ಶಿವಮೊಗ್ಗ; ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿ, ಸಚಿವರ ಖಡಕ್ ಸೂಚನೆ
ಶಿವಮೊಗ್ಗ, ಸೆಪ್ಟೆಂಬರ್ 26; ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ನಗರಗಳಲ್ಲಿ ಶಿವಮೊಗ್ಗವೂ ಒಂದು. ಆದರೆ ನಗರದಲ್ಲಿ ಈ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮೊದಲಿನಿಂದಲೂ ದೂರುಗಳು ಕೇಳಿ ಬರುತ್ತಿವೆ.
ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಮಾರ್ಟ್‍ಸಿಟಿ ಯೋಜನೆ, ಮೆಗ್ಗಾನ್ ಆಸ್ಪತ್ರೆ, ಪ್ರವಾಸೋದ್ಯಮ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿದ್ಯುತ್ ಹಾಗೂ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.

ಸಭೆಯಲ್ಲಿ ಮಾತನಾಡಿದ ಸಚಿವರು, "ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ತರಹದ ಆಕ್ಷೇಪಣೆ ಇದ್ದು, ಸದರಿ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ, ಸರಿಯಾಗಿದ್ದಲ್ಲಿ ಮಾತ್ರ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ" ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ಮಾಯಣ್ಣಗೌಡಗೆ ಸೂಚಿಸಿದರು.
ಕಳಪೆ ಕಾಮಗಾರಿ ಆರೋಪ; ಸಭೆಯಲ್ಲಿ ಸಚಿವರು ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿರುವ ಹಾಗೂ ಅಪೂರ್ಣವಾಗಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದಂತೆ ಸೂಚಿಸಿದರು.
ಮಹಾನಗರಪಾಲಿಕೆ ಆವರಣದಲ್ಲಿ ಅನುಮತಿ ಇಲ್ಲದೆ ಕೈಕೊಳ್ಳಲಾಗಿರುವ ಕಾಮಗಾರಿ ಹಾಗೂ ನಗರದ ವಿವಿಧ ಬಡಾವಣೆಗಳಲ್ಲಿ ಅವೈಜ್ಞಾನಿಕವಾಗಿ ಬ್ಲಾಕ್‌ಗಳನ್ನು ಅಳವಡಿಸಿರುವ ಕಾಮಗಾರಿಗಳು, ಇನ್ನೂ ಕೆಲವು ಸ್ಥಳಗಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಹಣ ವಿನಿಯೋಗ ಮಾಡಿರುವುದು ಕಂಡು ಬಂದಿದೆ ಎಂದರು.
ಅವೈಜ್ಞಾನಿಕವಾಗಿ ಮಾಡಲಾಗಿರುವ ಪುಟ್‌ಪಾತ್ ಕಾಮಗಾರಿಯಿಂದಾಗಿ ಮಳೆನೀರು ನಿಂತು ಜನಸಾಮಾನ್ಯರಿಗೆ, ಪಾದಚಾರಿಗಳಿಗೆ, ವಾಹನ ಚಾಲಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಸ್ಟೇಡಿಯಂ ಸುತ್ತಲೂ ನಿರ್ಮಾಣಗೊಂಡಿರುವ ವಾಕಿಂಗ್‍ಪಾತ್ ಕಾಮಗಾರಿ ಅವೈಜ್ಞಾನಿಕವಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದೂರುಗಳಿವೆ ಎಂದು ಸಚಿವರು ಹೇಳಿರು.
ಇಂತಹ ಅನೇಕ ಯೋಜನೆಗಳ ಅನುಷ್ಟಾನದಿಂದಾಗಿ ಯೋಜನೆಯ ಆರಂಭದಿಂದ ಮುಕ್ತಾಯ ಹಂತದವರೆಗೂ ಜನ ಕಿರಿಕಿರಿ ಅನುಭವಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ವಿಷಯವನ್ನು ತಾವು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದಲ್ಲಿ ಕೈಗೊಂಡ ಎಲ್ಲಾ ಕಾಮಗಾರಿಗಳ ಕುರಿತು ವಿವರವಾದ ಮಾಹಿತಿಯನ್ನು ಕೂಡಲೇ ಸಲ್ಲಿಸುವಂತೆ ಸಚಿವ ಮಧು ಬಂಗಾರಪ್ಪ ಮಹಾನಗರ ಪಾಲಿಕೆ ಆಯುಕ್ತ ಹಾಗೂ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ಮಾಯಣ್ಣ ಗೌಡಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳ ಮಾಹಿತಿ; ನಗರದ ಗೋಪಾಳ ಬಡಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಹೆಸರಿನಲ್ಲಿ ನಿರ್ಮಿಸಲಾಗಿದ್ದ ಬಸ್ ತಂಗುತಾಣದ ಹೆಸರನ್ನು ತೆರವುಗೊಳಿಸಿ ಸ್ಮಾರ್ಟ್‍ಸಿಟಿ ಎಂದು ನಾಮಫಲಕ ಅಳವಡಿಸಿ ರಾಜ್ಯದ ಹಿರಿಯ ನಾಯಕರಿಗೆ ಅಗೌರವ ತೋರಿಸಿದಂತಾಗಿದೆ ಎಂಬ ವಿಚಾರ ಚರ್ಚೆಗೆ ಬಂದಿತು. ಈ ಕುರಿತು ಸಚಿವರು ಬೇಸರ ವ್ಯಕ್ತಪಡಿಸಿದರು. ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಮಾತನಾಡಿ, "ಕೆಲವು ಕಾಮಗಾರಿಗಳ ಅನುಷ್ಟಾನದಲ್ಲಿ ಅಧಿಕಾರಿಗಳ ನಡುವೆ ಪರಸ್ಪರ ಸಮನ್ವಯತೆ ಇಲ್ಲದೆ ನ್ಯೂನ್ಯತೆಗಳಾಗಿವೆ. ನಗರದ ಹೊರವಲಯದಲ್ಲಿರುವ ಮುದ್ದಣ್ಣನಕೆರೆಯ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿದ ಬಗ್ಗೆ ವಿವರಣೆ ನೀಡುವಂತೆ" ಸೂಚಿಸಿದರು.
ಕೆಲವು ದಿನಗಳ ಹಿಂದೆ ಕೇಂದ್ರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ 2022ನೇ ಸಾಲಿನ 'ಅತ್ಯುತ್ತಮ ರಾಷ್ಟ್ರೀಯ ಸ್ಮಾರ್ಟ್ ಸಿಟಿ' ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಕರ್ನಾಟಕದಲ್ಲಿ ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಸ್ಮಾರ್ಟ್ ಸಿಟಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.
ನಗರ ಪರಿಸರ ವಿಭಾಗದಲ್ಲಿ ಶಿವಮೊಗ್ಗ ನಗರಕ್ಕೆ ಪ್ರಶಸ್ತಿ ಸಿಕ್ಕಿದೆ. ಸೆಪ್ಟೆಂಬರ್ 27ರಂದು ಇಂಧೋರ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ.












Click it and Unblock the Notifications