ಶಿವಮೊಗ್ಗ : ಒಂದೇ ತಿಂಗಳಲ್ಲಿ ಇಬ್ಬರು ರೌಡಿ ಶೀಟರ್ ಹತ್ಯೆ
ಶಿವಮೊಗ್ಗ, ಜನವರಿ 31 : ಶಿವಮೊಗ್ಗ ನಗರದಲ್ಲಿ ಒಂದೇ ತಿಂಗಳ ಅಂತರದಲ್ಲಿ ಇಬ್ಬರು ರೌಡಿ ಶೀಟರ್‌ಗಳ ಹತ್ಯೆಯಾಗಿದೆ. ರೌಡಿ ಶೀಟರ್‌ಗಳು ಎದುರಾಗಳಿಗಳನ್ನು ರಸ್ತೆಯಲ್ಲಿ ಕೊಚ್ಚಿ ಪರಾರಿಯಾಗುತ್ತಿದ್ದು, ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬುಧವಾರ ರಾತ್ರಿ ಮಾರ್ಕೆಟ್ ಗೋವಿಂದ ಎಂಬ ರೌಡಿ ಶೀಟರ್ ಹತ್ಯೆ ನಡೆದಿದೆ. ಪೊಲೀಸ್ ದಾಖಲೆಗಳ ಪ್ರಕಾರ ನಾಪತ್ತೆಯಾಗಿದ್ದ ಗೋವಿಂದನನ್ನು ಕೊಲೆ ಮಾಡಿ, ಹೆಣವನ್ನು ಮಾರುತಿ ಓಮ್ನಿಯಲ್ಲಿ ತಂದು ಗೌರವ್ ಲಾಡ್ಜ್ ಸಮೀಪ ಎಸೆದು ಹೋಗಲಾಗಿದೆ.
ರೌಡಿ ಶೀಟರ್ ಮಾರ್ಕೆಟ್ ಲೋಕಿ ಅಣ್ಣ ಮಾರ್ಕೆಟ್ ಗೋವಿಂದ ಹತ್ಯೆಗೆ ಹಳೇ ದ್ವೇಷವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗೌರಿ-ಗಣೇಶ್ ಹಬ್ಬದ ಸಮಯದಲ್ಲಿ ಮಾರ್ಕೆಟ್ ಗಿರಿ ಎಂಬುವವನನ್ನು ಲೋಕಿ ಹತ್ಯೆ ಮಾಡಿದ್ದ.

ಈ ದ್ವೇಷದ ಹಿನ್ನಲೆಯಲ್ಲಿ ಕರಾಬ್ ಶಿವು ಮತ್ತು ಮಾರ್ಕೆಟ್ ಗಿರಿ ಕಡೆಯ ಹುಡುಗರು ಮಾರ್ಕೆಟ್ ಗೋವಿಂದನನ್ನು ಹತ್ಯೆ ಮಾಡಿದ್ದಾರೆ. ಗೋವಿಂದನ ತಮ್ಮ ತುಳಸಿರಾಮ ಸಹ ಇದೇ ರೀತಿ ಹತ್ಯೆಯಾಗಿದ್ದ.
ಮಾರ್ಕೆಟ್ ಗಿರಿ ಹತ್ಯೆ ಬಳಿಕ ಮಾರ್ಕೆಟ್ ಲೋಕಿ ತಲೆಮರೆಸಿಕೊಂಡಿದ್ದಾನೆ. ಆತನು ಕೈಗೆ ಸಿಗದ ಕಾರಣ ಮಾರ್ಕೆಟ್ ಗೋವಿಂದನನ್ನು ಹತ್ಯೆ ಮಾಡಲಾಗಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ? ಎಂದು ಪೊಲೀಸರು ಹೇಳಬೇಕು.
ಮಾರ್ಕೆಟ್ ಗೋವಿಂದನ ಶವ ಪತ್ತೆಯಾದ ಸ್ಥಳಕ್ಕೆ ಎಸ್ಪಿ ಅಭಿನವ್ ಖರೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications