ಶಿವಮೊಗ್ಗ; ಆಸ್ತಿ ತೆರಿಗೆ ಪಾವತಿಗೆ ಹೊಸ ವ್ಯವಸ್ಥೆ
ಶಿವಮೊಗ್ಗ, ಜೂನ್ 07; ಕೋವಿಡ್ ಹರಡುವಿಕೆ ನಿಯಂತ್ರಣಕ್ಕಾಗಿ ಸರ್ಕಾರ ಜೂನ್ 14ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಿದೆ. ಇದರಿಂದಾಗಿ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ಆಸ್ತಿ ತೆರಿಗೆ ಪಾವತಿಸಲು ಜನರು ಕಚೇರಿಗೆ ಬರಲು ಅವಕಾಶವಿಲ್ಲ.
ಆಸ್ತಿ ತೆರಿಗೆದಾರರು ಇರುವ ಸ್ಥಳಕ್ಕೇ ಪಾಲಿಕೆಯ ಕರ ವಸೂಲಿಗಾರರು ಬಂದು ಇಡಿಸಿ ಯಂತ್ರಗಳ ಮೂಲಕ ಆಸ್ತಿ ತೆರಿಗೆಯನ್ನು ಕಟ್ಟಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಲಾಕ್‌ಡೌನ್ ಅಂತ್ಯಗೊಂಡ ಬಳಿಕ ಪಾಲಿಕೆ ಆವರಣದಲ್ಲಿಯೇ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.
ಸರ್ಕಾರದ 30/6/2021ರ ಆದೇಶದ ಅನ್ವಯ ಆಸ್ತಿ ತೆರಿಗೆ ಪಾವತಿ ಮೇಲಿನ ಶೇ 5ರ ತೆರಿಗೆ ರಿಯಾಯಿತಿ ಸೌಲಭ್ಯದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಜನರು ಈ ರಿಯಾಯಿತಿ ಸೌಲಭ್ಯವನ್ನು ಪಡೆದು ಆಸ್ತಿ ತೆರಿಗೆ ಪಾವತಿಸಬಹುದು.

ಲಾಕ್‌ಡೌನ್ ಹಿನ್ನಲೆಯಲ್ಲಿ ಜನರು ಆಸ್ತಿ ತೆರಿಗೆಯನ್ನು ಮಹಾನಗರಪಾಲಿಕೆ ವೆಬ್‍ಸೈಟ್ ಮುಖಾಂತರ ಸಹ ಪಾವತಿ ಮಾಡಬಹುದು. ಯುಪಿಐ ಮೊಬೈಲ್ ಆ್ಯಪ್‍ಗಳಾದ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಇತರೆ ಮೂಲಕ ಸಹ ತೆರಿಗೆ ಪಾವತಿ ಮಾಡಲು ಅವಕಾಶವಿದೆ.
ಪಾಲಿಕೆಯಿಂದ ನೇಮಕವಾದ ಕರ ವಸೂಲಿಗಾರರು ಮನೆ ಮನೆಗೆ ತೆರಳಿ ತೆರಿಗೆಯನ್ನು ಪಡೆದು ರಸೀದಿಯನ್ನು ನೀಡಲಿದ್ದಾರೆ. ಆದ್ದರಿಂದ ಮಾಲೀಕರು ಇದರ ಸದುಪಯೋಗ ಪಡೆದು ಆಸ್ತಿ ತೆರಿಗೆ ಪಾವತಿಸಿ ಪಾಲಿಕೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ವಾರದಿಂದ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿತ್ತು. ಪ್ರಸ್ತುತ ಸಂಪೂರ್ಣ ಲಾಕ್‌ಡೌನ್ ಅಂತ್ಯಗೊಂಡಿದ್ದು, ಜೂನ್ 14ರ ತನಕ ಸರ್ಕಾರ ಘೋಷಣೆ ಮಾಡಿರುವ ಲಾಕ್‌ಡೌನ್ ನಿಯಮಗಳು ಜಾರಿಯಲ್ಲಿರಲಿವೆ.












Click it and Unblock the Notifications