ನರೇಂದ್ರ ಮೋದಿ 3.0 ಸರ್ಕಾರ: ಶಿವಮೊಗ್ಗಕ್ಕೆ ಸಚಿವ ಸ್ಥಾನ?
ಶಿವಮೊಗ್ಗ, ಜೂನ್ 08; ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಭಾನುವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ 17 ಮತ್ತು ಜೆಡಿಎಸ್ 2 ಸೀಟುಗಳಲ್ಲಿ ಜಯಗಳಿಸಿವೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು, ಸೀಟು ಹಂಚಿಕೊಂಡು ಚುನಾವಣೆ ಎದುರಿಸಿದ್ದವು.

ನರೇಂದ್ರ ಮೋದಿ 3.0 ಸರ್ಕಾರದಲ್ಲಿ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ ಸಿಗಲಿದೆ? ಎಂಬುದು ಸದ್ಯ ಚರ್ಚೆಯ ವಿಷಯವಾಗಿದೆ. ನರೇಂದ್ರ ಮೋದಿ 2.0 ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಈ ಬಾರಿಯ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ್ದಾರೆ.
ಶಿವಮೊಗ್ಗಕ್ಕೆ ಸಚಿವ ಸ್ಥಾನ?; ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ 7,78,721 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಗೀತಾ ಶಿವರಾಜ್ ಕುಮಾರ್ ಅವರನ್ನು 2,43,715 ಮತಗಳ ಅಂತರದಿಂದ ಸೋಲಿಸಿದ್ದಾರೆ. 4ನೇ ಬಾರಿಗೆ ಸಂಸದರಾಗಿ ರಾಘವೇಂದ್ರ ಆಯ್ಕೆಯಾಗಿದ್ದಾರೆ.
ಬಿ. ವೈ. ರಾಘವೇಂದ್ರ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಸಹೋದರ. ನರೇಂದ್ರ ಮೋದಿ 3.0 ಸರ್ಕಾರದಲ್ಲಿ 50 ವರ್ಷದ ಯುವ ಸಂಸದ ರಾಘವೇಂದ್ರ ಸಚಿವರಾಗಲಿದ್ದಾರೆಯೇ?.
2019ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂಪ್ಪ 2021ರಲ್ಲಿ ವಯಸ್ಸಿನ ಕಾರಣಕ್ಕೆ ರಾಜೀನಾಮೆ ಘೋಷಣೆ ಮಾಡಿದರು. ಆಗಲೇ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರಾಘವೇಂದ್ರಗೆ ಸಚಿವ ಸ್ಥಾನ ಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು.
ಆದರೆ ಶಿವಮೊಗ್ಗದ ಪಕ್ಕದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮೋದಿ ಸಂಪುಟದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆಯಾಗಿ ಕೆಲಸ ಮಾಡುತ್ತಿದ್ದರು. ಈ ಬಾರಿ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣೆಗೆ ನಿಂತು ಸ್ಪರ್ಧೆ ಮಾಡಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಮೂವರು ಮಾಜಿ ಸಿಎಂಗಳು ಗೆಲುವು ಸಾಧಿಸಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಮೈತ್ರಿಕೂಟದ ಎಚ್. ಡಿ. ಕುಮಾರಸ್ವಾಮಿ, ಹಾವೇರಿ-ಗದಗದಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಜಯಗಳಿಸಿದ್ದು, ಒಬ್ಬರು ಮೋದಿ ಸಂಪುಟ ಸೇರುವುದು ಖಚಿತ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿ. ಎಸ್. ಯಡಿಯೂರಪ್ಪರನ್ನು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕ ಮಾಡಲಾಗಿದೆ. ಬಿಜೆಪಿ ಪಕ್ಷದ ಅತ್ಯುನ್ನತ ಸಮಿತಿ ಇದಾಗಿದೆ. ಅಲ್ಲದೇ ಬಿ. ವೈ. ವಿಜಯೇಂದ್ರರನ್ನು 2023ರ ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಯಡಿಯೂರಪ್ಪ ಕುಟುಂಬದ ಇಬ್ಬರು ಈಗಾಗಲೇ ಪಕ್ಷದ ಪ್ರಮುಖ ಹುದ್ದೆಯಲ್ಲಿರುವ ಕಾರಣ ಬಿ. ವೈ. ರಾಘವೇಂದ್ರಗೆ ಸಚಿವ ಸ್ಥಾನ ಸಿಗಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಶಿವಮೊಗ್ಗದ ಪಕ್ಕದ ಹಾವೇರಿ-ಗದಗದಲ್ಲಿ ಬಸವರಾಜ ಬೊಮ್ಮಾಯಿ ಜಯಗಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿಯಾದ ಅವರಿಗೆ ಸಚಿವ ಸ್ಥಾನ ಸಿಕ್ಕಿದರೆ ರಾಘವೇಂದ್ರ ಕೇಂದ್ರ ಮಂತ್ರಿಯಾಗುತ್ತಾರೆ ಎಂಬ ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಲಿದೆ.
ಶಿವಮೊಗ್ಗ ಪಕ್ಕದ ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮೊದಲ ಬಾರಿಗೆ, ಉಡುಪಿ-ಚಿಕ್ಕಮಗಳೂರಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸಹ ಮೊದಲ ಬಾರಿಗೆ ಗೆಲುವು ಕಂಡಿದ್ದಾರೆ. ಆದ್ದರಿಂದ ಪ್ರಾಂತ್ಯವಾರು ಸಚಿವ ಸ್ಥಾನ ಹಂಚಿಕೆ ಮಾಡಿದರೆ ಮಲೆನಾಡು ಪ್ರಾಂತ್ಯದಿಂದ ರಾಘವೇಂದ್ರ ಸಚಿವರಾಗಬೇಕಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ನಿವಾಸದಲ್ಲಿ ಶನಿವಾರ ಸಂಜೆ ಎನ್‌ಡಿಎ ಮೈತ್ರಿಕೂಟದ ಮಹತ್ವದ ಸಭೆ ನಡೆಯಲಿದೆ. ಯಾವ ಖಾತೆ ಯಾರಿಗೆ?. ಯಾವ ರಾಜ್ಯಕ್ಕೆ ಎಷ್ಟು ಸಚಿವ ಸ್ಥಾನ ಮುಂತಾದ ತೀರ್ಮಾನಗಳು ನಡೆಯುವ ನಿರೀಕ್ಷೆ ಇದೆ. ಭಾನುವಾರ ಮಧ್ಯಾಹ್ನದ ವೇಳೆಗೆ ಮೋದಿ ಸಂಪುಟ ಸೇರುವ ಸಚಿವರ ಪಟ್ಟಿ ಬಹಿರಂಗವಾಗುವ ಸಾಧ್ಯತೆ ಇದೆ.












Click it and Unblock the Notifications