ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಹೇಳಲು ಸಜ್ಜಾದ ಲಿಯಾನಲ್ ಮೆಸ್ಸಿ: ಇದೇ ಕೊನೆ ಟೂರ್ನಿ?
ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ 2022ರ ಫಿಫಾ ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.
ಕತಾರ್‌ನಲ್ಲಿ ಇದೇ ವರ್ಷ ನಡೆಯಲಿರುವ ವಿಶ್ವಕಪ್ 34 ವರ್ಷದ ಅರ್ಜೆಂಟೀನಾದ ಲೆಜೆಂಡ್‌ಗೆ ಕೊನೆಯ ಟೂರ್ನಮೆಂಟ್ ಆಗಲಿದೆ. ಮೆಸ್ಸಿ ಪ್ರಸ್ತುತ ಲೀಗ್ 1ನಲ್ಲಿ ಫ್ರಾನ್ಸ್‌ನ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮನ್ ಪರ ಆಡುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಫುಟ್‌ಬಾಲ್ ಆಟಗಾರನಾಗಿ ಸಾಕಷ್ಟು ಉತ್ತಮ ಪ್ರದರ್ಶನ ತೋರುತ್ತಿರುವ ಮೆಸ್ಸಿ ಈಗಲೂ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರ ಕ್ಲಬ್ ಫುಟ್‌ಬಾಲ್‌ನಿಂದ ಸದ್ಯಕ್ಕೆ ದೂರವಾಗುವ ಯಾವುದೇ ಚರ್ಚೆ ಇಲ್ಲ, ಆದರೆ ಖಂಡಿತ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ದೂರವಾಗಿಲಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.

ಪತ್ರಕರ್ತ ಸೆಬಾಸ್ಟಿಯನ್ ವಿಗ್ನಾಲೋ ಜೊತೆಗಿನ ಸಂವಾದದ ವೇಳೆ ಅರ್ಜೆಂಟೀನಾದ ಸೂಪರ್ ಸ್ಟಾರ್ ಕತಾರ್ ವಿಶ್ವಕಪ್ ನನ್ನ ಕೊನೆಯ ಅಂತಾರಾಷ್ಟ್ರೀಯ ಟೂರ್ನಿಯಾಗಬಹುದು ಅನ್ನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
"ನಾನು ವಿಶ್ವಕಪ್‌ಗಾಗಿ ದಿನಗಳನ್ನು ಎಣಿಸುತ್ತಿದ್ದೇನೆ. ನಿಜ ಹೇಳಬೇಕೆಂದರೆ ನಾವು ವಿಶ್ವಕಪ್ ಸನಿಹವಿದ್ದೇವೆ, ಮುಂದೆ ಏನಾಗಲಿದೆ ಎನ್ನುವ ಕೊಂಚ ಆತಂಕವಿದೆ. ಏಕೆಂದರೆ ಇದು ನನ್ನ ಕೊನೆಯ ವಿಶ್ವಕಪ್, ಹಾಗಾಗಿ ಅದು ಹೇಗೆ ಹೋಗಲಿದೆ? ಎನ್ನುವ ಕುತೂಹಲವಿದೆ. ಹಾಗಾಗಿ ವಿಶ್ವಕಪ್ ಬರುವವರೆಗೆ ನನಗೆ ಕಾಯಲು ಸಾಧ್ಯವಾಗುತ್ತಿಲ್ಲ. ಆದರೆ ಅದು ಚೆನ್ನಾಗಿ ಅವಿಸ್ಮರಣೀಯವಾಗಿರಬೇಕೆಂಬ ಹತಾಶ ಭಾವನೆಯಲ್ಲಿದ್ದೇನೆ " ಎಂದು ಹೇಳಿಕೊಂಡಿದ್ದಾರೆ.
ಮೆಸ್ಸಿ ನಾಯಕರಾಗಿರುವ ಅರ್ಜೆಂಟೀನಾ ಕತಾರ್ ವಿಶ್ವಕಪ್‌ಗೆ ಅದ್ಭುತವಾಗಿ ಸಿದ್ಧವಾಗಿದೆ. ಇತ್ತೀಚೆಗೆ ಜಮೈಕಾ ವಿರುದ್ಧ ಪಂದ್ಯದಲ್ಲಿ 3-0 ಗೆಲುವು ಸೇರಿ ವೃತ್ತಿಪರ ಫುಟ್‌ಬಾಲ್‌ನಲ್ಲಿ 35 ಪಂದ್ಯಗಳಿಗೆ ಅಜೇಯರಾಗಿ ಉಳಿದುಕೊಂಡಿದೆ. ವಿಗ್ನೊಲೊ ಅವರೊಂದಿಗೆ ಮಾತನಾಡುತ್ತಾ ಮೆಸ್ಸಿ," ನಾವು ಕಠಿಣ ಗುಂಪಿನಲ್ಲಿದ್ದರೂ ಕತಾರ್‌ನಲ್ಲಿ ನಮ್ಮ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸುವ ಬಗ್ಗೆ ನನಗೆ ಸಾಕಷ್ಟು ವಿಶ್ವಾಸವಿದೆ" ಎಂದು ಹೇಳಿದ್ದಾರೆ.

ನಾವು ಅತ್ಯಂತ ಪ್ರಬಲ ತಂಡಗಳಿರುವ ಗುಂಪಿನೊಂದಿಗೆ ಉತ್ತಮ ಕ್ಷಣದಲ್ಲಿದ್ದೇವೆ, ಆದರೆ ವಿಶ್ವಕಪ್‌ನಲ್ಲಿ ಏನು ಬೇಕಾದರೂ ಆಗಬಹುದು. ಎಲ್ಲಾ ಪಂದ್ಯಗಳು ಕಷ್ಟಕರವಾಗಿರುತ್ತದೆ, ಅದೇ ವಿಶ್ವಕಪ್ ಅನ್ನು ತುಂಬಾ ವಿಶೇಷವಾಗಿಸುತ್ತದೆ. ಏಕೆಂದರೆ ನೀವಂದುಕೊಂಡಂತೆ ಟ್ರೋಫಿ ಗೆಲ್ಲಬಹುದಾದ ನೆಚ್ಚಿನ ತಂಡಗಳು ನಿರೀಕ್ಷಿಸಿದಂತೆ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ.
ನಮ್ಮ ತಂಡ ಫೇವರೇಟ್ ಎಂಬುದು ನನಗೆ ಗೊತ್ತಿಲ್ಲ, ಆದರೆ ಅರ್ಜೆಂಟೀನಾ ಇತಿಹಾಸದಲ್ಲಿ ಸದಾ ಕಠಿಣ ಅಭ್ಯರ್ಥಿಯಾಗಿದೆ. ಹಾಗಂತಾ ನಾವೇ ನೆಚ್ಚಿನ ತಂಡ ಎಂಬರ್ಥವಲ್ಲ, ನಮಗಿಂತ ಬಲಿಷ್ಠವಾದ ಇತರ ತಂಡಗಳಿವೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.
ಮೆಸ್ಸಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ನೀಡುವ ಬಗ್ಗೆ ಮಾತನಾಡಿದ್ದು ಇದೇ ಮೊದಲೇನಲ್ಲ. 7 ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತ 2016ರ ಕೋಪಾ ಅಮೇರಿಕಾ ಫೈನಲ್‌ನಲ್ಲಿ ಚಿಲಿ ವಿರುದ್ಧ ಸೋಲು ಕಂಡ ನಿರಾಶೆಯಲ್ಲಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸುವುದಾಗಿ ಹೇಳಿಕೊಂಡಿದ್ದರು.
ಆದರೆ ನಂತರ ಅವರು ನಿವೃತ್ತಿಯ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದರು. ಅಲ್ಲದೆ 2021 ರಲ್ಲಿ ಕೊನೆಗೂ ಕೋಪಾ ಅಮೇರಿಕಾ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾದರು. ತನ್ನ ವೃತ್ತಿಜೀವನದಲ್ಲಿ ಮೆಸ್ಸಿ ಗೆದ್ದ ಏಕೈಕ ಪ್ರಮುಖ ಅಂತಾರಾಷ್ಟ್ರೀಯ ಟ್ರೋಫಿ ಎಂದರೆ ಅದು ಕೋಪಾ ಅಮೇರಿಕಾ ಮಾತ್ರ.
2014ರ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡ ಅದ್ಭುತ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಿತ್ತಾದರೂ ಅಂತಿಮ ಹಣಾಹಣಿಯಲ್ಲಿ ಜರ್ಮನಿಯ ವಿರುದ್ಧ ಹೀನಾಯ ಸೋಲು ಕಂಡು ನಿರಾಶೆ ಅನುಭವಿಸಿತ್ತು.












Click it and Unblock the Notifications