WPL 2025: ಕನ್ನಡತಿಯ ಜವಾಬ್ದಾರಿಯುತ ಆಟ; ಮುಂಬೈ ವಿರುದ್ಧ ರೋಚಕ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್
ಮಹಿಳಾ ಪ್ರೀಮಿಯರ್ ಲೀಗ್ 2025ರ ಆವೃತ್ತಿಯ ಆರಂಭದಲ್ಲೇ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಗೆದ್ದ ಆರ್ ಸಿಬಿ ಹೊಸ ದಾಖಲೆ ಬರೆದರೆ, ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿದೆ.
ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 19.1 ಓವರ್ ಗಳಲ್ಲಿ 164 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ನ್ಯಾಟ್ ಸಿವರ್ ಬ್ರಂಟ್ 59 ಎಸೆತಗಳಲ್ಲಿ 13 ಬೌಂಡರಿ ಸಹಿತ 80 ರನ್ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾದರು.

ನಾಯಕಿ ಹರ್ಮನ್‌ಪ್ರೀತ್ ಕೌರ್ 22 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 42 ರನ್ ಗಳಿಸಿದರು. ಇವರಿಬ್ಬರನ್ನು ಹೊರತು ಪಡಿಸಿ ಉಳಿದ ಆಟಗಾರರಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬರಲಿಲ್ಲ. ಅಂತಿಮವಾಗಿ ಮುಂಬೈ ಇಂಡಿಯನ್ಸ್ 164 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಅನಾಬೆಲ್ ಸದರ್ಲ್ಯಾಂಡ್ 3 ವಿಕೆಟ್ ಪಡೆದರೆ, ಶಿಖಾ ಪಾಂಡೆ 2 ವಿಕೆಟ್ ಪಡೆದರು. ಅಲಿಸ್ ಕ್ಯಾಪ್ಸಿ ಮತ್ತು ಮಿನ್ನು ಮಣಿ ತಲಾ ಒಂದು ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಗೆಲುವು
165 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಸ್ಫೋಟಕ ಆರಂಭ ಪಡೆಯಿತು. 5.5 ಓವರ್ ಗಳಲ್ಲೇ ಮೊದಲ ವಿಕೆಟ್‌ಗೆ ಮೆಗ್ ಲ್ಯಾನಿಂಗ್ ಮತ್ತು ಶೆಫಾಲಿ ವರ್ಮಾ 60 ರನ್ ಕಲೆಹಾಕಿದರು. ಮೆಗ್ ಲ್ಯಾನಿಂಗ್ 15 ರನ್ ಗಳಿಸಿದರೆ ಶೆಫಾಲಿ ವರ್ಮಾ 18 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್ ಸಹಿತ 43 ರನ್ ಗಳಿಸಿದರು. ಇವರಿಬ್ಬರು ಔಟಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಜೆಮಿಮಾ ರೋಡ್ರಿಗಸ್ (3 ರನ್), ಅನ್ನಾಬೆಲ್ ಸುದರ್ಲ್ಯಾಂಡ್ (13 ರನ್), ಅಲಿಸ್ ಕ್ಯಾಪ್ಸಿ (16 ರನ್) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಬಳಿಕ ಬಂದ ಕನ್ನಡತಿ ನಿಕಿ ಪ್ರಸಾದ್ 33 ಎಸೆತಗಳಲ್ಲಿ ತಾಳ್ಮೆಯ 35 ರನ್ ಗಳಿಸುವ ಮೂಲಕ ಕೊನೆಯ ಓವರ್ ವರೆಗೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ನೆರವಾದರು. ಸಾರಾ ಬ್ರೈಸ್ 10 ಎಸೆತಗಳಲ್ಲಿ 21 ರನ್ ಗಳಿಸಿ ಉತ್ತಮ ಕೊಡುಗೆ ನೀಡಿದರು. ಕೊನೆಯ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 2 ರನ್ ಬೇಕಿದ್ದಾಗ ಅರುಂಧತಿ ರೆಡ್ಡಿ ಮಿಂಚಿನ ರನ್ನಿಂಗ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.












Click it and Unblock the Notifications