ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ: ಒಳ ಒಪ್ಪಂದದ ರಹಸ್ಯ ಬಯಲು!
ಶಿವಮೊಗ್ಗ, ಮಾರ್ಚ್ 24: ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಾವು ಏರಿಸಿದ್ದಾರೆ. ಮೇ 7ರಂದು ಮತದಾನ ನಡೆಯಲಿದ್ದು, ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಪ್ರಚಾರ ಆರಂಭಿಸಿದ್ದಾರೆ.
ಪುತ್ರ ಕಾಂತೇಶ್‌ಗೆ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡ ಕೆ. ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯವ ಘೋಷಣೆ ಮಾಡಿದ್ದಾರೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್.

ಕೆ. ಎಸ್. ಈಶ್ವರಪ್ಪ ಜೊತೆ ಬಿಜೆಪಿ ನಾಯಕರು ನಡೆಸಿದ ಸಂಧಾನಗಳು ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸಿದಾಗಲೂ ಸಮಾವೇಶಕ್ಕೆ ಗೈರಾಗುವ ಮೂಲಕ ಈಶ್ವರಪ್ಪ ಸ್ವತಂತ್ರವಾಗಿ ಕಣಕ್ಕಿಳಿಯುವ ತೀರ್ಮಾನ ಅಚಲ ಎಂಬ ಸಂದೇಶ ನೀಡಿದ್ದಾರೆ.
ಪಕ್ಷೇತರ ಸ್ಪರ್ಧೆಯ ರಹಸ್ಯ ಬಯಲು: ಒಂದು ಕಾಲದಲ್ಲಿ ಬಿಜೆಪಿಯಲ್ಲಿದ್ದ ಈಗ ಕಾಂಗ್ರೆಸ್‌ನಲ್ಲಿರುವ ಆಯನೂರು ಮಂಜುನಾಥ ಈಶ್ವರಪ್ಪ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಶಿವಮೊಗ್ಗದ ಜನರು ಈ ಬಾರಿ ಗೀತಾ ಶಿವರಾಜ್ ಕುಮಾರ್ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ಶಿವಮೊಗ್ಗದಲ್ಲಿ ಮಾತನಾಡಿದ ಆಯನೂರು ಮಂಜುನಾಥ, "ಈಶ್ವರಪ್ಪನವರು ಸ್ಪರ್ಧಿಸುವ ಮೂಲಕ ಬಿ. ವೈ. ರಾಘವೇಂದ್ರರನ್ನು ಗೆಲ್ಲಿಸುವ ಒಳಒಪ್ಪಂದವಿದೆ. ಅವರೇ ಒಪ್ಪಿಕೊಂಡಂತೆ ಚುನಾವಣೆಯ ನಂತರ ಈಶ್ವರಪ್ಪರನ್ನು ರಾಜ್ಯಪಾಲರಾಗಿ, ಪುತ್ರ ಕಾಂತೇಶ್‌ಗೆ ಎಂಎಲ್‌ಸಿ ಸ್ಥಾನ ಸಿಗಲಿದೆ" ಎಂದು ದೂರಿದರು.
"ಬಿಜೆಪಿ ಮುಂದುವರೆದಿರುವ ಜಾತಿಗಳ ಮತ ಪಡೆದು ಹಿಂದುಳಿದ ಜಾತಿಗಳ ಮತಗಳನ್ನು ಒಡೆಯುವ ತಂತ್ರ ಇದರಲ್ಲಿದೆ. ಹೀಗೆ ಮಾಡದೇ ಇದ್ದರೆ ಐಟಿ ಅಧಿಕಾರಿಗಳು ಅವರ ಮನೆಯಲ್ಲಿ ಇರುತ್ತಾರೆ ಎಂಬ ಬೆದರಿಕೆಯೂ ಇದೆ. ಧೈರ್ಯ ಮಾಡುವ ಸ್ವಭಾವ ಈಶ್ವರಪ್ಪ ಅವರದ್ದು ಅಲ್ಲ. ಆದರೂ ಹಠ ಹಿಡಿದಿದ್ದಾರೆ. ಇದಕ್ಕೆ ಒಳ ಒಪ್ಪಂದೇ ಕಾರಣ" ಎಂದು ಆಯನೂರು ಮಂಜುನಾಥ ಆರೋಪಿಸಿದರು.
