KS Eshwarappa V/s BS Yediyurappa: ಬಿಜೆಪಿಯಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದರೇ ಸೈಡ್‌ಲೈನ್ ಆಗುತ್ತಾರಾ?
ಶಿವಮೊಗ್ಗ, ಮಾರ್ಚ್ 20: ಟಿಕೆಟ್ ಹಂಚಿಕೆಯಿಂದ ಬಂಡಾಯ ಎದ್ದಿರುವ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಹಲವು ಪ್ರಯತ್ನಗಳ ಬಳಿಕವೂ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ತಮ್ಮ ನಿರ್ಧಾರವನ್ನು ಬದಲಾಯಿಸದೇ ಅದನ್ನು ಸಮರ್ಥಿಸಿಕೊಂಡಿದ್ದಾರೆ.
"ಕರ್ನಾಟಕದ ಬಿಜೆಪಿ ಒಂದು ಕುಟುಂಬದ ಹಿಡಿತದಲ್ಲಿದೆ ಮತ್ತು ನಾವು ಇದನ್ನು ವಿರೋಧಿಸುತ್ತೇವೆ. ಹಿಂದುತ್ವದ ಬಗ್ಗೆ ಮಾತನಾಡುವವರನ್ನೆಲ್ಲ ಬದಿಗೊತ್ತಲಾಗಿದೆ. ಸಿ.ಟಿ.ರವಿ, ಪ್ರತಾಪ್ ಸಿಂಹ, ಬಸನಗೌಡ ಪಾಟೀಲ್ ಯತ್ನಾಳ್, ಡಿವಿ ಸದಾನಂದಗೌಡ, ಯಾರೇ ಆಗಲಿ ಹಿಂದುತ್ವದ ಬಗ್ಗೆ ಮಾತನಾಡುವವರನ್ನು ಬದಿಗೊತ್ತಲಾಗುತ್ತಿದೆ. ಅವರೆಲ್ಲ ನಾಯಕರು, ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿರುವವರು" ಎಂದು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಮತ್ತೊಮ್ಮೆ ಯಡಿಯೂರಪ್ಪ ಮತ್ತು ಕುಟುಂಬದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಾವೇರಿ ಕ್ಷೇತ್ರದಿಂದ ತಮ್ಮ ಪುತ್ರ ಕೆ.ಇ.ಕಾಂತೇಶ್‌ಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ 75 ವರ್ಷದ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಸ್ಪರ್ಧೆ ಮಾಡುವ ಶಿವಮೊಗ್ಗದಿಂದ ತಾವು ಕಣಕ್ಕಿಳಿಯುವುದಾಗಿ ಈಶ್ವರಪ್ಪ ಘೋಷಿಸಿದ್ದಾರೆ.
ತಮ್ಮ ಮಗ ಕಾಂತೇಶ್‌ಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ದೂಷಿಸಿರುವ ಕೆಎಸ್ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ ತಮ್ಮ ಕುಟುಂಬಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಇ ಕಾಂತೇಶ್ ಅವರಿಗೆ ಹಾವೇರಿಯಿಂದ ಬಿಜೆಪಿ ಟಿಕೆಟ್ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು ಎಂದಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರ ಮಾತಿಗೆ ಮಣಿದ ಕಾಂತೇಶ್ ಹಾವೇರಿಯಲ್ಲಿ ತಮ್ಮ ಪ್ರಯತ್ನ ಹಾಕಿ ಜನರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಕೊನೆಗೆ ನನ್ನ ಮಗನಿಗೆ ಟಿಕೆಟ್ ನಿರಾಕರಿಸಲಾಯಿತು. ಯಡಿಯೂರಪ್ಪ ನಮಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈಶ್ವರಪ್ಪ ಅವರು 2022ರಲ್ಲಿ ಗುತ್ತಿಗೆದಾರರೊಬ್ಬರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನು, ಸೋಮವಾರ ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶಕ್ಕೂ ಈಶ್ವರಪ್ಪ ಗೈರಾಗಿದ್ದರು. ಈ ಕ್ಷೇತ್ರದಿಂದ ಹಾಲಿ ಸಂಸದರಾಗಿರುವ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತದೆ ಮತ್ತು ಅದರಲ್ಲಿ ಅವರ ಪಾತ್ರವಿಲ್ಲ ಎಂದು ಯಡಿಯೂರಪ್ಪ ಆರೋಪವನ್ನು ನಿರಾಕರಿಸಿದ್ದಾರೆ.












Click it and Unblock the Notifications