ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಬೆಂಬಲಿಗನಿಂದ ಹಣ ಹಂಚಿಕೆ: ವಿಡಿಯೋ ವೈರಲ್
ಯಲ್ಲಾಪುರ, ಡಿಸೆಂಬರ್ 4: ಯಲ್ಲಾಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಂ ಹೆಬ್ಬಾರ್ ಅವರ ಆಪ್ತ ದ್ಯಾಮಣ್ಣ ದೊಡ್ಡಮನಿ ಶಿರಸಿ ತಾಲ್ಲೂಕಿನ ಬನವಾಸಿ ಸಮೀಪದ ದನಗನಹಳ್ಳಿಯಲ್ಲಿ ಹಣ ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ.
ಉಪ ಚುನಾವಣೆ ನಡೆಯಲು ಒಂದು ದಿನ ಬಾಕಿ ಇರುವಾಗಲೇ ಹಣ ಹಂಚಿಕೆ ಮಾಡುವ ವಿಡಿಯೋ ಬಿಡುಗಡೆಯಾಗಿದ್ದು, ಬುಧವಾರ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
'100 ವೋಟಿನ ರೊಕ್ಕ ಕೊಡಿರಿ, ರವಿ ಮನೆಗೆ ಹೋಗಿ 50 ಸಾವಿರ ರೂ ಕೊಡಿ. ಕೆಲವು ಮನೆಯವರು ಒಂದು ರೂಪಾಯಿ ಕೂಡ ಮುಟ್ಟಲ್ಲ. ಪುತ್ತೂರಾಯನ ಹೆಸರು ಹೊಡೆಯಿರಿ' ಎಂದು ಮಾತನಾಡುವುದು ವಿಡಿಯೋದಲ್ಲಿ ಕೇಳಿಸಿದೆ. ಈ ವಿಡಿಯೋದಲ್ಲಿ ದ್ಯಾಮಣ್ಣ ಅವರು ನಾಲ್ಕೈದು ಜನರಿಗೆ ಹಣ ಹಂಚಿಕೆ ಮಾಡಿರುವುದು ಕಾಣಿಸಿದೆ. ಅಲ್ಲದೆ, ಅವರು ನಿಂತಿದ್ದ ಸ್ಥಳದ ಪಕ್ಕದಲ್ಲಿ ಬಿಜೆಪಿ ಬಾವುಟ ಇರುವ ವಾಹನ ಸಹ ನಿಂತಿದೆ.

ರಾಜ್ಯದ 15 ಕ್ಷೇತ್ರಗಳಲ್ಲಿ ಡಿ. 5ರಂದು ಉಪ ಚುನಾವಣೆ ನಡೆಯಲಿದೆ. ಯಲ್ಲಾಪುರದಲ್ಲಿ ಅನರ್ಹ ಶಾಸಕ ಶಿವರಾಂ ಹೆಬ್ಬಾರ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಮತ್ತು ಶಿವರಾಂ ಹೆಬ್ಬಾರ್ ನಡುವೆ ನೇರ ಹಣಾಹಣಿ ಇದೆ.
ಯಲ್ಲಾಪುರದ 231 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,72,630 ಮತದಾರರಿದ್ದಾರೆ. ಅವರಲ್ಲಿ ಪುರುಷರು- 87779, ಮಹಿಳೆಯರು- 84507 ಸಂಖ್ಯೆಯಲ್ಲಿದ್ದಾರೆ.
ಬ್ರಾಹ್ಮಣರು- 26,000, ಮರಾಠ -23,000, ಎಸ್.ಸಿ- 21,000, ಲಿಂಗಾಯತ- 21,000, ನಾಮಧಾರಿ-20,000, ಮುಸ್ಲಿಂ-20,000, ಗೌಳಿ- 11,000, ಎಸ್‌ಟಿ- 8000, ಕ್ರಿಶ್ಚಿಯನ್-3000, ಗಂಗಾಮತ-3000, ಒಕ್ಕಲಿಗ-2000, ಕುರುಬ-1500, ಮಡಿವಾಳ -1500, ಕುಣಬಿ-1500, ಜೈನ್ -800, ಸವಿತಾ ಸಮಾಜ-600, ನಾಡವರ-500, ರಜಪೂತ- 500, ಉಪ್ಪಾರ-500 ಮತದಾರರು ಇದ್ದಾರೆ.












Click it and Unblock the Notifications