ಶಿವಮೊಗ್ಗ: ಫುಟ್‌ಪಾತ್ ಕೆಳಗೆ ವಿಚಿತ್ರ ಶಬ್ದ, ಹೊಗೆ ಪ್ರತ್ಯಕ್ಷ, ಆತಂಕ
ಶಿವಮೊಗ್ಗ, ಅಕ್ಟೋಬರ್, 20; ನಗರದ ನಿರ್ಮಲಾ ಆಸ್ಪತ್ರೆ ಬಳಿ ಇರುವ ಫುಟ್‌ಪಾತ್ ಕೆಳಗೆ ವಿಚಿತ್ರ ಶಬ್ದ ಕೇಳಿಸಿದ್ದು, ಹೊಗೆ ಎಲ್ಲೆಡೆ ಹರಡಿದೆ. ಭೂಮಿಯಿಂದ ಉತ್ಪತ್ತಿಯಾದ ಹೊಗೆಯನ್ನು ಕಂಡು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಫುಟ್‌ಪಾತ್‌ನಿಂದ ಹೊಗೆ, ಆತಂಕ
ಸ್ಮಾರ್ಟ್ ಸಿಟಿ ಫುಟ್‌ಪಾತ್ ಅಡಿಯಲ್ಲಿ ವಿಚಿತ್ರ ಶಬ್ದ ಕೇಳಿಸಿದೆ. ಕೆಲವೇ ಕ್ಷಣದಲ್ಲಿ ಹೊಗೆ ಬರಲು ಶುರುವಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲಿದ್ದ ಸ್ಥಳೀಯರು ಕೂಡಲೇ ಮಹಾನಗರ ಪಾಲಿಕೆ ಮತ್ತು ಮೆಸ್ಕಾಂ ಇಲಾಖೆಗೆ ಕರೆ ಮಾಡಿದ್ದಾರೆ. 'ಬೆಳಗ್ಗೆ 9 ಗಂಟೆ ಸೂಮಾರಿಗೆ ಅಂಗಡಿ ಬಾಗಿಲು ತೆಗೆಯುವಾಗ ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ಚಲಿಸುತ್ತಿರುವಂತೆ ಶಬ್ದ ಕೇಳಿಸಿತು. ಹತ್ತಿರ ಬಂದು ನೋಡಿದಾಗ ಹೊಗೆ ಬರುತ್ತಿತ್ತು. ಕೂಡಲೇ ಪಾಲಿಕೆ ಸದಸ್ಯರು ಮತ್ತು ಮೆಸ್ಕಾಂಗೆ ಕರೆ ಮಾಡಿ ಮಾಹಿತಿ ನೀಡಿದೆವು. ಘಟನೆಯ ವಿಡಿಯೋ ಮಾಡಿ ಅಧಿಕಾರಿಗಳಿಗೆ ಕಳುಹಿಸಿದೆವು' ಎಂದು ವ್ಯಾಪಾರಿ ರಿಷಬ್ ಜೈನ್ ಹೇಳಿದ್ದಾತರ.
ವಿದ್ಯುತ್ ಪೂರೈಕೆ ಕಡಿತ
ಫುಟ್‌ಪಾತ್ ಕೆಳಗೆ ಹೊಗೆ ಬರುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಸಿಬ್ಬಂದಿ ಕೂಡಲೇ ವಿದ್ಯುತ್ ಸ್ಥಗಿತಗೊಳಿಸಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಇದರಿಂದ ಸ್ಥಳೀಯರು ನಿಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಸ್ಮಾರ್ಟ್ ಸಿಟಿ ಯೋಜನೆಯಡಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಲಾಗಿದೆ. ಇದೇ ಕೇಬಲ್ ಮೂಲಕ ಮನೆಗಳಿಗೆ ವಿದ್ಯುತ್ ಪೂರೈಕೆ ಆಗಲಿದೆ. ತಾಂತ್ರಿಕ ದೋಷ ಉಂಟಾಗಿದ್ದು, ಸ್ಥಳದಲ್ಲಿ ಶಬ್ದ ದ ಜೊತೆಗೆ ಹೊಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಸ್ಮಾರ್ಟ್ ಸಿಟಿ ಯೋಜನೆಯ ಭೂಗತ ವಿದ್ಯುತ್ ಕೇಬಲ್‌ನಿಂದಾಗಿ ಅಲ್ಲಲ್ಲಿ ಸಮಸ್ಯೆ ಆಗಿದೆ. ಇತ್ತೀಚೆಗೆ ಹೊಸಮನೆ ಬಡಾವಣೆಯಲ್ಲಿ ರಾತ್ರಿ ಗ್ರೌಂಡಿಂಗ್ ಸಂಭವಿಸಿತ್ತು. ಕೆಲವು ಕಡೆ ವಿದ್ಯುತ್ ಶಾರ್ಟ್ ಆಗಿರುವ ವರದಿ ಆಗಿದೆ. ಇವುಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿದ್ದು, ಇದು ಜನರಲ್ಲಿ ಆತಂಕ ಮೂಡಿಸಿತ್ತು.

ಶಿವಮೊಗ್ಗದಲ್ಲಿ ಈ ಹಿಂದೆಯೂ ಕೂಡ ಭೂಮಿ ಕಂಪಿಸಿದೆ ಎನ್ನುವ ಸುದ್ದಿಗಳು ಹಬ್ಬಿತ್ತು. ಆಗಲೂ ಕೂಡ ಜನರು ಅತಂಕಕ್ಕೆ ಒಳಗಾಗಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಜನರ ಗೊಂದಲಗಳಿಗೆ ತೆರೆ ಎಳೆದಿದ್ದರು.












Click it and Unblock the Notifications