DC vs LSG: ಡೆಲ್ಲಿ ಜೊತೆ ಎಲ್‌ಎಸ್‌ಜಿ ಕೂಡ ಔಟ್! ಆರ್‌ಸಿಬಿ ಅಭಿಮಾನಿಗಳು ಫುಲ್ ಖುಷ್
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 19 ರನ್‌ಗಳಿಂದ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಈ ವರ್ಷ ಐಪಿಎಲ್ ಅಭಿಯಾನವನ್ನು ಬಹುತೇಕ ಮುಗಿಸಿದೆ.
ತಾನು ಹೋಗುವುದಲ್ಲದೆ ಲಕ್ನೋ ಸೂಪರ್ ಜೈಂಟ್ಸ್ ಕೂಡ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನೊಂದಿಗೆ ರಾಜಸ್ಥಾನ ರಾಯಲ್ಸ್ ತಮ್ಮ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ.

ಕೆಕೆಆರ್ ಮತ್ತು ಆರ್ ಆರ್ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ಉಳಿದ ಎರಡು ಸ್ಥಾನಗಳಿಗೆ ಈಗ ಮೂರು ತಂಡಗಳ ನಡುವೆ ಪೈಪೋಟಿ ಶುರುವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಗೆದ್ದ ಬಳಿಕ ಆರ್ ಸಿಬಿ ಫುಲ್ ಖುಷಿಯಾಗಿದ್ದು, ಮೇ 18ರಂದು ಸಿಎಸ್‌ಕೆ ವಿರುದ್ಧ 20 ರನ್‌ಗಳಿಂದ ಗೆದ್ದರೆ ನೇರವಾಗಿ ಪ್ಲೇ ಆಫ್‌ಗೆ ಪ್ರವೇಶ ಪಡೆಯಲಿದೆ.
ಅಭಿಷೇಕ್, ಸ್ಟಬ್ಸ್ ಮಿಂಚು
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಓವರ್ ನಲ್ಲೇ ಸ್ಫೋಟಕ ಬ್ಯಾಟರ್ ಜೇಕ್ ಫ್ರೇಸರ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಅಭಿಷೇಕ್ ಪೊರೆಲ್ 33 ಎಸೆತಗಳಲ್ಲಿ 55 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಶೈ ಹೋಪ್ 27 ಎಸೆತಗಳಲ್ಲಿ 38 ರನ್ ಗಳಿಸಿದರೆ, ನಾಯಕ ಪಂತ್ 33 ರನ್ ಗಳಿಸಿದರು. ಟ್ರಿಸ್ಟನ್ ಸ್ಟಬ್ಸ್ 25 ಎಸೆತಗಳಲ್ಲಿ ಅಜೇಯ 57 ರನ್ ಗಳಿಸುವ ಮೂಲಕ ತಂಡ 200 ರನ್ ಗಡಿದಾಟಲು ಸಹಾಯ ಮಾಡಿದರು. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.
ಈ ಬೃಹತ್ ಮೊತ್ತ ಬೆನ್ನತ್ತಿದ ಲಕ್ನೋ ಸೂಪರ್ ಜೈಂಸ್ಟ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಕೆಎಲ್ ರಾಹುಲ್ 5 ರನ್, ಮಾರ್ಕಸ್ ಸ್ಟೊಯಿನಿಸ್ 5 ರನ್, ಕ್ವಿಂಟನ್ ಡಿ ಕಾಕ್ 12 ರನ್ ಗಳಿಸಿ ಔಟಾದರೆ, ದೀಪಕ್ ಹೂಡಾ ಸೊನ್ನೆಗೆ ವಿಕೆಟ್ ಒಪ್ಪಿಸಿದರು.
ನಿಕೋಲಸ್ ಪೂರನ್ 27 ಎಸೆತಗಳಲ್ಲಿ 61 ರನ್ ಗಳಿಸಿ ಹೋರಾಟ ಕೊಟ್ಟರು, ಮುಖೇಶ್ ಕುಮಾರ್ ಬೌಲಿಂಗ್‌ನಲ್ಲಿ ಔಟಾದರು. ಅರ್ಷದ್ ಖಾನ್ ಕೊನೆಯಲ್ಲಿ 33 ಎಸೆತಗಳಲ್ಲಿ ಅಜೇಯ 58 ರನ್ ಗಳಿಸುವ ಮೂಲಕ ಎಲ್‌ಎಸ್‌ಜಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರೂ, ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು. 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿದ ಎಲ್‌ಎಸ್‌ಜಿ 19 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.












Click it and Unblock the Notifications