ಯಡಿಯೂರಪ್ಪ ಮಾಟ, ಮಂತ್ರದಿಂದ ಸರ್ಕಾರ ಬೀಳಿಸಲು ಸಾಧ್ಯವಿಲ್ಲ: ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ, ಡಿಸೆಂಬರ್ 1: ಯಡಿಯೂರಪ್ಪ ಚಿಕಿತ್ಸೆಗೆಂದು ಕೇರಳಕ್ಕೆ ತೆರಳಿಲ್ಲ ಬದಲಾಗಿ ಮಾಟ, ಮಂತ್ರ ಮಾಡಿಸಲು ಹೋಗಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಯಾವುದೇ ಚಿಕಿತ್ಸೆ ಪಡೆದುಕೊಳ್ಳಲು ಕೇರಳಕ್ಕೆ ಹೋಗಿಲ್ಲ, ಬದಲಾಗಿ ಶೋಭಾ ಕರಂದ್ಲಾಜೆ ಅವರೊಂದಿಗೆ ಸೇರಿಕೊಂಡು ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಲೋಕಸಭಾ ಉಪ ಚುನಾವಣೆಯ ಬಳಿಕ ನಿರಂತರವಾಗಿ ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ಮಾಡುತ್ತಿರುವ ಬೇಳೂರು ಗೋಪಾಲಕೃಷ್ಣ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ. ಕರ್ನಾಟಕದಲ್ಲೇ ಜಿಂದಾಲ್ ಸೇರಿದಂತೆ ಅನೇಕ ಪ್ರಕೃತಿ ಚಿಕಿತ್ಸಾ ಕೇಂದ್ರಗಳಿವೆ ಆದರೆ ಅದನ್ನು ಬಿಟ್ಟು ಕೇರಳಕ್ಕೆ ಹೋಗಿರುವುದು ಏಕೆ ಎಂದು ಪ್ರಶ್ನಿಸಿದರು.

ಅಲ್ಲಿ ಕೈಗೆ ಪಟ್ಟಿ ಕಟ್ತಾರಂತೆ ಅದನ್ನು ಕಟ್ಟಿಸಿಕೊಂಡರೆ ಶತ್ರುಗಳನ್ನು ಎದುರಿಸುವ ಶಕ್ತಿ ಬರುತ್ತಂತೆ ಆದರೆ ಏನೇ ಮಾಟ, ಮಂತ್ರ ಮಾಡಿಸಿದರೂ ಸಮ್ಮಿಶ್ರ ಸರ್ಕಾರಕ್ಕೆ ಏನೂ ಹಾನಿ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಭದ್ರವಾಗಿದೆ ಎಂದು ಹೇಳಿದರು.












Click it and Unblock the Notifications