Bhadra Dam: ಭದ್ರಾ ಡ್ಯಾಂನಿಂದ ನಾಲೆಗಳಿಗೆ ನೀರು, ವೇಳಾಪಟ್ಟಿ ಪ್ರಕಟ
ಶಿವಮೊಗ್ಗ, ಜನವರಿ 05: ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ರೈತರ ಬದುಕಿಗೆ ಬಹುದೊಡ್ಡ ಆಸರೆ ಭದ್ರಾ ಜಲಾಶಯ. ಈ ವರ್ಷ ಉತ್ತಮ ಮುಂಗಾರು ಮಳೆಯ ಕಾರಣ ಡ್ಯಾಂ ಭರ್ತಿಯಾಗಿದ್ದು, ಬೇಸಿಗೆಯ ಬೆಳೆಗಳಿಗೂ ನೀರು ಸಿಗುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸುವ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಜನವರಿ 5ರ ಭಾನುವಾರದಿಂದಲೇ ನೀರು ಹರಿಸಲಾಗುತ್ತದೆ ಎಂದು ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಲಾಗಿದೆ.
ವಿದೇಶದಲ್ಲಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯನ್ನು ಶನಿವಾರ ನಡೆಸಿದರು. ಈ ಸಭೆಯಲ್ಲಿ ಡ್ಯಾಂನಿಂದ ನಾಲೆಗಳಿಗೆ ನೀರು ಹರಿಸುವುವ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ರೈತರ ಮಾಹಿತಿಗಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಈ ಕುರಿತು ಸಚಿವ ಮಧು ಬಂಗಾರಪ್ಪ ಫೇಸ್‌ಬುಕ್ ಪೋಸ್ಟ್ ಹಾಕಿದ್ದು, 'ಭದ್ರಾ ಎಡದಂಡೆ ಕಾಲುವೆಗೆ ನಾಳೆ ರಾತ್ರಿಯಿಂದಲೇ (ಜನವರಿ 05 ರಂದು) ನೀರು' ಎಂದು ಮಾಹಿತಿ ನೀಡಿದ್ದಾರೆ. ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2024-25ನೇ ಸಾಲಿನ ಬೇಸಿಗೆ ಬೆಳೆಗೆ ನೀರು ಹರಿಸುವ ಕುರಿತು ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು ಅವರೊಂದಿಗೆ ಸಮಗ್ರವಾಗಿ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಯಿತು ಎಂದು ಸಚಿವರು ಹೇಳಿದ್ದಾರೆ.
ಈಗಾಗಲೇ ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆಯಲ್ಲಿ ರೈತರು ನಿರತರಾಗಿದ್ದು, ಬೆಳೆ ಬೆಳೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಡದಂಡೆ ಕಾಲುವೆಗೆ ನಾಳೆ ರಾತ್ರಿಯಿಂದಲೇ ( ಜನವರಿ 5 ರಂದು ) ನೀರು ಹರಿಸುವಂತೆ ಸೂಚಿಸಲಾಯಿತು. ಬಲದಂಡೆ ಕಾಲುವೆಗಳಿಗೆ ಜನವರಿ 8ರ ರಾತ್ರಿಯಿಂದಲೇ ನೀರು ಹರಿಸುವಂತೆ ಸೂಚಿಸಲಾಯಿತು ಎಂದು ತಿಳಿಸಿದ್ದಾರೆ.
ಈ ಸಭೆಯಲ್ಲಿ ಶಾಸಕರಾದ ಚನ್ನಬಸಪ್ಪ, ಡಿ. ಜಿ. ಶಾಂತನಗೌಡ್ರು, ಬಿ. ಪಿ. ಹರೀಶ್, ಲತಾ ಮಲ್ಲಿಕಾರ್ಜುನ್, ಬಸವಂತಪ್ಪ, ವಿಧಾನ ಪರಿಷತ್ ಸದಸ್ಯರಾದ ಬಲ್ಕಿಶ್ ಬಾನು, ಕಾಡ ಅಧ್ಯಕ್ಷರಾದ ಅಂಶುಮಂತ್, ರೈತ ಮುಖಂಡರಾದ ಕೆ. ಟಿ. ಗಂಗಾಧರಪ್ಪ, ಬಸವರಾಜಪ್ಪ, ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ಹಲವು ಪಾಲ್ಗೊಂಡಿದ್ದರು.
ಎಷ್ಟು ದಿನ ನೀರು?: ಕಾಡ ಅಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ, "ಭದ್ರಾ ಡ್ಯಾಂನಿಂದ ಕಾಲುವೆಗಳಿಗೆ ನಿರಂತರವಾಗಿ 120 ದಿನ ನೀರು ಹರಿಸಲಾಗುತ್ತದೆ. ಎಡದಂಡೆ ನಾಲೆಗೆ 380 ಕ್ಯೂಸೆಕ್, ಬಲದಂಡೆ ನಾಲೆಗೆ 2650 ಕ್ಯುಸೆಕ್ ನೀರು ಹರಿಸಲಾಗುತ್ತದೆ" ಎಂದು ಮಾಹಿತಿ ನೀಡಿದರು.
ಪ್ರಸ್ತುತ ಡ್ಯಾಂನಲ್ಲಿ 66.964 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ರೈತರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಉತ್ತಮವಾದ ಬೆಲೆ ಬೆಳೆಯಬಹುದು. ರೈತರಿಗೆ ಯಾವುದೇ ತೊಂದರೆ ಆಗದಂತೆ ನೀರು ಹರಿಸಲು ಸಚಿವ ಮಧು ಬಂಗಾರಪ್ಪ ಸಭೆಯಲ್ಲಿ ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ರೈತರಿಗೆ ಭದ್ರಾ ನದಿ ನೀರು ಆಸರೆಯಾಗಿದೆ. ನಾಲೆಗಳಲ್ಲಿ ನೀರು ಬರುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಮಲೆಬೆನ್ನೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭತ್ತದ ನಾಟಿಗೆ ಸಸಿಮಡಿಯನ್ನು ರೈತರು ಬೋರ್‌ವೆಲ್ ನೀರಿನಲ್ಲಿ ತಯಾರು ಮಾಡಿಕೊಂಡಿದ್ದಾರೆ.
ಈ ಬಾರಿ ಭದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು ರೈತರು ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ಇಂಜಿನಿಯರ್‌ಗಳು ಡ್ಯಾಂ ನೀರನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.












Click it and Unblock the Notifications