U19 World Cup: ಫೈನಲ್‌ನಲ್ಲಿ ಎಡವಿದ ಭಾರತ: ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾದ ಬೆನೊನಿಯಲ್ಲಿ ಭಾನುವಾರ ನಡೆದ ಐಸಿಸಿ ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತೀಯ ಅಂಡರ್ 19 ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ 79 ರನ್‌ಗಳಿಂದ ಸೋತಿತು, ಕಳೆದ ವರ್ಷ ಐಸಿಸಿ ಹಿರಿಯರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕೂಡ ಭಾರತ ಆಸ್ಟ್ರೇಲಿಯಾ ಎದುರು ಸೋಲನ್ನಪ್ಪಿತ್ತು.
ಭಾನುವಾರ ಬೆನೋನಿ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯನ್ನರು ಭಾರತಕ್ಕೆ 254 ರನ್‌ಗಳ ಗುರಿಯನ್ನು ನೀಡಿದ್ದರು, ಪಂದ್ಯಾವಳಿಯಲ್ಲಿ ಮೊದಲ ಅರ್ಧಶತಕ ಹರ್ಜಾಸ್ ಸಿಂಗ್ (55 ರನ್) ಕಾಂಗರೂ ಪಡೆಗೆ ನೆರವಾದರು.

ನಾಯಕ ಹಗ್ ವೈಬ್‌ಗೆನ್ (48), ಆಲಿವರ್ ಪೀಕ್ (46) ಮತ್ತು ಹ್ಯಾರಿ ಡಿಕ್ಸನ್ (42) ಉತ್ತಮ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯಾ ಸವಾಲಿನ ಮೊತ್ತ ಕಲೆಹಾಕಿತು. ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇದು ಅತ್ಯಧಿಕ ಸ್ಕೋರ್ ಆಗಿದೆ.
ಆರನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಭಗ್ನ
ಐದು ಬಾರಿ ಅಂಡರ್-19 ಚಾಂಪಿಯನ್ ಆಗಿರುವ ಭಾರತ, ದಾಖಲೆಯ ಆರನೇ ಪ್ರಶಸ್ತಿಯನ್ನು ಬೆನ್ನಟ್ಟುತ್ತಿತ್ತು. ಹಾಲಿ ಚಾಂಪಿಯನ್ ಆಗಿದ್ದ ಭಾರತ ಪಂದ್ಯಾವಳಿಯಲ್ಲಿ ಅಜೇಯರಾಗಿದ್ದರು, ಬಾಂಗ್ಲಾದೇಶ, ಐರ್ಲೆಂಡ್, ಯುಎಸ್ಎ, ನ್ಯೂಜಿಲೆಂಡ್, ನೇಪಾಳ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾವನ್ನು ಸೆಮಿಫೈನಲ್‌ನಲ್ಲಿ ಸೋಲಿಸಿದರು.
ಆದರೆ ಫೈನಲ್‌ನಲ್ಲಿ ಸೋಲುವ ಮೂಲಕ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಯಿತು. ಆಸ್ಟ್ರೇಲಿಯಾ ನಾಲ್ಕನೇ ಅಂಡರ್ 19 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತ ಮತ್ತು ಆಸ್ಟ್ರೇಲಿಯಾವನ್ನು ಹೊರತುಪಡಿಸಿ, ಪಾಕಿಸ್ತಾನ ಮಾತ್ರ ಅಂಡರ್19 ಮಟ್ಟದಲ್ಲಿ ಒಂದಕ್ಕಿಂತ ಹೆಚ್ಚು ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದಿದೆ.
ಭಾರತ ಪರ ವೇಗಿ ರಾಜ್ ಲಿಂಬಾನಿ ಅವರು 10 ಓವರ್‌ಗಳಲ್ಲಿ 38 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಬಳಿಸಿದರು. ನಮನ್ ತಿವಾರಿ ಎರಡು ವಿಕೆಟ್ ಪಡೆದರು.
ಸವಾಲಿನ ಗುರಿಯನ್ನು ಬೆನ್ನತ್ತಿದ ಭಾರತ ಕೇವಲ ಮೂರು ರನ್‌ಗಳಿಗೆ ಆರಂಭಿಕ ಅರ್ಶಿನ್ ಕುಲಕರ್ಣಿ ಅವರನ್ನು ಕಳೆದುಕೊಂಡಿತು ಮತ್ತು ಒಂದು ಹಂತದಲ್ಲಿ 91 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಆರಂಭಿಕರಾದ ಆದರ್ಶ್ ಸಿಂಗ್ (77 ಎಸೆತಗಳಲ್ಲಿ 47), ಮುಶೀರ್ ಖಾನ್ (22), ಮುರುಗನ್ ಅಭಿಷೇಕ್ (42) ಮತ್ತು ನಮನ್ ತಿವಾರಿ ಮಾತ್ರ ಎರಡಂಕಿಯ ಮೊತ್ತ ಗಳಿಸುವಲ್ಲಿ ಯಶಸ್ವಿಯಾದರು.
ಮೂರು ವಿಕೆಟ್ ಪಡೆದ ಮಾಹ್ಲಿ ಬಿಯರ್ಡ್‌ಮನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಏತನ್ಮಧ್ಯೆ, ದಕ್ಷಿಣ ಆಫ್ರಿಕಾದ ಕ್ವೆನಾ ಮಫಕಾ ಪಂದ್ಯಾವಳಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.












Click it and Unblock the Notifications