ಸೌರವ್ ಗಂಗೂಲಿ ನಾಯಕತ್ವದಲ್ಲಿ ವರ್ಲ್ಡ್ ಜೈಂಟ್ಸ್ ತಂಡದ ವಿರುದ್ಧ ಐತಿಹಾಸಿಕ ಕ್ರಿಕೆಟ್ ಪಂದ್ಯ
ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ಬ್ರೆಟ್ ಲೀ, ಹರ್ಷಲ್ ಗಿಬ್ಸ್, ಜಾಂಟಿ ರೋಡ್ಸ್, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್ ಇನ್ನು ಹಲವು ಕ್ರಿಕೆಟ್ ದಿಗ್ಗಜರ ಹೆಸರು ಕೇಳಿದರೆ ರೋಮಾಂಚನವಾಗುತ್ತದೆ. ಇವರ ಆಟವನ್ನು ನೋಡುವುದೇ ಒಂದು ಸೊಗಸು. ಇವರು ಮತ್ತೊಮ್ಮೆ ಒಟ್ಟಾಗಿ ಕ್ರಿಕೆಟ್ ಆಡಿದರೆ ಹೇಗಿರುತ್ತದೆ. ಹೌದು, ಅಂತಹ ಸ್ಮರಣೀಯ ಪಂದ್ಯವೊಂದು ಶೀಘ್ರದಲ್ಲೇ ನಡೆಯಲಿದೆ. ಅದೂ ಕೂಡ ಸೌರವ್ ಗಂಗೂಲಿ ನಾಯಕತ್ವದಲ್ಲಿ.
ಭಾರತದ ಸ್ವಾತಂತ್ರ್ಯದ 75ನೇ ಸಂಭ್ರಮಾಚರಣೆಗಾಗಿ ವಿಶೇಷ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿದ್ದು. ಭಾರತೀಯ ಮಹಾರಾಜ ಮತ್ತು ವರ್ಲ್ಡ್ ಜೈಂಟ್ಸ್ ತಂಡದ ನಡುವೆ ಕ್ರಿಕೆಟ್ ಪಂದ್ಯ, ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಸೆಪ್ಟಂಬರ್ 16ರಂದು ನಡೆಯಲಿದೆ.
ಈ ಐತಿಹಾಸಿಕ ಪಂದ್ಯದಲ್ಲಿ ಭಾರತೀಯ ಮಹಾರಾಜ ತಂಡವನ್ನು ಭಾರತ ತಂಡದ ಮಾಜಿ ನಾಯಕ ಮತ್ತು ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುನ್ನಡೆಸಲಿದ್ದಾರೆ. ವರ್ಲ್ಡ್ ಜೈಂಟ್ಸ್ ತಂಡಕ್ಕೆ ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ನಾಯಕರಾಗಲಿದ್ದಾರೆ. ವಿಶ್ವದ ಹಲವು ಪ್ರಮುಖ ಆಟಗಾರರು ಈ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಆರಂಭಕ್ಕೆ ಮುನ್ನಾ ದಿನ ಈ ವಿಶೇಷ ಪಂದ್ಯ ನಡೆಯಲಿದೆ.

ಲೆಜೆಂಡ್ಸ್ ಲೀಗ್‌ನ ಉದ್ಘಾಟನಾ ಪಂದ್ಯ ಎಲ್ಲಿ?
ಕೆಲವು ದಿನಗಳ ಹಿಂದೆ, ಗಂಗೂಲಿ ಅವರು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಆವೃತ್ತಿಯ ಸಂದರ್ಭದಲ್ಲಿ ವಿಶೇಷ ಪಂದ್ಯದಲ್ಲಿ ಭಾಗವಹಿಸುವುದಾಗಿ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ದೃಢಪಡಿಸಿದ್ದರು. ಈಗ ಅದು ಅಧಿಕೃತವಾಗಿದೆ. ಭಾರತ ಸ್ವಾತಂತ್ರ್ಯದ 75 ನೇ ವರ್ಷದ ಸವಿನೆನಪಿಗಾಗಿ ಲೆಜೆಂಡ್ಸ್ ಲೀಗ್‌ನ ಎರಡನೇ ಕ್ರಿಕೆಟ್ ಸೀಸನ್‌ನ ಉದ್ಘಾಟನಾ ಪಂದ್ಯದಲ್ಲಿ ಹಲವು ದಿಗ್ಗಜರು ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ.
75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿಶೇಷ ಪಂದ್ಯ ಆಯೋಜನೆ ಮಾಡುವಂತೆ ಭಾರತ ಸರ್ಕಾರ ಬಿಸಿಸಿಐ ಅನ್ನು ಕೇಳಿಕೊಂಡಿತ್ತು. ಸರ್ಕಾರದ ಆಶಯದಂತೆ ಈ ಪಂದ್ಯ ಆಯೋಜನೆ ಮಾಡಲಾಗಿದೆ.

ಪಂದ್ಯದಲ್ಲಿ ಆಡಲಿರುವ ವಿಶ್ವದ ದಿಗ್ಗಜ ಕ್ರಿಕೆಟಿಗರು
ಈ ಪಂದ್ಯದಲ್ಲಿ 10 ವಿದೇಶಗಳ ಆಟಗಾರರು ಭಾಗವಹಿಸಲಿದ್ದಾರೆ. ವಿಶ್ವ ತಂಡಕ್ಕಾಗಿ ಕಾಣಿಸಿಕೊಳ್ಳುವ ಪ್ರಮುಖ ಆಟಗಾರರೆಂದರೆ, ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜಾಕ್ವೆಸ್ ಕಾಲಿಸ್, ವೇಗಿ ಡೇಲ್ ಸ್ಟೇನ್, ಬ್ಯಾಟರ್‌ಗಳಾದ ಹರ್ಷಲ್ ಗಿಬ್ಸ್, ಜಾಂಟಿ ರೋಡ್ಸ್ ಸೇರಿದ್ದಾರೆ. ಇವರಲ್ಲದೆ, ಬ್ರೆಟ್ ಲೀ ಮತ್ತು ಮಿಚೆಲ್ ಜಾನ್ಸನ್ ಅವರೊಂದಿಗೆ ಶ್ರೀಲಂಕಾದ ದಂತಕಥೆ ಜೋಡಿ ಸನತ್ ಜಯಸೂರ್ಯ ಮತ್ತು ಮುತ್ತಯ್ಯ ಮುರಳೀಧರನ್ ಕೂಡ ವರ್ಲ್ಡ್ ಜೈಂಟ್ಸ್ ತಂಡದಲ್ಲಿ ಆಡಲಿದ್ದಾರೆ.
ಭಾರತ ಮಹಾರಾಜ ತಂಡದಲ್ಲಿ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್ ಮತ್ತು ಪಾರ್ಥಿವ್ ಪಟೇಲ್‌ರಂತಹ ಪ್ರಮುಖ ಆಟಗಾರರು ಭಾಗವಹಿಸಲಿದ್ದು. ಸೌರವ್ ಗಂಗೂಲಿ ನಾಯಕತ್ವ ವಹಿಸಲಿದ್ದಾರೆ.

ಸಂತಸ ಹಂಚಿಕೊಂಡ ಮಾಜಿ ಕೋಚ್ ರವಿಶಾಸ್ತ್ರಿ
ಮುಂಬರುವ ಟೂರ್ನಮೆಂಟ್ ಕುರಿತು ಮಾತನಾಡಿದ ಭಾರತದ ಮಾಜಿ ಮುಖ್ಯ ಕೋಚ್ ಮತ್ತು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಕಮಿಷನರ್ ರವಿ ಶಾಸ್ತ್ರಿ, "ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ. ಹೆಮ್ಮೆಯ ಭಾರತೀಯನಾಗಿ ಇದು ಈ ವರ್ಷದ ಲೀಗ್ ಅನ್ನು 75 ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಅರ್ಪಿಸಲು ನಾವು ನಿರ್ಧರಿಸಿದ್ದೇವೆ ಎಂದು ಹಂಚಿಕೊಳ್ಳಲು ಸಂತೋಷವಾಗುತ್ತಿದೆ" ಎಂದು ಹೇಳಿದ್ದಾರೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಈ ಬಾರಿ 15 ಪಂದ್ಯಗಳು
ಲೆಜೆಂಡ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ವರ್ಷ ನಾಲ್ಕು ತಂಡಗಳು ಭಾಗವಹಿಸಲಿದ್ದು. ಸೆಪ್ಟೆಂಬರ್ 17 ರಂದು ಪ್ರಾರಂಭವಾಗುತ್ತದೆ, ನಾಲ್ಕು ತಂಡಗಳು ಫ್ರಾಂಚೈಸಿ ಸ್ವರೂಪದಲ್ಲಿ ಪರಸ್ಪರ ಸ್ಪರ್ಧಿಸುತ್ತವೆ. ಒಟ್ಟಾರೆ ಈ ಋತುವಿನಲ್ಲಿ 15 ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 8 ರವರೆಗೆ ಪಂದ್ಯಾವಳಿ ನಡೆಯಲಿದ್ದು, ಆರು ನಗರಗಳಲ್ಲಿ 22 ದಿನಗಳಲ್ಲಿ 15 ಪಂದ್ಯಗಳನ್ನು ಆಡಲಿದೆ.
ಕ್ರಿಸ್ ಗೇಲ್, ಜಾಂಟಿ ರೋಡ್ಸ್, ಯುವರಾಜ್ ಸಿಂಗ್, ಮಿಚೆಲ್ ಜಾನ್ಸನ್ ಸೇರಿದಂತೆ
ವಿಶ್ವದ ಹಲವು ಖ್ಯಾತ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications