ಪರಿಷತ್ ಫೈಟ್: ಈಶ್ವರಪ್ಪ ಪುತ್ರನ ಕೈತಪ್ಪಿದ ಬಿಜೆಪಿ ಟಿಕೆಟ್ ಯಾರಿಗೆ?
ಶಿವಮೊಗ್ಗ, ಮೇ 12: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಕರ್ನಾಟಕ ವಿಧಾನ ಪರಿಷತ್‌ನ 6 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. 3 ಪದವೀಧರ ಮತ್ತು 3 ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3ರಂದು ಮತದಾನ ನಡೆಯಲಿದ್ದು, ಜೂನ್ 6ರಂದು ಫಲಿತಾಂಶ ಪ್ರಕಟವಾಗಲಿದೆ.
ಈ ಕ್ಷೇತ್ರಗಳ ಪೈಕಿ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಸಹ ಚುನಾವಣೆ ನಡೆಯಲಿದೆ. ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜನಾಥ. ಶನಿವಾರ ಶಿವಮೊಗ್ಗದ ಖ್ಯಾತ ವೈದ್ಯರಾದ ಧನಂಜಯ ಸರ್ಜಿ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.

ನೈಋತ್ಯ ಪದವೀಧರ ಕ್ಷೇತ್ರಕ್ಕೆ ಶಿವಮೊಗ್ಗ, ದಾವಣಗೆರೆ (ಹೊನ್ನಾಳಿ, ಚನ್ನಗಿರಿ) ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ಸೇರುತ್ತವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕೆ. ಎಸ್. ಈಶ್ವರಪ್ಪ ಪುತ್ರ ಕೆ. ಇ. ಕಾಂತೇಶ್‌ಗೆ ಸಿಗಬೇಕಿತ್ತು.
ಹಿಂದೆಯೇ ಆಫರ್ ನೀಡಲಾಗಿತ್ತು?; ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನ ಮೇ 7ರಂದು ನಡೆದಿದ್ದು, ಫಲಿತಾಂಶ ಮತಯಂತ್ರ ಸೇರಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ. ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಕಣದಲ್ಲಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೆ. ಎಸ್. ಈಶ್ವರಪ್ಪ ಪುತ್ರ ಕೆ. ಇ. ಕಾಂತೇಶ್ ಕೈ ತಪ್ಪಿತ್ತು. ಇದರಿಂದ ಅಸಮಾಧಾನಗೊಂಡ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯವ ಘೋಷಣೆ ಮಾಡಿದರು.
ಆಗ ಬಿಜೆಪಿ ಅವರ ಮನವೊಲಿಕೆಗೆ ಮುಂದಾಯಿತು. ಕರ್ನಾಟಕಕ್ಕೆ ಬಿಜೆಪಿ ಚುನಾವಣಾ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರವಾಲ್ ಶಿವಮೊಗ್ಗದಲ್ಲಿರುವ ಈಶ್ವರಪ್ಪ ನಿವಾಸಕ್ಕೆ ಸಂಧಾನ ಸಭೆಗೆ ಆಗಮಿಸಿದರು. ಕೆ. ಇ. ಕಾಂತೇಶ್‌ಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಆಫರ್ ನೀಡಿದ್ದರು.
ಆದರೆ ಚುನಾವಣಾ ಚಿತ್ರಣ ಬದಲಾಗಲಿಲ್ಲ. ಕೆ. ಎಸ್. ಈಶ್ವರಪ್ಪ ಬಿಜೆಪಿಯ ಯಾವ ನಾಯಕರು, ಸ್ವತಃ ಅಮಿತ್ ಶಾ ಮನವೊಲಿಕೆಗೂ ಬಗ್ಗಲಿಲ್ಲ. ನಾಮಪತ್ರ ವಾಪಸ್ ಪಡೆಯದೇ ಕಣದಲ್ಲಿಯೇ ಉಳಿದರು. ಅಂತಿಮವಾಗಿ ಬಿಜೆಪಿ ಈಶ್ವರಪ್ಪರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿತು.
ಚನ್ನಗಿರಿ ಮೂಲದ ಶಿವಮೊಗ್ಗದ ಖ್ಯಾತ ವೈದ್ಯರಾದ ಧನಂಜಯ ಸರ್ಜಿ ಈಗ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಧನಂಜಯ ಸರ್ಜಿ ಹೆಸರು ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರಕ್ಕೆ ಅವರು ಅಭ್ಯರ್ಥಿ ಎಂಬ ಸುದ್ದಿ ಬಲವಾಗಿ ಕೇಳಿ ಬಂದಿತ್ತು.
ವಿಧಾನಸಭೆ ಚುನಾವಣೆಯ ಸಮಯದಲ್ಲಿ ಚುನಾವಣಾ ರಾಜಕೀಯಕ್ಕೆ ಕೆ. ಎಸ್. ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದರು. ಆಗ ಅವರ ಪುತ್ರ ಕೆ. ಇ. ಕಾಂತೇಶ್ ಬದಲು ಧನಂಜಯ ಸರ್ಜಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಬಳಿಕ ಬಿಜೆಪಿ ಎಸ್. ಎನ್. ಚನ್ನಬಸಪ್ಪಗೆ ಟಿಕೆಟ್ ನೀಡಿತು. ಅವರು ಚುನಾವಣೆಯಲ್ಲಿ ಗೆದ್ದರು.
ವಿಧಾನಸಭೆ ಚುನಾವಣೆ ಟಿಕೆಟ್ ತ್ಯಾಗ ಮಾಡಿದ್ದ ಈಶ್ವರಪ್ಪ ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೆ. ಇ. ಕಾಂತೇಶ್‌ಗೆ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿ ಮಾಜಿ ಮುಖ್ಯಮಂತ್ರಿ, ಶಿಗ್ಗಾವಿಯ ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಅಭ್ಯರ್ಥಿ ಎಂದು ಘೋಷಣೆ ಮಾಡಿತು.
ತೀವ್ರವಾಗಿ ಅಸಮಾಧಾನಗೊಂಡ ಕೆ. ಎಸ್. ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಯಡಿಯೂರಪ್ಪ ಪುತ್ರ, ಶಿಕಾರಿಪುರ ಶಾಸಕ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯವ ಘೋಷಣೆ ಮಾಡಿದರು. ಆಗ ಈಶ್ವರಪ್ಪ ಪುತ್ರನಿಗೆ ಎಂಎಲ್‌ಸಿ ಟಿಕೆಟ್ ಆಫರ್ ನೀಡಲಾಗಿತ್ತು. ಆದರೆ ಮನವೊಲಿಕೆಗೆ ಬಗ್ಗದ ಈಶ್ವರಪ್ಪ ಪಕ್ಷದಿಂದಲೇ ಉಚ್ಛಾಟನೆಗೊಂಡರು. ಈಗ ಎಂಎಲ್‌ಸಿ ಟಿಕೆಟ್ ಸಹ ಈಶ್ವರಪ್ಪ ಪುತ್ರನ ಕೈ ತಪ್ಪಿದೆ.
ಲೋಕಸಭೆ ಚುನಾವಣೆ ಮತ ಎಣಿಕೆ ಜೂನ್ 4ರಂದು ನಡೆಯಲಿದೆ. ಬಿ. ವೈ. ರಾಘವೇಂದ್ರ ಸೋಲಿಸಿ ಸಂಸತ್ ಪ್ರವೇಶ ಮಾಡಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುತ್ತೇನೆ ಎಂದು ಹೇಳುತ್ತಿರುವ ಈಶ್ವರಪ್ಪ ಅದೃಷ್ಟ ಹೇಗಿದೆ? ಎಂಬುದು ಅಂದು ತಿಳಿಯಲಿದೆ.












Click it and Unblock the Notifications