ವಿಡಿಯೋ: ಸಾಗರ ಎಲ್.ಬಿ ಕಾಲೇಜಿನಲ್ಲಿ ಶಾಸಕ ಹಾಲಪ್ಪ, ಶ್ರೀಪಾದ ಹೆಗಡೆ ಜಟಾಪಟಿ
ಶಿವಮೊಗ್ಗ, ಮಾರ್ಚ್ 17: ಶಿವಮೊಗ್ಗ ಜಿಲ್ಲೆಯ ಸಾಗರ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಮತ್ತು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಶ್ರೀಪಾದ ಹೆಗಡೆ ನಡುವೆ ಜಟಾಪಟಿ ನಡೆದಿದೆ.
ಸಾಗರದ ಲಾಲ್ ಬಹದ್ದೂರ್ ಕಲಾ, ವಿಜ್ಞಾನ ಮತ್ತು ಎಸ್.ಬಿ.ಸೋಲಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜು(ಎಲ್.ಬಿ ಕಾಲೇಜ್) ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಹರತಾಳು ಹಾಲಪ್ಪ ಮತ್ತು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಶ್ರೀಪಾದ ಹೆಗಡೆ ನಡುವಿನ ಮುಸುಕಿನ ಗುದ್ದಾಟ ಜಗಜ್ಜಾಹೀರಾಗಿದ್ದು, ಇಬ್ಬರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.

ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆಯಿತು. ಅಧ್ಯಕ್ಷ ಸ್ಥಾನ ಚುನಾವಣೆ ಸಂದರ್ಭ ನಡೆದ ಘಟನೆ ಇದಾಗಿದ್ದು ಉಪಾಧ್ಯಕ್ಷರಾಗಿದ್ದ ಶ್ರೀಪಾದ ಹೆಗಡೆ ನಿಸರಾಣಿ (ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ) ಮೇಲೆ ಹಲ್ಲೆ ನಡೆಸಲಾಗಿದೆ. ಸಾಗರ ಶಾಸಕ ಹರತಾಳು ಹಾಲಪ್ಪ ಸಮ್ಮುಖದಲ್ಲಿ ಹಲ್ಲೆ ನಡೆಸಲಾಗಿದೆ.
ಶಾಸಕ ಹರತಾಳು ಹಾಲಪ್ಪ ವಿರುದ್ಧ ಹರಿಹಾಯ್ದ ಎಬಿವಿಪಿ ಮುಖಂಡ ಶ್ರೀಪಾದ ಹೆಗಡೆ, ನಾನು ಒಳ್ಳೆಯದನ್ನು ಮಾಡುತ್ತೇನೆ ಹೊರತು ಕೆಟ್ಟದ್ದು ಮಾಡಲು ಹೋಗುವುದಿಲ್ಲ. ಆದರೆ ಇವತ್ತು ನಡೆದ ಶಾಸಕರು ಬಂದು ಮಾಡಿರುವ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಇವತ್ತು ಶಾಸಕರು ಗೌರವಯುತವಾಗಿ ಇರಬಹುದಿತ್ತು, ಆದರೆ ದೌರ್ಜನ್ಯ ಮಾಡಿಸುವ ಕೆಲಸ ಮಾಡಿಸಿದರು. ನಾವೆಲ್ಲರೂ ಮತ ಕೊಟ್ಟು ಗೆಲ್ಲಿಸಿದ್ದೇವೆ, ಇಂಥ ದೌರ್ಜನ್ಯ ಮಾಡಿಸಿ ಏನಾದರೂ ಸಂಘ-ಸಂಸ್ಥೆಗಳನ್ನು ಆಳುತ್ತೇವೆ ಅಂದುಕೊಂಡರೆ ಕನಸಿನ ಮಾತು.
ಜನ ಇಂಥದೆಲ್ಲವನ್ನೂ ಜನರು ಗಮನಿಸುತ್ತಿದ್ದಾರೆ, ಇಂಥ ವಿದ್ಯಾಸಂಸ್ಥೆಯಲ್ಲಿ ಹೀಗಾದರೆ, ಮುಂದಿನ ದಿನಗಳಲ್ಲಿ ಜನ ಹೇಗೆ ಜೀವನ ಮಾಡಬೇಕು ಎಂಬುದನ್ನು ಯೋಚನೆ ಮಾಡಬೇಕು. ಇದನ್ನೆಲ್ಲ ನಾನು ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ. ಆದರೆ ಇಂಥ ದೌರ್ಜನ್ಯಕ್ಕೆ ಹೆದರುವ ಶ್ರೀಪಾದ್ ಹೆಗಡೆ ನಾನಲ್ಲ ಎಂದು ಶಾಸಕ ಹರತಾಳು ಹಾಲಪ್ಪ ವಿರುದ್ಧ ಕಿಡಿಕಾರಿದರು.
ಸೆಕ್ರೆಟರಿ ಮೇಲೆ ದೌರ್ಜನ್ಯ ಮಾಡಿಸುವುದು, ನನ್ನ ಮೇಲೆ ದೌರ್ಜನ್ಯ ಮಾಡಿಸುವುದು, ನಮ್ಮ ಮನೆಯವರ ಮೇಲೆ ದೌರ್ಜನ್ಯ ಮಾಡಿಸುವುದು ಎಂದರೆ ಏನರ್ಥ. ಇದನ್ನೆಲ್ ನೋಡಿದ ಪೊಲೀಸರು ನಮಗೆ ನ್ಯಾಯ ಕೊಡಿಸಲಿಲ್ಲ ಎನ್ನುವುದು ನೋವಿನ ಸಂಗತಿ ಎಂದು ಶ್ರೀಪಾದ್ ಹೆಗಡೆ ವಾಗ್ದಾಳಿ ನಡೆಸಿದರು.












Click it and Unblock the Notifications