ಕಣ್ಣೀರಿಡುತ್ತಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಾಂಗ್ಲಾದೇಶ ತಂಡದ ನಾಯಕ
ಅಚ್ಚರಿಯ ಬೆಳವಣಿಗೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಹೀನಾಯವಾಗಿ ಸೋಲು ಕಂಡ ಬಳಿಕ ತಮೀಮ್ ಇಕ್ಬಾಲ್ ಈ ನಿರ್ಧಾರ ಪ್ರಕಟಿಸಿದ್ದಾರೆ.
ಇನ್ನು ಮೂರು ತಿಂಗಳಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಆರಂಭವಾಗುವ ಮುನ್ನವೇ ನಾಯಕ ನಿವೃತ್ತಿಯಾಗಿರುವುದು ತಂಡಕ್ಕೆ ಹಿನ್ನಡೆಯಾದಂತಾಗಿದೆ. ಬಾಂಗ್ಲಾದೇಶದ ಪರವಾಗಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆ ಹೊಂದಿರುವ ತಮೀಮ್ ಇಕ್ಬಾಲ್, ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿವೃತ್ತಿಯ ನಿರ್ಧಾರ ಪ್ರಕಟಿಸಿದ್ದು, ಈ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

34 ವರ್ಷದ ತಮೀಮ್ ಇಕ್ಬಾಲ್ ತಮ್ಮ 16 ವರ್ಷದ ಸುದೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. 241 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 36.62 ಸರಾಸರಿಯಲ್ಲಿ 14 ಶತಕ, 56 ಅರ್ಧಶತಕಗಳು ಸೇರಿದಂತೆ 8313 ರನ್‌ಗಳನ್ನು ಗಳಿಸುವ ಮೂಲಕ ಬಾಂಗ್ಲಾದೇಶದ ಅತ್ಯಂತ ಯಶಸ್ವಿ ಬ್ಯಾಟರ್ ಎನಿಸಿಕೊಂಡಿದ್ದಾರೆ.
2022ರ ಜೂನ್ 17 ರಂದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸುಮಾರು ಒಂದು ವರ್ಷದ ನಂತರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತಮೀಮ್ ಇಕ್ಬಾಲ್ 5134 ರನ್ ಗಳಿಸಿದ್ದು ಮುಶ್ಫಿಕರ್ ರಹೀಮ್ ನಂತರದ ಸ್ಥಾನದಲ್ಲಿದ್ದಾರೆ.
ದಿಢೀರ್ ನಿರ್ಧಾರಕ್ಕೆ ಕೋಚ್ ಜೊತೆ ಕಿರಿಕ್ ಕಾರಣ?
ತಮೀಮ್ ಇಕ್ಬಾಲ್ ಅವರ ಈ ದಿಢೀರ್ ನಿರ್ಧಾರಕ್ಕೆ ಸರಿಯಾದ ಕಾರಣ ಏನೆಂದು ತಿಳಿದಿಲ್ಲವಾದರೂ, ಬಾಂಗ್ಲಾದೇಶದ ತರಬೇತುದಾರ ಚಂಡಿಕಾ ಹತುರುಸಿಂಗ ಮತ್ತು ಬಿಸಿಬಿ ಅಧ್ಯಕ್ಷ ನಜ್ಮುಲ್ ಹೊಸೈನ್ ಅವರ ಜೊತೆಗಿನ ವಿವಾದ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಕೆಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಬಿಸಿಬಿ ಅಧ್ಯಕ್ಷ ನಜ್ಮುಲ್ ಹೊಸೈನ್ ಅವರು ತಮೀಮ್ ಅವರ ನಿರ್ಧಾರದಿಂದ ಕೋಪಗೊಂಡಿದ್ದು, ಈ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ತಮೀಮ್ ವಿದಾಯ ಘೋಷಣೆ ಮಾಡುವುದರೊಂದಿಗೆ ಅಫ್ಘಾನಿಸ್ತಾನದ ವಿರುದ್ಧದ ಸರಣಿಯ ಎರಡನೇ ಏಕದಿನ ಪಂದ್ಯದ ವೇಳೆಗೆ ಹೊಸ ನಾಯಕನ ಹೆಸರು ಘೋಷಣೆ ಮಾಡಬೇಕಿದೆ. ಶಕೀಬ್-ಅಲ್-ಹಸನ್ ಅಥವಾ ಲಿಟ್ಟನ್ ದಾಸ್ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಶಕೀಬ್ ನಾಯಕರಾಗಿದ್ದರೆ, ಟೆಸ್ಟ್ ಮಾದರಿಯಲ್ಲಿ ಲಿಟ್ಟನ್ ದಾಸ್ ಬಾಂಗ್ಲಾದೇಶ ತಂಡದ ನಾಯಕರಾಗಿದ್ದಾರೆ.
ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ತಮೀಮ್
ತಮೀಮ್ ಇಕ್ಬಾಲ್ ಕಳೆದ ಒಂದು ವರ್ಷದಿಂದ ಬಾಂಗ್ಲಾದೇಶದ ಪರವಾಗಿ ಹೆಚ್ಚು ಕ್ರಿಕೆಟ್ ಆಡಿಲ್ಲ, ಮೊದಲು ಹೆಬ್ಬೆರಳಿನ ಗಾಯಕ್ಕೆ ತುತ್ತಾದ ಅವರು ನಂತರ ತೊಡೆಸಂದು ಗಾಯದ ಜೊತೆಗೆ ಬೆನ್ನುನೋವಿಗೆ ತುತ್ತಾಗಿದ್ದರು. ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಇತ್ತೀಚಿನ ಅಫ್ಘಾನಿಸ್ತಾನ ಟೆಸ್ಟ್ ಸರಣಿಗಳಲ್ಲಿ ಅವರು ಆಡಲಿಲ್ಲ.
37 ಏಕದಿನ ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನು ಮುನ್ನಡೆಸಿರುವ ಅವರು 21 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ನಾಯಕತ್ವದಲ್ಲಿ ಶೇಕಡಾ 60 ಗೆಲುವಿನ ಸರಾಸರಿ ಹೊಂದುವ ಮೂಲಕ ಯಶಸ್ವೀ ನಾಯಕ ಎನಿಸಿಕೊಂಡಿದ್ದರು.












Click it and Unblock the Notifications