ಸಿದ್ದಗಂಗಾ ಶ್ರೀಗಳ ಆರೋಗ್ಯ ಸ್ಥಿರವಾಗಿದೆ, ಆತಂಕ ಬೇಡ: ಕುಮಾರಸ್ವಾಮಿ
ಶೃಂಗೇರಿ, ಡಿಸೆಂಬರ್ 06: ಸಿದ್ದಗಂಗಾ ಶ್ರೀಗಳ ಆರೋಗ್ಯ ಸ್ಥಿರವಾಗಿದೆ, ರಾಜ್ಯದ ಜನ ಆತಂಕಕ್ಕೆ ಒಳಗಾಗಬಾರದು ಎಂದು ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಶೃಂಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಆರೋಗ್ಯದ ಬಗ್ಗೆ ಕ್ಷಣ-ಕ್ಷಣದ ಮಾಹಿತಿಯನ್ನು ತರಿಸಿಕೊಳ್ಳುತ್ತಿದ್ದೇನೆ. ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಈಗ ಸುಧಾರಿಸಿದೆ ಎಂದು ಹೇಳಿದರು.

ಶ್ರೀಗಳ ಆರೋಗ್ಯದ ಬಗ್ಗೆ ಸಿದ್ದಗಂಗೆಯ ಕಿರಿಯ ಶ್ರೀಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ, ಅವರೂ ಸಹ ಅಭಯ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದರೆ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ರಾಜ್ಯ ಕಾರ್ಯದರ್ಶಿಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಿದ್ದೇನೆ, ಶ್ರೀಗಳು ಇನ್ನೂ ಹೆಚ್ಚು ಕಾಲ ನಮ್ಮೊಂದಿಗೆ ಇರಲೆಂದು ಶಾರದಾಂಬೆಯಲ್ಲಿ ಬೇಡಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಸಿದ್ದಗಂಗಾ ಶ್ರೀಗಳ ಚಿಕಿತ್ಸೆಗೆಂದು ಇಂದು ಚೆನ್ನೈನಿಂದ ತಜ್ಞ ವೈದ್ಯರ ತಂಡ ಸಿದ್ದಗಂಗೆಗೆ ಆಗಮಿಸಿದೆ. ಅವರಿಗೆ ಮಠದಲ್ಲಿಯೇ ಚಿಕಿತ್ಸೆ ನಡೆಯುತ್ತಿದೆ. ಅವರ ಆರೋಗ್ಯ ಈಗ ಸುಧಾರಿಸಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications