ಶರ್ಮಿಳಾ ಧನ್ಕರ್ ಗೆದ್ದ ಚಿನ್ನದ ಪದಕದ ಹಿಂದಿದೆ ಚಿತ್ರಹಿಂಸೆಯ ಕರಾಳ ಕಥೆ, ಮನೆ ಮಾರಿ ಮಗಳ ಕನಸು ನನಸು ಮಾಡಿದ ಪೋಷಕರು
Sharmila Dhankar: ಸ್ಕಾಟ್‌ಲೆಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪದಕಗಳ ಬೇಟೆಯನ್ನು ಮುಂದುವರೆಸಿದೆ. ಇದೀಗ ಪ್ಯಾರಾ ಅಥ್ಲೆಟಿಕ್ಸ್ ಅಥ್ಲೆಟಿಕ್ಸ್ ಮಹಿಳೆಯರ ಶಾಟ್‌ಪಟ್ ವಿಭಾಗದಲ್ಲಿ ಶರ್ಮಿಳಾ ಧನ್ಕರ್ ಚಿನ್ನದ ಪದಕ ಗೆದ್ದು ಐತಿಹಾಸಿಕ ದಾಖಲೆ ಮಾಡಿದ್ದಾರೆ. ಇವರ ಈ ಸಾಧನೆ ಹಿಂದಿದೆ ಕಣ್ಣೀರಿನ ಕಥೆ.
ಮಹಿಳೆಯರ ಶೂಟ್‌ಪುಟ್ F57 ವಿಭಾಗದಲ್ಲಿ ಸ್ಪರ್ಧಿಸಿದ ಶರ್ಮಿಳಾ ಧನ್ಕರ್ ಅವರು, ತಮ್ಮ ಈ ಋತುವಿನ ಅತ್ಯುತ್ತಮ ಸಾಧನೆಯಾದ 9.81 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪ್ರಥಮ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೊನೆಗೂ 20 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ
ಶರ್ಮಿಳಾ ಅವರ ಈ ಗೆಲುವಿನೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಪದಕಕ್ಕಾಗಿ ಭಾರತ ಎದುರುನೋಡುತ್ತಿದ್ದ 20 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯವಾಡಿದಂತಾಗಿದೆ. ಇದಕ್ಕೂ ಮೊದಲು 2006ರ ಪುರುಷರ ಸೀಟೆಡ್ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ರಂಜಿತ್ ಕುಮಾರ್ ಜಯಶೀಲನ್ ಪದಕ ಗೆದ್ದಿದ್ದೇ ಕೊನೆಯ ಸಾಧನೆಯಾಗಿತ್ತು. ಇನ್ನೂ F57 ವಿಭಾಗವು ಕಾಲುಗಳ ವೈಫಲ್ಯ, ಅಂಗವಿಕಲತೆ ಅಥವಾ ಸ್ನಾಯುಬಲದ ಕೊರತೆ ಇರುವ ಅಥ್ಲೀಟ್‌ಗಳ ಸ್ಪರ್ಧೆಯಾಗಿದೆ.
ಶರ್ಮಿಳಾ ಅವರ ಈ ಸ್ವರ್ಣ ಪದಕದ ಜಯದ ಹಿಂದೆ ತೀವ್ರ ನೋವು, ಶೋಷಣೆ ಮತ್ತು ಅಪ್ರತಿಮ ಆತ್ಮವಿಶ್ವಾಸದ ಕಥೆಯೊಂದಿದೆ. ಹರಿಯಾಣದ ಮಹೇಂದ್ರಗಢದ ಬಡ ಕುಟುಂಬದಲ್ಲಿ ಜನಿಸಿದ ಶರ್ಮಿಳಾ ಅವರಿಗೆ ಬಾಲ್ಯದಿಂದಲೇ ಆರ್ಥಿಕ ಸಂಕಷ್ಟಗಳು ಬೆನ್ನತ್ತಿದ್ದವು. ಬಡತನದಿಂದಾಗಿ ಅವರಿಗೆ ಸಾಧನೆ ಮಾಡಲು ಸೂಕ್ತ ಅವಕಾಶಗಳು ಸಿಗದಿದ್ದರೂ, ಕ್ರೀಡೆಯ ಮೂಲಕ ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಬೇಕೆಂಬ ಕನಸು ಅವರಲ್ಲಿ ಜೀವಂತವಾಗಿತ್ತು.
