ಪ್ರಕಾಶ್ ರೈ ಕೂತಿದ್ದ ವೇದಿಕೆ ಸ್ವಚ್ಛಗೊಳಿಸಿದ ಬಿಜೆಪಿ ಕಾರ್ಯಕರ್ತರು
ಶಿರಸಿ, ಜನವರಿ 16: ನಟ ಪ್ರಕಾಶ್ ರೈ ಕೂತಿದ್ದ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ ಸ್ವಚ್ಛಗೊಳಿಸಿದ್ದಾರೆ.
ನಟ ಪ್ರಕಾಶ್ ರೈ ಶನಿವಾರ ಶಿರಸಿಯ ರಾಘವೇಂದ್ರ ಮಠದಲ್ಲಿ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆ ಹಾಗೂ ಮಠದ ಆವರಣವನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸೋಮವಾರ ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಿ ಪೂಜೆ ಮಾಡಿದರು.
'ಪ್ರೀತಿ ಪದಗಳ ಪಯಣ' ಆಯೋಜನಾ ಸಮಿತಿಯು, ಇಲ್ಲಿನ ರಾಘವೇಂದ್ರ ಮಠದಲ್ಲಿ ಶನಿವಾರ 'ನಮ್ಮ ಸಂವಿಧಾನ ನಮ್ಮ ಹೆಮ್ಮೆ' ಹೆಸರಿನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಮಾರಂಭ ಉದ್ಘಾಟಿಸಿ ಮಾತನಾಡಿದ್ದ ಪ್ರಕಾಶ್ ರೈ, ಸಂವಿಧಾನ ಬದಲಾಯಿಸುವ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನೀಡಿದ ಹೇಳಿಕೆಯನ್ನು ಟೀಕಿಸಿದ್ದರು. ದೇಶಕ್ಕೆ ದೊಡ್ಡ ರೋಗವೊಂದು ಅಂಟಿದೆ ಎಂದು ಕೋಮುವಾದದ ವಿರುದ್ಧ ಹರಿಹಾಯ್ದಿದ್ದರು.

'ಗೋಮಾಂಸ ಭಕ್ಷಣೆ ಮಾಡುವ ಹಾಗೂ ಹಿಂದೂ ದೇವತೆಗಳನ್ನು ಅಪಮಾನ ಮಾಡುವ ವ್ಯಕ್ತಿಗಳ ಭೇಟಿಯಿಂದ ಶಿರಸಿ ನಗರವೇ ಅಪವಿತ್ರವಾದಂತಾಗಿದೆ. ಇಂತಹ ಸೋಗಲಾಡಿ ಬುದ್ಧಿಜೀವಿ ಪ್ರಕಾಶ್ ರೈ ಅವರನ್ನು ಸಮಾಜ ಕ್ಷಮಿಸದು. ಈ ಪ್ರಯುಕ್ತ ಕಾರ್ಯಕ್ರಮ ನಡೆದ ಧಾರ್ಮಿಕ ಕ್ಷೇತ್ರವನ್ನು ಶುದ್ಧಗೊಳಿಸಲಾಯಿತು' ಎಂದು ಬಿಜೆಪಿ ಯುವ ಮೋರ್ಚಾದ ನಗರದ ಘಟಕದ ಅಧ್ಯಕ್ಷ ವಿಶಾಲ್ ಮರಾಠೆ ಹೇಳಿದರು.
ಬಿಜೆಪಿ ಸದಸ್ಯರು ಗೋಮುತ್ರ ಸಿಂಪಡಿಸಿದ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ ಅವರು 'ಬಿಜೆಪಿ ಅವರು ನಾನು ಎಲ್ಲೆಲ್ಲೆ ಹೋಗುತ್ತೇನೊ ಅಲ್ಲೆಲ್ಲಾ ಹೀಗೆ ಶುದ್ಧೀಕರಣ ಮಾಡುತ್ತಾರಾ?' ಎಂದು ವ್ಯಂಗ್ಯ ಮಾಡಿದ್ದಾರೆ.












Click it and Unblock the Notifications