ಶಿವಮೊಗ್ಗ; ಎಸ್ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ಜೇನು ದಾಳಿ
ಶಿವಮೊಗ್ಗ, ಮಾರ್ಚ್ 28; ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವೊಂದರಲ್ಲಿ ವಿದ್ಯಾರ್ಥಿಗಳು, ಪೋಷಕರ ಮೇಲೆ ಜೇನು ದಾಳಿ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಪ್ರೌಢಶಾಲೆಯಲ್ಲಿ ಜೇನು ಹುಳಗಳು ದಾಳಿ ನಡೆಸಿವೆ. ಬೆಳಗ್ಗೆ ಪರೀಕ್ಷೆ ಆರಂಭವಾಗುವ ಹೊತ್ತಿಗೆ ಜೇನು ದಾಳಿಯಾಗಿದೆ. ಇದರಿಂದಾಗಿ ಕೆಲ ಹೊತ್ತು ಪರೀಕ್ಷಾ ಕೇಂದ್ರದ ಆವರಣದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.
ಜೇನು ದಾಳಿಯಿಂದ ಐವರು ವಿದ್ಯಾರ್ಥಿಗಳು, ಕೆಲವು ಪೋಷಕರು, ಟಿವಿ ವಾಹಿನಿಯ ಕ್ಯಾಮರಾಮನ್ ಒಬ್ಬರು ಗಾಯಗೊಂಡಿದ್ದಾರೆ. ಜೇನು ದಾಳಿಗೆ ತುತ್ತಾಗಿದ್ದವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.
ಜೇನು ದಾಳಿಗೆ ತುತ್ತಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. "ಜೇನು ದಾಳಿಯ ಬಳಿಕ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ತಡವಾಗಿ ಪರೀಕ್ಷೆಗೆ ಬಂದಿದ್ದಾರೆ. ಅವರಿಗೆ ಹೆಚ್ಚುವರಿ ಪರೀಕ್ಷಾ ಸಮಯ ನೀಡಲಾಗುತ್ತದೆ. ಯಾವುದೆ ಆತಂಕವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು" ಎಂದು ಡಿಡಿಪಿಐ ಎನ್. ಎಂ. ರಮೇಶ್ ತಿಳಿಸಿದರು.

ಆಂಬುಲೆನ್ಸ್, ವೈದ್ಯರ ನಿಯೋಜನೆ
ಇನ್ನು, ಜೇನು ದಾಳಿಯ ವಿಚಾರ ತಿಳಿಯುತ್ತಿದ್ದ ಹಾಗೆ ಮೇರಿ ಇಮ್ಯಾಕುಲೇಟ್ ಶಾಲೆಯಲ್ಲಿ ವೈದ್ಯರು ಮತ್ತು ಆಂಬುಲೆನ್ಸ್ ನಿಯೋಜನೆ ಮಾಡಲಾಗಿದೆ. "ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ಮನವಿ ಮಾಡಿ ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ಆ ಶಾಲೆಯಲ್ಲಿ ನಿಯೋಜಿಸಲಾಗಿದೆ. ತುರ್ತು ಇದ್ದರೆ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಕೂಡ ಸಿದ್ಧವಾಗಿ ಇರಿಸಲಾಗಿದೆ" ಎಂದು ಡಿಡಿಪಿಐ ರಮೇಶ್ ತಿಳಿಸಿದ್ದಾರೆ.

ಅಧಿಕಾರಿಗಳು ಶಾಲೆಗೆ ದೌಡು
ಜೇನು ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಸಿಇಒ ಎಂ. ಎಲ್. ವೈಶಾಲಿ, ಡಿಡಿಪಿಐ ಎನ್. ಎಂ. ರಮೇಶ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷೆ ಮುಗಿದ ಬಳಿಕ ಇವತ್ತು ಸಂಜೆಯೊಳಗೆ ಜೇನು ಗೂಡುಗಳನ್ನು ತೆರವು ಮಾಡುವಂತೆ ಶಾಲೆ ಆಡಳಿತ ಮಂಡಳಿಗೆ ಅಧಿಕಾರಿಗಳು ಸೂಚಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಪರೀಕ್ಷೆಗಳು ಸುಗಮವಾಗಿ ನಡೆಯುತ್ತಿದೆ. ವಿವಾದಗಳನ್ನು ಪಕ್ಕಕ್ಕಿಟ್ಟು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ಹಿಜಾಬ್ ಧರಿಸಲು ಅವಕಾಶ ನೀಡದ ಕಾರಣ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದ ವಿದ್ಯಾರ್ಥಿನಿಯ ಮನವೊಲಿಸಲಾಗಿದೆ.
ಜಿಲ್ಲೆಯಾದ್ಯಂತ 94 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. 24,381 ವಿದ್ಯಾರ್ಥಿಗಳು ಇವತ್ತು ಪರೀಕ್ಷೆ ಎದುರಿಸುತ್ತಿದ್ದಾರೆ.

