ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ ಬಿಜೆಪಿ ಸೇರ್ಪಡೆ!
ಬೆಂಗಳೂರು, ಏಪ್ರಿಲ್ 12; ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಬಿಜೆಪಿ ಸೇರಿದರು. ಸಾಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಬಳಿಕ ಅವರು ಪಕ್ಷ ಬಿಟ್ಟಿದ್ದಾರೆ. "ಮಗಳು ರಾಜನಂದಿನಿ ಬಿಜೆಪಿ ಸೇರುತ್ತಾಳೆ ಅಂತ ನನ್ನ ಕನಸಿನಲ್ಲೂ ಅಂದುಕೊಂಡಿರಲಿಲ್ಲ" ಎಂದು ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.
ಬುಧವಾರ ಬೆಂಗಳೂರಿನಲ್ಲಿ ಕಾಗೋಡು ತಿಮ್ಮಪ್ಪ ಪುತ್ರಿ ಡಾ. ರಾಜನಂದಿನಿ ಬಿಜೆಪಿ ಸೇರ್ಪಡೆಯಾದರು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಡಾ. ರಾಜನಂದಿನಿಯನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಡಾ. ರಾಜನಂದಿನಿ 2023ರ ವಿಧಾನಸಭೆ ಚುನಾವಣೆಗೆ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಪಕ್ಷ ಮಾರ್ಚ್ 25ರಂದು ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿಯೇ ಸಾಗರಕ್ಕೆ ಬೇಳೂರು ಗೋಪಾಲಕೃಷ್ಣ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಪಕ್ಷದ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಡಾ. ರಾಜನಂದಿನಿ ಬಿಜೆಪಿ ಸೇರಿದರು.

ಕಾಗೋಡು ತಿಮ್ಮಪ್ಪ ಪ್ರತಿಕ್ರಿಯೆ; ಪುತ್ರಿ ಡಾ. ರಾಜನಂದಿನಿ ಬಿಜೆಪಿ ಸೇರಿದ ಬಗ್ಗೆ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯೆ ನೀಡಿದ್ದಾರೆ. "ಮಗಳು ರಾಜನಂದಿನಿ ಬಿಜೆಪಿ ಸೇರುತ್ತಾಳೆ ಎಂದು ನನ್ನ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಹೀಗಾಗಬಾರದಿತ್ತು, ಯಾರಿಗೇ ಆಗಲಿ ಬದ್ಧತೆ, ಶಿಸ್ತು ಇರಬೇಕು. ಈ ಬಗ್ಗೆ ನನಗೆ ವಿಷಾದವಿದೆ, ಅವಳು ಬಿಜೆಪಿಗೆ ಹೋಗಿದ್ದು ತಪ್ಪು. ನಾನು ಯಾವತ್ತೂ ಕಾಂಗ್ರೆಸ್ ಬಿಟ್ಟು ಚಿಂತಿಸುವುದಿಲ್ಲ. ಆಕೆ ಪರವಾಗಿಯೂ ನಿಲ್ಲುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವರ್ಷಗಳಿಂದ ಕಾಂಗ್ರೆಸ್‌ನ ವಿವಿಧ ಕಾರ್ಯಕ್ರಮಗಳಲ್ಲಿ ಡಾ. ರಾಜನಂದಿನಿ ಪಾಲ್ಗೊಳ್ಳುತ್ತಿದ್ದರು. ಆದರೆ ಬೇಳೂರು ಗೋಪಾಲಕೃಷ್ಣ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಅವರು ಆಗಮಿಸುತ್ತಿದ್ದ ಎಲ್ಲಾ ಕಾರ್ಯಕ್ರಮಗಳಿಗೆ ಡಾ. ರಾಜನಂದಿನಿ ಗೈರಾಗಿದ್ದರು. ಆದರೆ ಕಾಗೋಡು ತಿಮ್ಮಪ್ಪ ಎಲ್ಲರೂ ಒಂದಾಗಿ ಬೇಳೂರು ಗೋಪಾಲಕೃಷ್ಣ ಗೆಲ್ಲಿಸೋಣ ಎಂದು ಮನವೊಲಿಸಿದ್ದರು.
ಕಾಗೋಡು ತಿಮ್ಮಪ್ಪ ಅಳಿಯ ಬೇಳೂರು ಗೋಪಾಲಕೃಷ್ಣ ಟಿಕೆಟ್ ಘೋಷಣೆಯಾಗುತ್ತಲೇ ಕಾಗೋಡು ತಿಮ್ಮಪ್ಪ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು. ಚುನಾವಣೆ ಗೆಲ್ಲಿಸುವ ಹೊಣೆ ನಿಮ್ಮದು ಎಂದು ಹೇಳಿದ್ದರು. ಬುಧವಾರ ಬೇಳೂರು ಪರವಾಗಿ ಪ್ರಚಾರ ನಡೆಸುವ ಸಂದರ್ಭದಲ್ಲಿಯೇ ಪುತ್ರಿ ಬಿಜೆಪಿ ಸೇರಿರುವ ವಿಚಾರ ಕಾಗೋಡು ಕಿವಿಗೆ ಬಿದ್ದಿದೆ.
ಮಾಧ್ಯಮಗಳ ಜೊತೆ ಮಾತನಾಡಿ ಕಾಗೋಡು ತಿಮ್ಮಪ್ಪ, "ನಾನೇನಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುತ್ತೇನೆ. ಮಗಳು ಬಿಜೆಪಿ ಸೇರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಅವಳು ನನ್ನ ಎದೆಗೆ ಚೂರು ಹಾಕಿದ್ದಾಳೆ. ಇದು ಹಾಲಪ್ಪನವರ ಚುನಾವಣಾ ತಂತ್ರ. ನಾನು ಅವಳ ಜೊತೆ ಮಾತನಾಡುತ್ತೇನೆ. ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡುವುದಿಲ್ಲ" ಎಂದರು.
ಹತರಾಳು ಹಾಲಪ್ಪ ಅಭ್ಯರ್ಥಿ; ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ರಾಜನಂದಿನಿ ಬಿಜೆಪಿ ಸೇರಿದರೂ ಸಹ ಈ ಬಾರಿಯ ಚುನಾವಣೆಯ ಟಿಕೆಟ್ ಸಿಗುವುದಿಲ್ಲ. 2023ರ ಚುನಾವಣೆಗೆ ಬಿಜೆಪಿ ಮಂಗಳವಾರ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಸಾಗರ ಕ್ಷೇತ್ರಕ್ಕೆ ಹಾಲಿ ಶಾಸಕ ಹರತಾಳು ಹಾಲಪ್ಪ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಆದರೆ ಜೆಡಿಎಸ್ ಪಕ್ಷ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ.
2013ರ ಚುನಾವಣೆಯಲ್ಲಿ ಸೊರಬದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದ ಹರತಾಳು ಹಾಲಪ್ಪ 2018ರ ಚುನಾವಣೆಯಲ್ಲಿ ಸಾಗರದಲ್ಲಿ ಬಿಜೆಪಿ ಅಭ್ಯರ್ಥಿಯಾದರು. ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪ ಸೋಲಿಸಿ, ಶಾಸಕರಾಗಿ ಆಯ್ಕೆಯಾದರು. ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಪಕ್ಷದ ಟಿಕೆಟ್ ಪಡೆದಿದ್ದಾರೆ.












Click it and Unblock the Notifications