ಶರ್ಮಿಳಾ ಅವರ ಕರಾಳ ದಿನಗಳು
ಅನಾರೋಗ್ಯದ ಕಾರಣದ ಹಿನ್ನೆಲೆಯಲ್ಲಿ ಶರ್ಮಿಳಾ ದೈಹಿಕ ಅಂಗವಿಕಲತೆಗೆ ಒಳಗಾದರು. ಆದರೆ ಅವರ ನಿಜವಾದ ಕಷ್ಟಗಳು ಪ್ರಾರಂಭವಾಗಿದ್ದು ಮೊದಲ ಮದುವೆಯ ನಂತರ. ಮೊದಲ ಗಂಡನ ಮನೆಯಲ್ಲಿ ಹಿಂಸೆಗೆ ಒಳಗಾದ ಶರ್ಮಿಳಾ, ಒಮ್ಮೆ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಸತತವಾಗಿ ಪೆಟ್ಟು ತಿಂದ ಕರಾಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಈ ದೌರ್ಜನ್ಯವನ್ನು ಸಹಿಸದೇ ಅಂತಿಮವಾಗಿ ಆ ವೈವಾಹಿಕ ಬಂಧನದಿಂದ ಹೊರಬರಲು ನಿರ್ಧರಿಸಿದ್ದಾಗೆ ಹೇಳಿಕೊಂಡಿದ್ದಾರೆ.
ನರಕಯಾತನೆಯಿಂದ ಮುಕ್ತಿ ಪಡೆದ ಬಳಿಕ ಕುಟುಂಬದ ಬೆಂಬಲದೊಂದಿಗೆ ಶರ್ಮಿಳಾ ತಮ್ಮ ಬದುಕನ್ನು ಮರುರೂಪಿಸಿಕೊಳ್ಳುವತ್ತ ಗಮನಹರಿಸಿದರು. ದೈಹಿಕ ಸವಾಲನ್ನೇ ಶಕ್ತಿಯಾಗಿ ಪರಿವರ್ತಿಸಿಕೊಂಡು ಪ್ಯಾರಾ ಅಥ್ಲೆಟಿಕ್ಸ್‌ನತ್ತ ಮುಖ ಮಾಡಿದ ಅವರಿಗೆ ಶಾಟ್‌ಪುಟ್ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಮಗಳ ಕನಸಿಗಾಗಿ ಮನೆ ಮಾರಿದ ಕುಟುಂಬ
'ತರಬೇತಿ ಮತ್ತು ಸ್ಪರ್ಧೆಗಳಿಗೆ ತಗಲುವ ವೆಚ್ಚವನ್ನು ಭರಿಸಲು ಆಗಲಿಲ್ಲ. ಆದರೂ ತಂದೆ-ತಾಯಿ ನನ್ನ ದೇಶಸೇವೆಯ ಕನಸಿಗೆ ಬೆಂಬಲವಾಗಿ ನಿಂತು, ತಮ್ಮ ಸ್ವಂತ ಮನೆಯನ್ನೇ ಮಾರಾಟ ಮಾಡಿದರು. ಈ ಎಲ್ಲಾ ತ್ಯಾಗಗಳು ನನ್ನ ಶ್ರಮಕ್ಕೆ ಮತ್ತಷ್ಟು ಬಲ ತುಂಬಿದವು,' ಎಂದು ಹೇಳುವ ಮೂಲಕ ಭಾವುಕರಾದರು.
