ರಂಜಾನ್ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ: ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲು
ಶಿವಮೊಗ್ಗ, ಏಪ್ರಿಲ್ 02: ಇನ್ನೇನು ಕೆಲವೇ ದಿನಗಳಲ್ಲಿ ರಂಜಾನ್ ಹಬ್ಬ ಬರಲಿದ್ದು, ಈ ಸಂಭ್ರದಲ್ಲಿದ್ದ ತೀರ್ಥಹಳ್ಳಿಯ ಗ್ರಾಮವೊಂದರ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.
ರಂಜಾನ್ ಉಪವಾಸ ಮುಗಿಸಿ ಸ್ನೇಹಿತರ ಜೊತೆ ಸೇರಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತುಂಗಾ ನದಿಯ ರಾಮ ಮಂಟಪದ ಬಳಿ ನಡೆದಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ರಫನ್, ಇಯನ್ ಮತ್ತು ಅರ್ಫದ್ ಮೃತ ಬಾಲಕರು ಎಂದು ಗುರುತಿಸಲಾಗಿದೆ.

ನಿನ್ನೆ ರಂಜಾನ್ ಉಪವಾಸ ಮುಗಿಸಿ ಮೂವರು ಜೊತೆಯಾಗಿ ತುಂಗಾ ನದಿಗೆ ರಾಮ ಮಂಟಪದ ಬಳಿ ಈಜಲು ತೆರಳಿದ್ದಾರೆ. ಈ ವೇಳೆ ಆಯತಪ್ಪಿ ಒಬ್ಬರಾದ ಮೇಲೆ ಒಬ್ಬರು ನೀರಿನಲ್ಲಿ ಮುಳುಗಿ ನೀರು ಪಾಲಾಗಿದ್ದಾರೆ. ಪೋಷಕರು ಬಾಲಕರ ಬಗ್ಗೆ ಹುಡುಕಾಟ ನಡೆಸಿದಾಗ ಈ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಕೂಡಲೇ ಸ್ಥಳೀಯರು ಘಟನಾ ಸ್ಥಳಕ್ಕೆ ತೆರಳಿದ್ದಾರೆ.
ಇತ್ತ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಸಿ ಮೂವರು ಬಾಲಕರ ಮೃತದೇಹವನ್ನು ಹೊರತೆಗೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ರಫನ್, ಇಯನ್ ಮತ್ತು ಅರ್ಫದ್ ಮೃತ ದೇಹಗಳನ್ನು ಹೊರ ತೆಗೆಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications