ಶಿವಮೊಗ್ಗ: ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಯುವ ಕಾಂಗ್ರೆಸ್ ಆಗ್ರಹ
ಶಿವಮೊಗ್ಗ, ಡಿಸೆಂಬರ್ 7: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿ ಹಾಗೂ ಆತನ ಸಹಪಾಠಿಗಳು ಅಪ್ರಾಪ್ತ ಬಾಲಕಿಯ ಮೇಲೆ ಶನಿವಾರ ಅತ್ಯಾಚಾರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇಂತಹ ಘಟನೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆಗಿರುವುದು ತೀವ್ರ ಖಂಡನೀಯವಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟಿಸಿದೆ.
ಈ ವೇಳೆ ಯುವ ಕಾಂಗ್ರೆಸ್ ಮುಖಂಡ ರಂಗನಾಥ್ ಮಾತನಾಡಿ, ಆಸ್ಪತ್ರೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದ ಬರುವ ರೋಗಿಗಳಿಗೆ ಮತ್ತು ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಪ್ರಕರಣವನ್ನು ನೋಡಿದಾಗ ರಕ್ಷಣೆ ವ್ಯವಸ್ಥೆ ಹೇಗಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ಎಂದರು.
ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿಯೇ ಇಂತಹ ಕೃತ್ಯ ನಡೆದಿದ್ದು, ಕಳೆದ ವಾರ ಇದೇ ರೀತಿ ರಾಜ್ಯದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲೂ ಸಹ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸಾರ್ವಜನಿಕರಿಗೆ ಹಾಗೂ ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕಾದ ಸರಕಾರ ಕಣ್ಮುಚ್ಚಿ ಕುಳಿತಿರುವುದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ತಿಳಿಸಿದರು.

ಇಲ್ಲಸಲ್ಲದ ಧರ್ಮ, ಜಾತಿ, ಕೋಮು ವಿಚಾರದಲ್ಲಿ ಹೇಳಿಕೆಗಳನ್ನು ನೀಡುತ್ತಾ ಸಾಂತ್ವನ ಹೇಳುವ ಬಿಜೆಪಿಯ ಶಾಸಕರು ಹಾಗೂ ಸಚಿವರುಗಳು ಇಂತಹ ವಿಚಾರದಲ್ಲಿ ಮೌನ ವಹಿಸಿರುವುದು ತೀವ್ರ ಖಂಡನೀಯವೆಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂತಹ ವ್ಯಕ್ತಿಗಳನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಹಾಗೂ ನೇಮಿಸಿಕೊಂಡ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಿ ವಿಚಾರಣೆ ನಡೆಸಬೇಕು. ಇಂತಹ ಅತ್ಯಾಚಾರಿಗಳಿಗೆ ಕಾನೂನು ಕ್ರಮ ಕೈಗೊಂಡು ಗಲ್ಲು ಶಿಕ್ಷೆಯನ್ನು ನೀಡಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ ಗಿರೀಶ್, ನಗರ ಉಪಾಧ್ಯಕ್ಷರಾದ ಕುಮಾರೇಶ್, ಪುಷ್ಪಕ್ ಕುಮಾರ್, ರಾಜ್ಯ ಕಾರ್ಯದರ್ಶಿ ಆರ್.ಕಿರಣ್ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್ ತಂಗರಾಜ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಲ್ ಪವನ್, ರಾಕೇಶ್ ಮುತ್ತಿಗೆ, ಗಗನ್ ಸತೀಶ್ ಇದ್ದರು.












Click it and Unblock the Notifications