ಕಷ್ಟಗಳನ್ನು ಮೆಟ್ಟಿ ನಿಂತ ಶರ್ಮಿಳಾ
ಯಶಸ್ಸಿಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ನಿರೂಪಿಸಿದ 40 ವರ್ಷದ ಶರ್ಮಿಳಾ ಧನ್ಕರ್ ಅವರು ತಮ್ಮ ಕ್ರೀಡಾ ಜೀವನದ ಉನ್ನತ ಹಂತವನ್ನು ತಲುಪಿ ಭಾರತಕ್ಕೆ ಪ್ರಥಮ ಕಾಮನ್‌ವೆಲ್ತ್ ಪ್ಯಾರಾ ಅಥ್ಲೆಟಿಕ್ಸ್ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಅವರ ಈ ಸಾಧನೆ ಕೇವಲ ಒಂದು ಪದಕಕ್ಕೆ ಸೀಮಿತವಾಗಿರದೆ, ಕಷ್ಟಗಳನ್ನು ಮೆಟ್ಟಿ ನಿಂತು ಗೆದ್ದು ಬೀಗಿದ ಲಕ್ಷಾಂತರ ಮಹಿಳೆಯರ ಆತ್ಮವಿಶ್ವಾಸದ ಸಂಕೇತವಾಗಿದೆ.
ಪುರುಷರ ಹೈಜಂಪ್‌ನಲ್ಲಿ ಸರ್ವೇಶ್ ಕುಶಾರೆಗೆ ಬೆಳ್ಳಿ ಪದಕ
ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಸರ್ವೇಶ್ ಕುಶಾರೆ ಬೆಳ್ಳಿ ಪದಕ ಜಯಿಸಿದ್ದಾರೆ. ಈ ಮೂಲಕ 31 ವರ್ಷದ ಸರ್ವೇಶ್ ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಹೈಜಂಪ್ ವಿಭಾಗದಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತೀವ್ರ ಪೈಪೋಟಿ ಏರ್ಪಟ್ಟಿದ್ದ ಈ ಸ್ಪರ್ಧೆಯಲ್ಲಿ ಸರ್ವೇಶ್ 2.25 ಮೀಟರ್ ಎತ್ತರ ಜಿಗಿದರು. ಜಮೈಕಾದ ರೊಮೈನ್ ಬೆಕ್ಫೋರ್ಡ್ ಜೊತೆ ನಡೆದ ರೋಚಕ ಹಣಾಹಣಿಯಲ್ಲಿ ಇಬ್ಬರೂ 2.28 ಮೀಟರ್ ಎತ್ತರವನ್ನು ದಾಟಲು ವಿಫಲರಾದಾಗ 'ಕೌಂಟ್ಬ್ಯಾಕ್' ನಿಯಮದ ಆಧಾರದ ಮೇಲೆ ಸರ್ವೇಶ್ ಅವರಿಗೆ ಚಿನ್ನದ ಪದಕ ಕೂದಲೆಳೆಯ ಅಂತರದಲ್ಲಿ ಕೈತಪ್ಪಿತು. ಇಂಗ್ಲೆಂಡ್‌ನ ಜಾಕ್ ಕಿಮಾನಿ (2.20 ಮೀಟರ್) ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ವೇಟ್‌ಫ್ಟಿಂಗ್‌ನಲ್ಲೂ ಪದಕಗಳ ಬೇಟೆ
* ವಲ್ಲೋರಿ ಅಜಯ್ ಬಾಬು
* ಜ್ಞಾನೇಶ್ವರಿ ಯಾದವ್
ಈ ಇಬ್ಬರೂ ವೇಟ್‌ಲಿಫ್ಟರ್‌ಗಳು ತಮ್ಮ ತಮ್ಮ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಲಾ ಒಂದೊಂದು ಬೆಳ್ಳಿ ಪದಕವನ್ನು ಗೆಲದ್ದು ಗಮನ ಸಳೆದಿದ್ದಾರೆ. ಹೀಗೆ ಭಾರತ ಪದಕಗಳ ಬೇಟೆಯನ್ನಯ ಮುಂದುವರೆಸಿದ್ದು, ಸಾಧನೆಗೈದ ಕ್ರೀಡಾಪಟುಗಳಿಗೆ ಮೆಚ್ಚುಗೆಗಳ ಸುರಿಮಳೆ ಹಾಗೂ ಸೋತವರಿಗೆ ಸಾಂತ್ವನ ಹಾಗೂ ಧೈರ್ಯ ತುಂಬುವ ಕೆಲಸವನ್ನು ಮಾಡಲಾಗತ್ತಿದೆ.


Click it and Unblock the Notifications