ಹೈಕೋರ್ಟ್ ತೀರ್ಪು
ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಹೈಕೋರ್ಟ್ ತೀರ್ಪು ನೀಡುತ್ತು. ಆ ನಂತರವು ಹಿಜಾಬ್ ಪರ ವಿದ್ಯಾರ್ಥಿನಿಯರು ಹೋರಾಟ ಮುಂದುವರೆಸಿದ್ದರು. ಇದರ ಬೆನ್ನಿಗೆ ಎಸ್ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದೆ. ಪರೀಕ್ಷಾ ಕೊಠಡಿಯೊಳಗೆ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಶಿಕ್ಷಣ ಇಲಾಖೆ ಈಗಾಗಲೇ ತಿಳಿಸಿತ್ತು. ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಗಳಿಗೆ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಶಿಕ್ಷಕರು ತಿಳಿವಳಿಕೆ ಮೂಡಿಸಿದ್ದರು.
ಹಿಜಾಬ್ ಧರಿಸಲು ಅವಕಾಶ ಕಲ್ಪಿಸದ ಹಿನ್ನೆಲೆ ವಿದ್ಯಾರ್ಥಿನಿಯೊಬ್ಬಳು ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದಳು. ಶಿವಮೊಗ್ಗದ ಕಸ್ತೂರ ಬಾ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಘಟನೆ ಸಂಭವಿಸಿದೆ. ಹಿಜಾಬ್ ಧರಿಸಲು ಅವಕಾಶ ನೀಡದಿದ್ದ ಹಿನ್ನೆಲೆ ವಿದ್ಯಾರ್ಥಿನಿಯು ಪೋಷಕರೊಂದಿಗೆ ಮನೆಗೆ ಮರಳುತ್ತಿದ್ದಳು. ಈ ವೇಳೆ ಶಿಕ್ಷಕರು ವಿದ್ಯಾರ್ಥಿನಿ ಮತ್ತು ಪೋಷಕರ ಮನವೊಲಿಸಿದ್ದಾರೆ. ನಂತರ ವಿದ್ಯಾರ್ಥಿನಿ ಹಿಜಾಬ್ ತೆಗೆದಿಟ್ಟು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಿದ್ದಾಳೆ.

ಡಿಡಿಪಿಐ ಎನ್.ಎಂ.ರಮೇಶ್
ಇನ್ನು, ಪರೀಕ್ಷಾ ಸಿದ್ಧತೆ ಕುರಿತು ಡಿಡಿಪಿಐ ಎನ್. ಎಂ. ರಮೇಶ್ ಮಾತನಾಡಿ, "94 ಪರೀಕ್ಷಾ ಕೇಂದ್ರದಲ್ಲಿಯು ಸುಗಮನವಾಗಿ ಪರೀಕ್ಷೆ ನಡೆಯುತ್ತಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ 25 ಸಾವಿರ ಮಾಸ್ಕ್ ವಿತರಣೆ ಮಾಡಲಾಗಿದೆ. ಹಾಸನದಿಂದ ಉಪ ನಿರ್ದೇಶಕರಾದ ಪುಟ್ಟರಾಜು ಅವರನ್ನು ವೀಕ್ಷಕರಾಗಿ ಆಗಮಿಸಿದ್ದಾರೆ" ಎಂದು ತಿಳಿಸಿದರು.
"ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಹಿಜಾಬ್ ಸಂಬಂಧ ಒಬ್ಬ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದರು. ಆಕೆ ಪುನಃ ಬಂದು ಪರೀಕ್ಷೆ ಬರೆಯುತ್ತಿದ್ದಾರೆ. ಉಳಿದಂತೆ ಎಲ್ಲಿಯೂ ತೊಂದರೆ ಆಗಿಲ್ಲ" ಎಂದು ಡಿಡಿಪಿಐ ಎನ್.ಎಂ.ರಮೇಶ್ ತಿಳಿಸಿದರು.
ಪರೀಕ್ಷಾ ಕೇಂದ್ರದ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. 200 ಮೀಟರ್ ಸುತ್ತಮುತ್ತ ಜನ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ.











Click it and Unblock the Notifications