ಏಷ್ಯಾ ಕಪ್ 2023 ವೇಳಾಪಟ್ಟಿ ಪ್ರಕಟ; ಭಾರತ, ಪಾಕ್ ಪಂದ್ಯ ಯಾವಾಗ?
ಬೆಂಗಳೂರು, ಜುಲೈ 19; ಏಷ್ಯಾ ಕಪ್ 2023 ವೇಳಾಪಟ್ಟಿ ಪ್ರಕಟವಾಗಿದೆ. ಸೆಪ್ಟೆಂಬರ್ 2ರಂದು ಶ್ರೀಲಂಕಾದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾಳಿಯಾಗಲಿವೆ. ಭಾರತ ಸೆಪ್ಟೆಂಬರ್ 4ರಂದು ಮೊದಲ ಬಾರಿಗೆ ನೇಪಾಳವನ್ನು ಎದುರಿಸಲಿದೆ.
ಬುಧವಾರ ಏಷ್ಯಾ ಕಪ್ 2023 ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆಗಸ್ಟ್ 30ರಂದು ಏಷ್ಯಾ ಕಪ್ ಟೂರ್ನಿ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಮುಖಾಮುಖಿಯಾಗಲಿವೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜೈ ಶಾ ಬುಧವಾರ ಏಷ್ಯಾ ಕಪ್ 2023ರ ವೇಳಾಪಟ್ಟಿ ಟ್ವೀಟ್ ಮಾಡಿದ್ದಾರೆ. ಇನ್ನೊಂದು ಗುಂಪಿನ ಪಂದ್ಯದಲ್ಲಿ ಭಾರತ ಮೊದಲ ಬಾರಿಗೆ ನೇಪಾಳ ತಂಡವನ್ನು ಕ್ಯಾಂಡಿಯಲ್ಲಿಯೇ ಸೆಪ್ಟೆಂಬರ್ 4ರಂದು ಎದುರಿಸಲಿದೆ.
ಯಾವ-ಯಾವ ತಂಡಗಳು?; ಏಷ್ಯಾ ಕಪ್‌ನಲ್ಲಿ ಎರಡು ಗುಂಪುಗಳು ಇರಲಿವೆ. ಎರಡು ಗುಂಪುಗಳಲ್ಲಿ ಎರಡು ತಂಡಗಳು ಸೂಪರ್ ನಾಲ್ಕರ ಹಂತಕ್ಕೆ ಅರ್ಹತೆ ಪಡೆಯಲಿವೆ. ಸೂಪರ್ ನಾಲ್ಕರ ಹಂತದ ಟಾಪ್ ಎರಡು ತಂಡಗಳು ಫೈನಲ್‌ನಲ್ಲಿ ಎದುರಾಳಿಗಳಾಗಲಿದ್ದಾರೆ.
ಜೈ ಶಾ ಮಾಡಿರುವ ಟ್ವೀಟ್‌ನಲ್ಲಿ, 'ಬಹು ನಿರೀಕ್ಷಿತ ಪುರುಷರ ODI #AsiaCup2023 ವೇಳಾಪಟ್ಟಿಯನ್ನು ಪ್ರಕಟಿಸಲು ನನಗೆ ಸಂತೋಷವಾಗಿದೆ, ಇದು ವೈವಿಧ್ಯಮಯ ರಾಷ್ಟ್ರಗಳನ್ನು ಒಗ್ಗೂಡಿಸುವ ಏಕತೆ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ. ನಮ್ಮೆಲ್ಲರನ್ನು ಒಂದಾಗಿಸುವ ಕ್ರಿಕೆಟ್‌ನ ಘನತೆಯನ್ನು ಎತ್ತಿಹಿಡಿಯೋಣ, ಸಂಭ್ರಮದಲ್ಲಿ ಕೈಜೋಡಿಸೋಣ' ಎಂದು ಹೇಳಿದ್ದಾರೆ.
ಏಷ್ಯಾ ಕಪ್ 2023ರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕ, ಬಾಂಗ್ಲಾದೇಶ, ಆಫಘಾನಿಸ್ತಾನ ಮತ್ತು ನೇಪಾಳ ತಂಡಗಳು ಪಾಲ್ಗೊಳ್ಳಲಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಪಾಕಿಸ್ತಾನಕ್ಕೆ ಯಾವುದೇ ಕಾರಣಕ್ಕೂ ತಂಡವನ್ನು ಕಳಿಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು.
ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗುವ ನಿರೀಕ್ಷೆ ಇದೆ. ಆದರೆ ಇದು ಪಂದ್ಯಗಳ ಫಲಿತಾಂಶಗಳ ಮೇಲೆ ನಿರ್ಧಾರವಾಗಲಿದೆ. ಎರಡೂ ತಂಡಗಳು ಸೂಪರ್ ನಾಲ್ಕರ ಹಂತಕ್ಕೆ ಅರ್ಹತೆ ಪಡೆದರೆ ಇದು ಸಾಧ್ಯವಾಗಲಿದೆ. ಸೂಪರ್ ನಾಲ್ಕರ ಹಂತದಲ್ಲಿಯೂ ಎರಡು ತಂಡಗಳು ಟಾಪ್‌ನಲ್ಲಿ ಬಂದರೆ ಫೈನಲ್‌ನಲ್ಲಿ ಎದುರಾಳಿಯಾಗಲಿವೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕಳೆದ ತಿಂಗಳು ಪಾಕಿಸ್ತಾನದಲ್ಲಿ 4 ಮತ್ತು ಶ್ರೀಲಂಕಾದಲ್ಲಿ 9 ಪಂದ್ಯಗಳನ್ನು ಆಗಸ್ಟ್ 31ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ ಎಂದು ಘೋಷಿಸಿತು. ಆದರೆ ಪಾಕಿಸ್ತಾನಕ್ಕೆ ತಂಡವನ್ನು ಕಳಿಸುವುದಿಲ್ಲ ಎಂದು ಭಾರತ ಹೇಳಿತ್ತು.












Click it and Unblock the Notifications