ವಿಶ್ವ ಪೊಲೀಸ್ ಮತ್ತು ಫೈರ್ ಗೇಮ್ಸ್ 2025ರ ಅಖಾಡದಲ್ಲಿ 73 ಪದಕ ಗೆದ್ದು ಬಿಗಿದ ಬಿಎಸ್‌ಎಫ್!
ಭಾರತೀಯ ಸೇನೆ ಎಂದರೆ ಶತಕೋಟಿ ಭಾರತೀಯರ ಹೆಮ್ಮೆ, ಭಾರತೀಯರನ್ನು ರಕ್ಷಣೆ ಮಾಡುವ ಜೊತೆಗೆ ಭವಿಷ್ಯದ ಭಾರತಕ್ಕೂ ತಮ್ಮ ಜೀವ ಮುಡಿಪಾಗಿ ಇಟ್ಟು ಕರ್ತವ್ಯ ನಿರ್ವಹಿಸುತ್ತಾ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಬಿಎಸ್‌ಎಫ್ ಯೋಧರು. ಹೀಗಿದ್ದಾಗ ಕ್ರೀಡಾಕೂಟದಲ್ಲೂ ಭಾರತದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ ಬಿಎಸ್‌ಎಫ್ ಯೋಧರು. 2025ರ ವಿಶ್ವ ಪೊಲೀಸ್ ಮತ್ತು ಫೈರ್ ಗೇಮ್ಸ್ ಅಖಾಡದಲ್ಲಿ 73 ಪದಕ ಗೆದ್ದಿದ್ದಾರೆ ಬಿಎಸ್‌ಎಫ್ ಪಡೆಯ ಸ್ಪರ್ಧಿಗಳು.
ಅಂದಹಾಗೆ ಬಿಎಸ್‌ಎಫ್ ಅಂದರೆ ಭಾರತದ ಗಡಿ ಭದ್ರತಾ ಪಡೆ 2025ರ ವಿಶ್ವ ಪೊಲೀಸ್ ಮತ್ತು ಫೈರ್ ಗೇಮ್ಸ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದೆ. ಅಮೆರಿಕದ ಅಲಬಾಮಾದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ BSF ಕ್ರೀಡಾಪಟುಗಳು 38 ಚಿನ್ನ, 21 ಬೆಳ್ಳಿ ಹಾಗೂ 14 ಕಂಚು ಸೇರಿ 73 ಪದಕಗಳನ್ನು ಗಳಿಸಿದ್ದಾರೆ. ಈ ಸಾಧನೆಯು ಅವರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಇಡೀ ಜಗತ್ತಿಗೇ ಸಾರಿದಂತೆ ಇದೆ. ದೇಶದ ರಕ್ಷಣೆ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಅಸಾಧಾರಣ ಸಾಧನೆ ಮಾಡಿ ಬಿಎಸ್‌ಎಫ್ ಯೋಧರು ಪ್ರಪಂಚದ ಗಮನ ಸೆಳೆದಿದ್ದಾರೆ.

ಯಾವ ಯಾವ ವಿಭಾಗದಲ್ಲಿ ಸಾಧನೆ?
ಹೀಗೆ ಹೆಚ್ಚಿನ ಪದಕವನ್ನು ಬಿಎಸ್‌ಎಫ್ ಗೆಲ್ಲುವಲ್ಲಿ ಪ್ರತಿ ಕ್ರೀಡಾಪಟುವಿನ ಪ್ರದರ್ಶನ, ಕಠಿಣ ತರಬೇತಿ, ಶಿಸ್ತು ಮತ್ತು ಸಮರ್ಪಣಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಪದಕ ಪಟ್ಟಿಯಲ್ಲಿ ಬಿಎಸ್‌ಎಫ್ ಪಡೆಯಿಂದ ವಿವಿಧ ಕ್ರೀಡೆಗಳಲ್ಲಿ ಗಮನಾರ್ಹ ಸಾಧನೆ ಸೇರಿದೆ. ಈಜು 14 ಚಿನ್ನ, 12 ಬೆಳ್ಳಿ ಮತ್ತು 11 ಕಂಚು, ಅಥ್ಲೆಟಿಕ್ಸ್ 12 ಚಿನ್ನ, 6 ಬೆಳ್ಳಿ ಮತ್ತು 3 ಕಂಚು, ಬಿಲ್ಲುಗಾರಿಕೆ 4 ಚಿನ್ನ ಮತ್ತು 2 ಬೆಳ್ಳಿ ಜೊತೆಗೆ ಭರ್ಜರಿ ಸಾಧನೆ ಮಾಡಲಾಗಿದೆ. ಈ ಎಲ್ಲದರ ಜೊತೆಗೆ ಕುಸ್ತಿ 4 ಚಿನ್ನ, ಬಾಕ್ಸಿಂಗ್ 3 ಚಿನ್ನ ಗಳಿಸಿದ್ದು, ಟೇಕ್ವಾಂಡೋ ವಿಭಾಗದಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಬಂದಿದೆ.
WPFG ಜಾಗತಿಕ ಮಟ್ಟದ ಪ್ರಮುಖ ಕ್ರೀಡಾಕೂಟ
ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟವು ಪ್ರತಿ 2 ವರ್ಷಕ್ಕೆ ಒಮ್ಮೆ ನಡೆಯುತ್ತದೆ. ಇನ್ನು ಈ ಕ್ರೀಡಾಕೂಟದಲ್ಲಿ ಇಡೀ ಜಗತ್ತಿನಾದ್ಯಂತ ಸಕ್ರಿಯ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಪರ್ಧಿಸುತ್ತಾರೆ. ಈ ವರ್ಷ 60 ಕ್ಕೂ ಹೆಚ್ಚು ಕ್ರೀಡೆಗಳಲ್ಲಿ 70 ಕ್ಕೂ ಹೆಚ್ಚು ದೇಶಗಳನ್ನು ಪ್ರತಿನಿಧಿಸುವ 10,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಅಥ್ಲೆಟಿಕ್ ಪ್ರತಿಭೆಯನ್ನು ಪ್ರದರ್ಶಿಸುವುದಲ್ಲದೆ, ಜಾಗತಿಕ ಸೌಹಾರ್ದತೆ, ಶಿಸ್ತು ಮತ್ತು ಫಿಟ್ನೆಸ್ ಅನ್ನು ಉತ್ತೇಜಿಸಲು ಈ ಕ್ರೀಡಾಕೂಟ ಸಹಕಾರಿಯಾಗಿದೆ.












Click it and Unblock the Notifications