದಕ್ಷಿಣ ವಲಯ
ದೇವಧರ್ ಟ್ರೋಫಿ ಪಂದ್ಯಾವಳಿಯಲ್ಲಿ ದಕ್ಷಿಣ ವಲಯದ ಅಜೇಯ ಓಟ ಮುಂದುವರೆದಿದೆ. ಈಗಾಗಲೇ ಫೈನಲ್ ಪ್ರವೇಶಿಸಿರುವ ದಕ್ಷಿಣ ವಲಯ ಮಂಗಳವಾರ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಕೇಂದ್ರ ವಲಯದ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದೆ.
ಪುದುಚೆರ್‍ರಿ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೇಂದ್ರ ವಲಯ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಯಶ್ ದುಬೆ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಸವಾಲಿನ ಮೊತ್ತವನ್ನೇ ಕಲೆಹಾಕಿತು.

ಆರಂಭಿಕ ಆಟಗಾರ ಶಿವಮ್ ಚೌಧರಿ 34 ರನ್ ಗಳಿಸಿದರೆ, ಯಶ್ ದುಬೆ 99 ಎಸೆತಗಳಲ್ಲಿ 77 ರನ್ ಗಳಿಸಿದರು. ಉಪೇಂದ್ರ ಯಾದವ್ 27, ರಿಂಕು ಸಿಂಗ್ 26, ಸರಂಶ್ ಜೈನ್ 23, ಶಿವಮ್ ಮಾವಿ 22 ಎಸೆತಗಳಲ್ಲಿ 38 ರನ್ ಗಳಿಸುವ ಮೂಲಕ ಕೇಂದ್ರ ವಲಯಕ್ಕೆ ಆಸರೆಯಾದರು. ಕೇಂದ್ರ ವಲಯ ಅಂತಿಮವಾಗಿ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 361 ರನ್ ಗಳಿಸಿತು.
ದಕ್ಷಿಣ ವಲಯದ ಅರ್ಜುನ್ ತೆಂಡೂಲ್ಕರ್ ಮತ್ತು ವಿ ಕೌಶಿಕ್ ತಲಾ ಎರಡು ವಿಕೆಟ್ ಪಡೆದರು. ಮೋಹಿತ್ ರೇಡ್ಕರ್ 3 ವಿಕೆಟ್ ಪಡೆದರು. ವಿಜಯ್ ಕುಮಾರ್ ವೈಶಾಖ್, ಸಿಜೋಮನ್ ತಲಾ ಒಂದು ವಿಕೆಟ್ ಪಡೆದರು.
ಸಾಯಿ ಸುದರ್ಶನ್ ಅಜೇಯ ಶತಕ
ಸವಾಲಿನ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ವಲಯಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಮಯಾಂಕ್ ಅಗರ್ವಾಲ್ ಒಂದೂ ಎಸೆತ ಎದುರಿಸದೆ ಗಾಯಗೊಂಡು ರಿಟೈರ್ಡ್ ಹರ್ಟ್ ಆಗುವ ಮೂಲಕ ಮೈದಾನದಿಂದ ಹೊರಗುಳಿದರು.
ಆದರೆ ಸಾಯಿ ಸುದರ್ಶನ್ ಅಮೋಘ ಪ್ರದರ್ಶನ ನೀಡಿದರು, 136 ಎಸೆತಗಳಲ್ಲಿ 11 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 132 ರನ್ ಗಳಿಸುವ ಮೂಲಕ ತಂಡಕ್ಕೆ 7 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು. ಆರಂಭಿಕ ಆಟಗಾರ ರೋಹನ್ ಕುಣ್ಣುಮ್ಮಲ್ 24 ರನ್ ಗಳಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ಎನ್ ಜಗದೀಶನ್ 19 ರನ್ ಗಳಿಸಿದರು, ರೋಹಿತ್ ರಾಯುಡು 37 ರನ್ ಗಳಿಸಿದರೆ, ವಾಷಿಂಗ್ಟನ್ ಸುಂದರ್ ಅಜೇಯ 43 ರನ್ ಗಳಿಸುವ ಮೂಲಕ ಸಾಯಿ ಸುದರ್ಶನ್ ಅವರಿಗೆ ಸಾಥ್ ನೀಡಿದರು.
ದೇವಧರ್ ಟ್ರೋಫಿ ಪಂದ್ಯಾವಳಿಯಲ್ಲಿ 5 ಪಂದ್ಯಗಳನ್ನಾಡಿದ ದಕ್ಷಿಣ ವಲಯ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದೆ. ಪೂರ್ವ ವಲಯ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಆಗಸ್ಟ್ 3ರಂದು ಫೈನಲ್ ಪಂದ್ಯ ನಡೆಯಲಿದೆ.












Click it and Unblock the Notifications