ಶಿವಮೊಗ್ಗ; ಪ್ರವಾಸಿ ತಾಣದಲ್ಲಿ ಪ್ಲಾಸ್ಟಿಕ್ ತಡೆಗೆ ಹೊಸ ಯೋಜನೆ
ಶಿವಮೊಗ್ಗ, ನವೆಂಬರ್ 28 : ಶಿವಮೊಗ್ಗ ಜಿಲ್ಲಾಡಳಿತ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಮುಂದಾಗಿದೆ. ಇದಕ್ಕಾಗಿ ಯೋಜನೆಯೊಂದನ್ನು ರೂಪಿಸಿದ್ದು, ಜಿಲ್ಲೆಯ 5 ಪ್ರವಾಸಿ ತಾಣಗಳಲ್ಲಿ ಇದು ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.
ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ತಾಣಗಳಿವೆ. ಜೋಗ, ಆಗುಂಬೆ, ಕೊಡಚಾದ್ರಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಪ್ರತಿನಿತ್ಯ ನೂರಾರು ಜನರು ಭೇಟಿ ಕೊಡುತ್ತಾರೆ. ಪ್ರವಾಸಿಗರು ಪ್ಲಾಸ್ಟಿಕ್ ಬಾಟಲ್, ತಿಂಡಿಯ ಪ್ಯಾಕೆಟ್‌ಗಳನ್ನು ಅಲ್ಲಿ ಹಾಕಿ ಹೋಗುತ್ತಾರೆ.
ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಜೊತೆ ಸೇರಿ ನೂತನ ಯೋಜನೆಯನ್ನು ಜಾರಿಗೆ ತರಲಿದೆ. ತಿರುಪತಿ, ಮೈಸೂರು ಮೃಗಾಲಯದಲ್ಲಿ ಇರುವ ಮಾದರಿಯಲ್ಲಿಯೇ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಶಿವಮೊಗ್ಗದ 5 ಪ್ರವಾಸಿ ತಾಣದಲ್ಲಿ ಜಾರಿಗೆ ತರಲಾಗುತ್ತದೆ.
ಸಿಗಂದೂರು, ಕೊಡಚಾದ್ರಿ, ಕುಂದಾದ್ರಿ, ಆಗುಂಬೆ ಮತ್ತು ಜೋಗದಲ್ಲಿ ಪ್ರಾಯೋಗಿಕವಾಗಿ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಲಾಗುತ್ತದೆ. ಇದು ಯಶಸ್ವಿಯಾದರೆ ಉಳಿದ ಪ್ರವಾಸಿ ತಾಣಗಳಿಗೂ ಇದನ್ನು ವಿಸ್ತರಣೆ ಮಾಡಲಾಗುತ್ತದೆ.

ಪ್ಲಾಸ್ಟಿಕ್ ಸ್ಟಿಕ್ಕರ್ ನಿಯಮ
ಪ್ರವಾಸಿಗಳು ಪ್ರವಾಸಿ ಸ್ಥಳಕ್ಕೆ ಆಗಮಿಸಿದಾಗ ಅವರ ಬಳಿ ಇರುವ ಪ್ಲಾಸ್ಟಿಕ್ ವಸ್ತುಗಳಿಗೆ ಸ್ಟಿಕ್ಕರ್ ಅಂಟಿಸಲಾಗುತ್ತದೆ. ರೇವಣಿ ರೂಪದಲ್ಲಿ 50 ಅಥವ 100 ರೂ. ಪಣವನ್ನು ಪಡೆಯಲಾಗುತ್ತದೆ. ವಾಪಸ್ ಬಂದಾಗ ಪ್ಲಾಸ್ಟಿಕ್ ವಸ್ತು ಹಿಂದಿರುಗಿಸಿ ಠೇವಣಿ ಹಣವನ್ನು ವಾಪಸ್ ಪಡೆಯಬಹುದಾಗಿದೆ. ಇದು ಪ್ರಾಯೋಗಕವಾಗಿ 5 ಪ್ರವಾಸಿ ಕೇಂದ್ರಗಳಲ್ಲಿ ಜಾರಿಗೆ ಬರಲಿದೆ.

ಗುಟ್ಕಾ, ಸಿಗರೇಟು, ಮದ್ಯ
ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಗುಟ್ಕಾ, ಸಿಗರೇಟ್, ಮದ್ಯವನ್ನು ಬ್ಯಾನ್ ಮಾಡಲಾಗುತ್ತದೆ. ಪ್ರವಾಸಿ ತಾಣದ ಆವರಣದಲ್ಲಿ ಇವುಗಳನ್ನು ಬಿಡದಿರಲು ತೀರ್ಮಾನಿಸಲಾಗಿದ್ದು, ಇದರಿಂದಾಗಿ ಅವುಗಳ ಪ್ಯಾಕೆಟ್‌ಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಬಹುದಾಗಿದೆ.

ಐದು ಕೇಂದ್ರಗಳಲ್ಲಿ ಜಾರಿ
ಪೊಲೀಸ್ ಇಲಾಖೆಯಿಂದ ನೇಮಕವಾಗಿರುವ ಹೋಂ ಗಾರ್ಡ್‌ಗಳು ಇರುವ ಸಿಗಂದೂರು, ಕೊಡಚಾದ್ರಿ, ಆಗುಂಬೆ, ಕುಂದಾದ್ರಿ ಮತ್ತು ಜೋಗ ಜಲಪಾತದಲ್ಲಿ ಪ್ಲಾಸ್ಟಿಕ್ ಸ್ಟಿಕ್ಕರ್ ನಿಮಯವನ್ನು ಜಾರಿಗೆ ತರಲಾಗುತ್ತದೆ. ಈ ಮೂಲಕ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ.

ಈ ಮಾದರಿ ಕೆಲಸ ಮಾಡುತ್ತದೆ
ಒಮ್ಮೆ ಸ್ಟಿಕ್ಕರ್ ಅಂಟಿಸಿದ ಬಾಟಲ್ ಸೇರಿದಂತೆ ಇತರ ವಸ್ತುಗಳನ್ನು ಜನರು ಎಲ್ಲೆಂದರಲ್ಲಿ ಎಸೆಯುವುದಿಲ್ಲ. ಠೇವಣಿ ಹಣ ಇಟ್ಟಿರುವುದರಿಂದ ವಾಪಸ್ ತಂದು ಕೊಡುತ್ತಾರೆ ಎಂಬುದು ಪ್ರವಾಸೋದ್ಯಮ ಇಲಾಖೆ ನಿರೀಕ್ಷೆಯಾಗಿದೆ. ಮೈಸೂರು, ತಿರುಪತಿ ಸೇರಿದಂತೆ ವಿವಿಧ ಪ್ರವಾಸಿತಾಣಗಳಲ್ಲಿ ಈ ಮಾದರಿ ಯೋಜನೆ ಜಾರಿಯಲ್ಲಿದೆ.












Click it and Unblock the Notifications