"ಬಿಜೆಪಿ ಬಂಡಾಯದ ಡಮ್ಮು ಕ್ಯಾಂಡಿಡೇಟ್ ಆಗಿ ಈಶ್ವರಪ್ಪ ಸ್ಪರ್ಧಿಸುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಹಿಂದುತ್ವವನ್ನು ದುರ್ಲಾಭ ಮಾಡಿಕೊಂಡು ಓಟು ಕೇಳುತ್ತಿದ್ದಾರೆ. ಅವರ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸದಿರುವುದು ನೋವಿನ ಸಂಗತಿ. ಕೂಡಲೇ ಆಯೋಗ ಅವರ ವಿರುದ್ಧ ದೂರು ದಾಖಲಿಸಬೇಕು" ಎಂದು ಆಯನೂರು ಮಂಜುನಾಥ ಒತ್ತಾಯಿಸಿದರು.
"ಯಡಿಯೂರಪ್ಪರನ್ನು ವಿರೋಧಿಸುವ ಒಂದಷ್ಟು ಜನರು ಇದ್ದಾರೆ. ಬಿಜೆಪಿಯ ಟಾರ್ಗೆಟ್ ಯಡಿಯೂರಪ್ಪ ಮತ್ತು ಬಿ. ವೈ. ವಿಜಯೇಂದ್ರ. ವಿಜಯೇಂದ್ರ ಇರಬಾರದು ಎಂಬ ಉದ್ದೇಶದಿಂದ ಈಶ್ವರಪ್ಪ ಅವರನ್ನು ಛೂ ಬಿಡಲಾಗಿದೆ. ನಾವು ಒಂದೇ ಗರಡಿಯಲ್ಲಿ ಬೆಳೆದವರು. ಅವರ ಮುಖವಾಡದ ಪಟ್ಟು ಗೊತ್ತಾಗಿದೆ. ಕೋರ್ ಕಮಿಟಿಯ ಮಾಹಿತಿ ನನ್ನ ಬಳಿ ಇದೆ" ಎಂದು ಆಯನೂರು ಹೇಳಿದರು.
"ಬಿಜೆಪಿಯ ಯಾವ ನಾಯಕರು ಈಶ್ವರಪ್ಪ ವಿರುದ್ಧ ಮಾತನಾಡಿಲ್ಲ. ರಾಜಕೀಯ ದಾಳವಾಗಿ ಈಶ್ವರಪ್ಪ ಅವರನ್ನು ಬಳಸಿಕೊಂಡಿದ್ದು, ಪ್ರಚಾರಕ್ಕಾಗಿ ಅವರನ್ನು ಕಣಕ್ಕಿಳಿಸಲಾಗಿದೆ. ಶೇ 40ರಷ್ಟು ಕಮೀಷನ್ ಆರೋಪ ಎದುರಿಸಿದ್ದ ಈಶ್ವರಪ್ಪಗೆ ಐಟಿ, ಇಡಿ ದಾಳಿಯ ಭಯವಿದೆ. ಆದ್ದರಿಂದ ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ" ಎಂದು ಆಯನೂರು ಮಂಜುನಾಥ ತಿಳಿಸಿದರು.
"ಶಿವಮೊಗ್ಗ ಜಿಲ್ಲೆಯ ಜನರು ಜಾಗೃತರಾಗಿದ್ದಾರೆ. ಅವರು ಬಿಜೆಪಿಯ ಬಿ. ವೈ. ರಾಘವೇಂದ್ರ ಮತ್ತು ಈಶ್ವರಪ್ಪರನ್ನು ತಿರಸ್ಕಾರ ಮಾಡಲಿದ್ದಾರೆ. ದಿಟ್ಟ ರಾಜಕಾರಣಿ ಬಂಗಾರಪ್ಪ ಮತ್ತು ಅವರ ಕುಟುಂಬದವರು ಹೊಂದಾಣಿಕೆ ಮಾಡಿಕೊಳ್ಳುವವರು ಅಲ್ಲ. ಜನರು ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಲಿದ್ದಾರೆ" ಎಂದು ಆಯನೂರು ಮಂಜುನಾಥ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications