Get Updates
Get notified of breaking news, exclusive insights, and must-see stories!

Shivamogga: ಆಯನೂರು ಮಂಜುನಾಥ್ Vs ಚನ್ನಬಸಪ್ಪ: ಸಾಧಕ ಬಾಧಕಗಳ ವಿಶ್ಲೇಷಣೆ

ಶಿವಮೊಗ್ಗ ವಿಧಾಸಭಾ ಕ್ಷೇತ್ರ ಹಲವು ಕಾರಣಗಳಿಂದಾಗಿ ಈ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಕೊನೆಯ ಹಂತದಲ್ಲಿ ಕಾರ್ಪೊರೇಟರ್ ಚನ್ನಬಸಪ್ಪ ಅವರಿಗೆ ಟಿಕೆಟ್ ಕೊಟ್ಟು ಅಚ್ಚರಿ ಮೂಡಿಸಿದೆ. ಆಯನೂರು ಮಂಜುನಾಥ್ ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧೆ ಮಾಡುತ್ತಿದ್ದು, ಬಿಜೆಪಿ-ಜೆಡಿಎಸ್ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ಇದೆ.

2023ರ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಬಿರುಗಾಳಿಯೇ ಬೀಸಿದೆ. ಬಿಜೆಪಿ ಹಲವು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಕಾಂಗ್ರೆಸ್ ಕೂಡ ಕೆಲವು ಕ್ಷೇತ್ರಗಳಲ್ಲಿ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಿದೆ. ಜೆಡಿಎಸ್ ಪಕ್ಷಕ್ಕೆ ಈ ಬಾರಿ ಕಾಂಗ್ರೆಸ್, ಬಿಜೆಪಿಯಿಂದ ಪ್ರಭಾಬಿ ನಾಯಕರು ವಲಸೆ ಬಂದಿದ್ದಾರೆ.

Shivamogga constituency Analysis : Ayanur Manjunath vs Channabasapp Pros And Cons

ರೈತರ ಹೋರಾಟ, ಸಾಮಾಜಿಕ ಚಳುವಳಿ, ಶಾಂತಿ ಸೌಹಾರ್ದತೆಗೆ ಹೆಸರಾಗಿದ್ದ ಶಿವಮೊಗ್ಗ ಇಂದು ಕೋಮು ದ್ವೇಷದ ಬೆಂಕಿಯಲ್ಲಿ ನರಳಿದೆ. ಹರ್ಷ ಕೊಲೆ ಪ್ರಕರಣ, ಗೋಮಾಂಸ ಮಾರಾಟ ನಿಷೇಧ, ಕೋಮು ದ್ವೇಷ, ಹಿಂದೂ ಮುಸ್ಲಿಂ ಗಲಭೆ ಶಿವಮೊಗ್ಗ ಜನತೆಯಲ್ಲಿ ಬೇಸರ ಮೂಡಿಸಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕೆಎಸ್ ಈಶ್ವರಪ್ಪ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ, ಇಲ್ಲಿನ ರಾಜಕಾರಣ ಬೇರೆಯದೇ ಆಯಾಮ ಪಡೆದುಕೊಂಡಿದೆ.

ಸಚಿವ ಈಶ್ವರಪ್ಪ ಚುನಾವಣೆಯಿಂದ ಹಿಂದೆ ಸರಿದ ಬಳಿಕ ಬಿಜೆಪಿ ಯಾರಿಗೆ ಟಿಕೆಟ್ ಕೊಡ್ತಾರೆ ಎನ್ನುವ ಕುತೂಹಲ ಇತ್ತು. ಕೊನೆಯ ಕ್ಷಣದವರೆಗೂ ಶಿವಮೊಗ್ಗಕ್ಕೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿರಲಿಲ್ಲ, ಪಕ್ಷದ ಪ್ರಭಾವಿ ಮುಖಂಡ ಆಯನೂರು ಮಂಜುನಾಥ್ ತಮಗೆ ಟಿಕೆಟ್ ಸಿಗಲ್ಲ ಎಂದು ತಿಳಿಯುತ್ತಿದ್ದಂತೆ ಬಿಜೆಪಿಗೆ ಗುಡ್‌ಬೈ ಹೇಳಿ ಜೆಡಿಎಸ್ ಸೇರ್ಪಡೆಯಾದರು. ಜೆಡಿಎಸ್‌ನಿಂದ ಸ್ಪರ್ಧೆ ಮಾಡಿರುವ ಅವರು ಬಿಜೆಪಿಗೆ ಮಗ್ಗುಲ ಮುಳ್ಳಾಗುವ ಎಲ್ಲಾ ಸಾಧ್ಯತೆ ಇದೆ.

ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಶಿವಮೊಗ್ಗ ಇಂದು ಕೇಸರಿ ಕಲಿಗಳ ಹಿಡಿತದಲ್ಲಿದೆ. ಈ ಬಾರಿ ಕಾಂಗ್ರೆಸ್ ಕೂಡ ಲಿಂಗಾಯತ ಯುವ ಮುಖಂಡ ಯೋಗೇಶ್ ಹೆಚ್‌.ಸಿ. ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.

ಲಿಂಗಾಯತ ಮತದಾರರ ಪ್ರಾಬಲ್ಯ

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,52,989 ಮತದಾರರು ಇದ್ದಾರೆ. 1,23,770 ಪುರುಷ, 1,29,204 ಮಹಿಳಾ, 15 ತೃತೀಯ ಲಿಂಗಿ ಮತದಾರರನ್ನು ಒಳಗೊಂಡಿದೆ. ಇಲ್ಲಿ ಲಿಂಗಾಯತ ಸಮುದಾಯ ಪ್ರಾಬಲ್ಯ ಹೊಂದಿದೆ. ಇದರ ಜೊತೆಗೆ ಬ್ರಾಹ್ಮಣ, ಒಕ್ಕಲಿಗ, ಕುರುಬ, ಈಡಿಗ ಸಮುದಾಯಗಳ ಮತಗಳು ದೊಡ್ಡದಿದೆ. ಮುಸ್ಲಿಂ ಮತ್ತು ಪರಿಶಿಷ್ಟ ಜಾತಿ, ಪಂಗಡದ ಮತದಾರರು ಕೂಡ ನಿರ್ಣಾಯಕರಾಗಬಲ್ಲರು. ಇಬ್ಬರೂ ಅಭ್ಯರ್ಥಿಗಳ ಬಲಾಬಲಗಳನ್ನು ಇಲ್ಲಿ ನೋಡಬಹುದಾಗಿದೆ

ಆಯನೂರು ಮಂಜುನಾಥ್‌ ಪ್ಲಸ್ ಪಾಯಿಂಟ್‌ಗಳು:

1. ಮಾಜಿ ಶಾಸಕನ ಬೆಂಬಲ: ಆಯನೂರು ಮಂಜುನಾಥ್ ಜೆಡಿಎಸ್‌ಗೆ ಸೇರ್ಪಡೆಯಾಗುವ ಮೂಲಕ ಜೆಡಿಎಸ್‌ಗೆ ಶಿವಮೊಗ್ಗದಲ್ಲಿ ಹೆಚ್ಚಿನ ಬಲ ಬಂದಂತಾಗಿದೆ. ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಕೂಡ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಬಂದಿರುವುದು ಮತ್ತಷ್ಟು ಬಲವನ್ನು ಹೆಚ್ಚಿಸಿಕೊಂಡಿದೆ. ಆಯನೂರು ಮಂಜುನಾಥ್‌ರನ್ನು ಗೆಲ್ಲಿಸುವ ಉದ್ದೇಶದಿಂದಲೇ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದೇನೆ ಎಂದು ಪ್ರಸನ್ನ ಕುಮಾರ್ ಕೂಡ ಹೇಳಿದ್ದಾರೆ.

2. ಲಿಂಗಾಯತ ಮತಗಳ ವಿಂಗಡಣೆ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳು ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಲಿಂಗಾಯತ ಮತಗಳು ಮೂರು ಪಕ್ಷಗಳಿಗೆ ಹಂಚಿಕೆಯಾಗುವ ಸಾಧ್ಯತೆ ಇದ್ದು. ಬ್ರಾಹ್ಮಣ, ಒಕ್ಕಲಿಗ, ಕುರುಬ, ಈಡಿಗ ಸಮುದಾಯಗಳ ಜೊತೆಗೆ ಮುಸ್ಲಿಂ ಮತ್ತು ಪರಿಶಿಷ್ಟ ಮತಗಳು ನಿರ್ಣಾಯಕವಾಗಲಿವೆ. ಜೆಡಿಎಸ್ ಒಕ್ಕಲಿಗ, ಕುರುಬ ಮತ್ತು ಮುಸ್ಲಿಂ ಮತಗಳನನ್ನು ಸೆಳೆದರೂ ಗೆಲುವು ಸುಲಭವಾಗಲಿದೆ.

3.ಕೋಮು ದ್ವೇಷದಿಂದ ಬೇಸತ್ತಿರುವ ಜನ: ಆಯನೂರು ಮಂಜುನಾಥ್ ಚುನಾವಣೆಗೂ ಮುನ್ನವೇ ಶಾಂತಿ ಮಂತ್ರ ಜಪಿಸುತ್ತಿದ್ದು. ಬಿಜೆಪಿ ಕೋಮು ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಹರ್ಷ ಕೊಲೆ, ಕೋಮುಗಲಭೆ, ಹಿಜಾಬ್ ವಿವಾದಗಳಿಂದ ಕ್ಷೇತ್ರದ ಜನ ಬೇಸತ್ತಿದ್ದು, ಬದಲಾವಣೆ ಬಯಸಿದರೆ ಜೆಡಿಎಸ್‌ಗೆ ವರದಾನವಾಗಲಿದೆ.

ಆಯನೂರು ಮಂಜುನಾಥ್‌ಗೆ ಮೈನಸ್ ಆಗುವ ಅಂಶಗಳು

1. ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹಿನ್ನಡೆ?: ಕಾಂಗ್ರೆಸ್ ಕೂಡ ಯುವ ಲಿಂಗಾಯತ ಮುಖಂಡನಿಗೆ ಮಣೆ ಹಾಕಿರುವುದರಿಂದ ಲಿಂಗಾಯತ ಮತಗಳು ಹಂಚಿಕೆಯಾಗುತ್ತವೆ. ಮುಸ್ಲಿಂ ಮತ್ತು ಹಿಂದುಳಿದ ವರ್ಗಗಳು ಕಾಂಗ್ರೆಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋದರೆ, ಜೆಡಿಎಸ್‌ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

2. ಶ್ರೀಕಾಂತ್‌ರನ್ನು ಕಡೆಗಣಿಸಿದ್ದು ಹಿನ್ನಡೆಗೆ ಕಾರಣವಾಗುತ್ತಾ?: ಶಿವಮೊಗ್ಗ ನಗರದಲ್ಲಿ ಜೆಡಿಎಸ್ ಕಟ್ಟಲು ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸಾಕಷ್ಟು ಶ್ರಮಿಸಿದ್ದಾರೆ. ಅವರೇ ಈ ಬಾರಿ ಕಣಕ್ಕಿಳಿಯಲು ತೀರ್ಮಾನಿಸಿದ್ದರು, ಆದರೆ ಆಯನೂರು ಮಂಜುನಾಥ್ ಸೇರ್ಪಡೆ ಬಳಿಕ ಜೆಡಿಎಸ್‌ ಶ್ರೀಕಾಂತ್‌ರನ್ನು ಬಿಟ್ಟು ಮಂಜುನಾಥ್‌ಗೆ ಮಣೆ ಹಾಕಿದ್ದು, ಕಾರ್ಯಕರ್ತರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ.

ಚನ್ನಬಸಪ್ಪ ಅವರನ್ನು ಗೆಲ್ಲಿಸುತ್ತಾ ಬಿಜೆಪಿ

1.ಹಿಂದುತ್ವ ಪ್ರತಿಪಾದಕ ಚನ್ನಬಸಪ್ಪ: ಈಶ್ವರಪ್ಪ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಎಸ್‌ ಎನ್ ಚನ್ನಬಸಪ್ಪ ಕ್ಷೇತ್ರದಲ್ಲಿ ಪರಿಚಿತ ಮುಖ, ಮಹಾನಗರ ಪಾಲಿಕೆ ಕಾರ್ಪೊರೇಟರ್ ಆಗಿರುವ ಅವರು ಈಗಾಗಲೇ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿರುವ ಅವರಿಗೆ ಈಶ್ವರಪ್ಪ ಅವರ ಬೆಂಬಲ ಕೂಡ ಇರುವುದು ಲಾಭವಾಗಿದೆ.

2.ಹೊಸ ಮುಖಕ್ಕೆ ಅವಕಾಶ: ಕೆಎಸ್ ಈಶ್ವರಪ್ಪ ಈಗಾಗಲೇ ಕ್ಷೇತ್ರದಲ್ಲಿ ಮತದಾರರ ವಿಶ್ವಾಸ ಕಳೆದುಕೊಂಡಿದ್ದರು. ನಗರದಲ್ಲಿ ನಡೆದ ಕೋಮು ಗಲಭೆಗಳು, ಈಶ್ವರಪ್ಪ ವಿರುದ್ಧದ ಭ್ರಷ್ಟಾಚಾರ ಆರೋಪ, ಗುತ್ತಿಗೆದಾರನ ಆತ್ಮಹತ್ಯೆ ಬಿಜೆಪಿಗೆ ಮುಜುಗರ ಉಂಟು ಮಾಡಿತ್ತು. ಪ್ರಮುಖ ನಾಯಕನಿಗೆ ಟಿಕೆಟ್ ತಪ್ಪಿಸಿ ಹೊಸಬರಿಗೆ ಅವಕಾಶ ಕೊಟ್ಟಿರುವುದರಿಂದ ಜನ ಮತ್ತೆ ಬಿಜೆಪಿ ಕಡೆ ವಾಲುವ ಸಾಧ್ಯತೆ ಇದೆ.

3. ಬಿಜೆಪಿಗೆ ಲಿಂಗಾಯತರ ಬೆಂಬಲ: ಬಿಎಸ್‌ವೈ ಜಿಲ್ಲೆಯಲ್ಲಿ ಪ್ರಮುಖ ನಾಯಕರಾಗಿರುವುದರಿಂದ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಮತ್ತೊಮ್ಮೆ ಬಿಜೆಪಿ ಮುಖ್ಯಮಂತ್ರಿಯನ್ನು ನೋಡುವ ಸಲುವಾಗಿ ಲಿಂಗಾಯತರು ಬಿಜೆಪಿಯನ್ನು ಬೆಂಬಲಿಸಿದರೆ ಚನ್ನಬಸಪ್ಪ ಗೆಲುವು ಸುಲಭವಾಗಲಿದೆ.

ಚನ್ನಬಸಪ್ಪ ಅವರ ಮೈನಸ್ ಪಾಯಿಂಟ್‌ಗಳಿವು

1.ಮುಳುವಾಗುತ್ತಾ ಹಿಂದುತ್ವ : ಶಿವಮೊಗ್ಗದಲ್ಲಿ ಈಗಾಗಲೇ ಹಿಂದುತ್ವ ಹೆಸರಿನಲ್ಲಿ ಸಾಕಷ್ಟು ಅನಾಹುತಗಳು ನಡೆದಿವೆ. ಬಿಜೆಪಿ ವಿರುದ್ಧ ಜನ ಸಾಮಾನ್ಯರು ಈಗಾಗಲೇ ಬೇಸತ್ತಿದ್ದಾರೆ. ಚನ್ನಬಸಪ್ಪ ಕೂಡ ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿದ್ದು, ಮತದಾರರು ಬಿಜೆಪಿಯನ್ನು ತಿರಸ್ಕರಿಸಿದರೆ, ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ. ಅಲ್ಲದೆ ಗೋಮಾಂಸ ವಿಚಾರಕ್ಕೆ ಸಂಬಂಧಪಟ್ಟಂತೆ ಚನ್ನಬಸಪ್ಪ ಕಾಂಗ್ರೆಸ್ ಅವಧಿಯಲ್ಲಿ ಸಿದ್ಧರಾಮಯ್ಯ ತಲೆ ಕಡಿಯುವುದಾಗಿ ಹೇಳಿಕೆ ನೀಡಿ ಜೈಲು ಸೇರಿದ್ದರು.

2. ಕುರುಬ ಸಮುದಾಯದ ಅಸಮಾಧಾನ?: ಕೆಎಸ್ ಈಶ್ವರಪ್ಪ ಹಿಂದೆ ಸರಿದ ಬಳಿಕ ಅವರ ಮಗ ಕೆ.ಇ. ಕಾಂತೇಶ್‌ಗೆ ಟಿಕೆಟ್ ಸಿಗುತ್ತದೆ ಎಂದೇ ಭಾವಿಸಿದ್ದರು. ಆದರೆ ಕೊನೆಯ ಹಂತದಲ್ಲಿ ಬಿಜೆಪಿ ಲಿಂಗಾಯತ ಅಭಯರ್ಥಿಗೆ ಟಿಕೆಟ್ ನೀಡಿದೆ. ಇದರಿಂದ ಕುರುಬ ಸಮುದಾಯ ಬಿಜೆಪಿಯನ್ನು ಕೈಬಿಟ್ಟರೆ ಬಿಜೆಪಿಗೆ ಹಿನ್ನಡೆಯಾಗಲಿದೆ.

3. ಬಿಜೆಪಿ ವಿರೋಧಿ ಅಲೆ: ರಾಜ್ಯದಲ್ಲಿ ಈ ಬಾರಿ ಬಿಜೆಪಿ ವಿರೋಧಿ ಅಲೆ ಹೆಚ್ಚಾಗಿದೆ. ರಾಜ್ಯದಲ್ಲಿ ಹಲವು ಕೋಮು ಸಂಘರ್ಷಗಳು, ಭ್ರಷ್ಟಾಚಾರ ಆರೋಪಗಳು, ಹಿಂದೂ-ಮುಸ್ಲಿಂ ಯುವಕರ ರಾಜಕೀಯ ಪ್ರೇರಿತ ಹತ್ಯೆಗಳು ಜನರನ್ನು ಕೆರಳಿಸಿವೆ. ಬೆಲೆ ಏರಿಕೆ ಕೂಡ ಜನರ ಆಕ್ರೋಶಕ್ಕೆ ಕಾರಣವಾಗಿದ್ದು ಜನ ಬದಲಾವಣೆ ಬಯಸಿದರೆ ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+