Anna Bhagya: ರೇಷನ್ ಕಾರ್ಡ್‌ ಹೊಂದಿರುವವರಿಗೆ ಅಪ್‌ಡೇಟ್‌ ಮಾಹಿತಿ

ಶಿವಮೊಗ್ಗ, ಮಾರ್ಚ್‌ 13: ಕರ್ನಾಟಕ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದು ಅನ್ನಭಾಗ್ಯ. 2023ರ ಚುನಾವಣೆ ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಯೋಜನೆಯಲ್ಲಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿತು. ಪಡಿತರ ಚೀಟಿದಾರರಿಗೆ ಅಕ್ಕಿಯ ಬದಲು ಹಣವನ್ನು ನೀಡಲಾಗುತ್ತದೆ ಎಂದು ಹೇಳಿತು. ಈಗ ಯೋಜನೆಯನ್ನು ಮತ್ತೊಂದು ಬದಲಾವಣೆ ಮಾಡಲಾಗಿದೆ. ಈ ಕುರಿತು ರೇಷನ್ ಕಾರ್ಡ್‌ ಹೊಂದಿರುವವರಿಗೆ ಮಾಹಿತಿ ಇಲ್ಲಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ಅಂತ್ಯೋದಯ ಅನ್ನಭಾಗ್ಯ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಪಡಿತರ ಚೀಟಿಯ ಕುಟುಂಬ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮುಖಾಂತರ ಅಕ್ಕಿ ಹಣವನ್ನು ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಹಣದ ಬದಲಾಗಿ 2025ರ ಫೆಬ್ರವರಿ ತಿಂಗಳಿನಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆ ಮಾಡಲು ಈಗಾಗಲೇ ಕರ್ನಾಟಕ ಸರ್ಕಾರ ಆದೇಶಿಸಿದೆ.

Ration Card Holders Of Shivamogga Big Update

ಅಕ್ಕಿ ವಿತರಣೆ ಪ್ರಮಾಣ: ಅಂತ್ಯೋದಯ ಪಡಿತರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆಜಿ ಅಕ್ಕಿ. 4 ಸದಸ್ಯರಿರುವ ಕಾರ್ಡಿಗೆ 45 ಕೆಜಿ ಅಕ್ಕಿ, 5 ಸದಸ್ಯರರಿರುವ ಕಾರ್ಡಿಗೆ 65 ಕೆಜಿ ಅಕ್ಕಿ, 6 ಸದಸ್ಯರಿರುವ ಕಾರ್ಡಿಗೆ 85 ಕೆಜಿ ಅಕ್ಕಿ, 7 ಸದಸ್ಯರಿರುವ ಕಾರ್ಡುದಾರರಿಗೆ 105 ಕೆಜಿ ಅಕ್ಕಿ, 8 ಸದಸ್ಯರಿರುವ ಕಾರ್ಡಿಗೆ 125 ಕೆಜಿ ಅಕ್ಕಿ, 9 ಸದಸ್ಯರಿರುವ ಕಾರ್ಡಿಗೆ 145 ಕೆಜಿ ಅಕ್ಕಿ, 10 ಸದಸ್ಯರಿರುವ ಕಾರ್ಡಿಗೆ 165 ಕೆಜಿ ಅಕ್ಕಿ, 11 ಸದಸ್ಯರಿರುವ ಕಾರ್ಡಿಗೆ 185 ಕೆಜಿ ಅಕ್ಕಿ, 12 ಸದಸ್ಯರಿರುವ ಕಾರ್ಡಿಗೆ 205 ಕೆಜಿ ಅಕ್ಕಿಯನ್ನು ಹಾಗೂ ಆದ್ಯತಾ ಪಡಿತರ (ಪಿಪಿಹೆಚ್/ ಬಿಪಿಎಲ್) ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರಿಗೆ 15 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ.

ಪಡಿತರ ಚೀಟಿದಾರರು ಮಾರ್ಚ್ ತಿಂಗಳ ಅಂತ್ಯದವರೆಗೆ ತಮ್ಮ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಕೊಟ್ಟು ರಶೀದಿ ಪಡೆದು ಉಚಿತವಾಗಿ ಆಹಾರಧಾನ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ರೇಷನ್ ಕಾರ್ಡ್‌ ಹೊಂದಿರುವವರಿಗೆ ಮಾಹಿತಿ ನೀಡಲಾಗಿದೆ.

ಒಂದು ವೇಳೆ ನ್ಯಾಯ ಬೆಲೆ ಅಂಗಡಿಯವರು ಕಡಿಮೆ ಪ್ರಮಾಣದಲ್ಲಿ ಅಕ್ಕಿಯನ್ನು ವಿತರಿಸಿದಲ್ಲಿ. ಸಹಾಯವಾಣಿ ಸಂಖ್ಯೆ 1967ಗೆ ದೂರು ಸಲ್ಲಿಸಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಸಚಿವರು ಹೇಳಿದ್ದೇನು?; ಹಣದ ಬದಲು ಅಕ್ಕಿ ನೀಡುವ ಕುರಿತು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ. ಎಚ್. ಮುನಿಯಪ್ಪ ಮಾತನಾಡಿದ್ದಾರೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಮಹತ್ವದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿಯನ್ನು ವಿತರಿಸಲು ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ನಂತರದ ದಿನಗಳಲ್ಲಿ ಅಕ್ಕಿಯ ಲಭ್ಯವಾಗದ ಕಾರಣ ನಮ್ಮ ಸರ್ಕಾರ ಸಾರ್ವಜನಿಕರಿಗೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯ ಜೊತೆಗೆ ಉಳಿದ 5 ಕೆಜಿ ಅಕ್ಕಿಗೆ ರೂ. 170 ರೂ. ಗಳಂತೆ ನೇರ ನಗದು ವರ್ಗಾವಣೆ ಮಾಡುತ್ತಿದೆ.

ಕೇಂದ್ರ ಸರ್ಕಾರದಿಂದ ಅಕ್ಕಿ ಲಭ್ಯವಿರುವ ಹಿನ್ನಲೆಯಲ್ಲಿ ಜೂನ್-2025ರವರೆಗೆ ಪ್ರತಿ ಕೆಜಿಗೆ ರೂ. 22.50 ದರದಲ್ಲಿ ಸರಬರಾಜು ಮಾಡಲು ಒಪ್ಪಿಗೆ ನೀಡಿರುತ್ತದೆ. ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದಿಂದ ವಿತರಿಸಲು ಉದ್ದೇಶಿಸಿರುವ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರದ OMSS (D) ಯೋಜನೆಯಡಿ ಖರೀದಿಸಿ ಫೆಬ್ರವರಿ-2025ರಿಂದ ವಿತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ನಿಯಮಗಳ ಅನ್ವಯ ನಗರ ಪ್ರದೇಶದಲ್ಲಿ ಶೇ 50 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ 75ರಷ್ಟು ಅಂತ್ಯೋದಯ/ ಆದ್ಯತಾ ಪಡಿತರ ಕಾರ್ಡ್‌ಗಳನ್ನು ವಿತರಣೆ ಮಾಡಲು ಅವಕಾಶವಿರುತ್ತದೆ. ಕರ್ನಾಟಕ ಜನಸಂಖ್ಯೆ 2011ರ ಜನಗಣತಿ ಪ್ರಕಾರ ನಗರ ಮತ್ತು ಗ್ರಾಮೀಣ ಸೇರಿ ಶೇ. 65.96 ಕಾರ್ಡ್ ವಿತರಣೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+