ಶಿರಸಿ: ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ 'ಜೈಲ್ ಭರೋ' ಚಳವಳಿ
ಶಿರಸಿ, ಡಿಸೆಂಬರ್ 14 :' ರಾಜ್ಯ ಸರ್ಕಾರ ಪ್ರೇರೇಪಿತ ಭಯೋತ್ಪಾದನೆಯ ವಿರುದ್ಧ ಇಡೀ ರಾಜ್ಯದಾದ್ಯಂತ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು' ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಘೋಷಿಸಿದರು.
ಶಿರಸಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಡಿ. 19ರಿಂದ ಉತ್ತರ ಕನ್ನಡದಿಂದ ಈ ಕಾರ್ಯಕ್ರಮ ಪ್ರಾರಂಭಿಸಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಈ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹೊನ್ನಾವರದಲ್ಲಿ ಇಂದು ಕಾವ್ಯಾ ನಾಯ್ಕ ಮೇಲೆ ಚಾಕು ಇರಿತ ನಡೆದಿರುವುದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದ ಅವರು ಸ್ವಜನ ಪಕ್ಷಪಾತದ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು ನೈತಿಕತೆ ಕಳೆದುಕೊಂಡಿದ್ದಾರೆ. ಸರ್ಕಾರ ಹೇಳಿದಂತೆ ಅಧಿಕಾರಿಗಳು ಕೇಳುತ್ತಾರೆ ಎಂದು ದೂರಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಗಲಭೆಯನ್ನು ನಿಯಂತ್ರಿಸಲು ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದ ಅವರು ಶಿರಸಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರೇ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದರು.
ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಸರ್ಕಾರ ಸಿಬಿಐ ಗೆ ಹಸ್ತಾಂತರಿಸಿದೆ. ಮೇಲ್ನೋಟಕ್ಕೆ ಇದು ಸತ್ಯವಾದರೂ ದಾಖಲೆಗಳ ನಾಶ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯನ್ನು ಸರ್ಕಾರಿ ಆಸ್ಪತ್ರೆ ಯಲ್ಲಿ ನಡೆಸದೇ ಖಾಸಗಿ ಆಸ್ಪತ್ರೆಯಲ್ಲಿ ಮಾಡಿರುವುದು ಅನುಮಾನ ಮೂಡಿಸಿದೆ ಎಂದರು.
ಸಿದ್ದರಾಮಯ್ಯ ಅವರು ತಮ್ಮ ಬಗ್ಗೆ ನೀಡಿದ್ದ ಹೇಳಿಕೆ ಬಗ್ಗೆ ಮಾತನಾಡಿದ ಅವರು 'ಕೇಂದ್ರ ಸಚಿವರಾಗಲು ಅನಂತಕುಮಾರ ಹೆಗಡೆಗೆ ಅರ್ಹತೆ ಇಲ್ಲ ಎನ್ನುವ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವ ಅರ್ಹತೆ ಇದೆಯೇ' ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲೇ ಅಸಮಾಧಾನ ಇದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಿಗೆ ಅವರ ಬಗ್ಗೆ ಒಲವಿಲ್ಲ ಎಂದರು.












Click it and Unblock the Notifications