ಎಲೆಕ್ಷನ್‌ವರೆಗೂ ಸುದೀಪ್ ಸಿನಿಮಾಗಳನ್ನು ಬ್ಯಾನ್ ಮಾಡುವಂತೆ ಚುನಾವಣಾ ಆಯೋಗಕ್ಕೆ ವಕೀಲರ ಮನವಿ
ಶಿವಮೊಗ್ಗ, ಏಪ್ರಿಲ್. 06: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಸ್ಟಾರ್‌ಗಳನ್ನು ಕರೆತರಲು ಪ್ರಯತ್ನಿಸುತ್ತವೆ. ಇದರ ಭಾಗವಾಗಿಯೇ ಬಿಜೆಪಿ ನಟ ಕಿಚ್ಚ ಸುದೀಪ್‌ರನ್ನು ಚುನಾವಣಾ ಪ್ರಚಾರಕ್ಕೆ ಇಳಿಸುತ್ತಿದೆ. ಇದಕ್ಕೆ ಹಲವು ಕಡೆ ಆಕ್ಷೇಪಗಳು ಕೇಳಿ ಬಂದಿವೆ. ಆದರೆ, ಸುದೀಪ್ ತಾನು ಬೊಮ್ಮಾಯಿ ಮಾಮಗಾಗಿ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.
ನಟ ಕಿಚ್ಚ ಸುದೀಪ್ ಪ್ರಚಾರ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೆ ಶಿವಮೊಗ್ಗ ಮೂಲದ ವಕೀಲ ಕೆಪಿ ಶ್ರೀಪಾಲ್ ಭಾರತೀಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಚುನಾವಣಾ ಫಲಿತಾಂಶದವರೆಗೆ ನಟ ಕಿಚ್ಚ ಸುದೀಪ್ ಅವರ ಚಲನಚಿತ್ರಗಳು, ಕಾರ್ಯಕ್ರಮಗಳು ಮತ್ತು ಜಾಹೀರಾತುಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಮನವಿ ಮಾಡಿದ್ದಾರೆ.

ಬುಧವಾರದಂದು ಖ್ಯಾತ ನಟ ಸುದೀಪ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಘೋಷಿಸಿದ್ದು, ಚುನಾವಣಾ ಪ್ರಚಾರದಲ್ಲಿ ಬಸವರಾಜ ಬೊಮ್ಮಾಯಿ ಮಾಮ ಅವರ ಮಾತನ್ನು ಅನುಸರಿಸುವುದಾಗಿ ಹೇಳಿದ್ದಾರೆ. ಎಲ್ಲರ ಪರ ಪ್ರಚಾರ ಮಾಡುವುದಿಲ್ಲ. 'ನಾನು ಪ್ರೀತಿ ಮತ್ತು ಗೌರವದಿಂದ 'ಮಾಮಾ' ಎಂದು ಕರೆಯುವ ಬಸವರಾಜ ಬೊಮ್ಮಾಯಿ ಅವರಿಗೆ ನನ್ನ ಬೆಂಬಲವನ್ನು ಘೋಷಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಕಷ್ಟದ ಸಮಯದಲ್ಲಿ ಬೊಮ್ಮಾಯಿ ಮಾಮಾ ನನ್ನ ಬೆಂಬಲಕ್ಕೆ ನಿಂತಿದ್ದಾರೆ' ಎಂದು ತಿಳಿಸಿದ್ದಾರೆ.
ಚುನಾವಣೆಗೆ ಸಿದ್ಧವಾಗಿರುವ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಿಚ್ಚ ಸುದೀಪ್ ಅವರ ಸಿನಿಮಾಗಳು ಮತ್ತು ಜಾಹೀರಾತುಗಳು ಸಾರ್ವಜನಿಕರ ಮೇಲೆ ಪ್ರಭಾವ ಬೀರಬಹುದು ಎಂದು ವಕೀಲ ಕೆಪಿ ಶ್ರೀಪಾಲ್ ಹೇಳಿದ್ದಾರೆ.

"ನಟ ಸುದೀಪ್ ಅವರು ಬಿಜೆಪಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಅವರು ರಾಜ್ಯಾದ್ಯಂತ ಪಕ್ಷದ ಸ್ಟಾರ್ ಪ್ರಚಾರಕರಾಗಿ ಉಳಿಯುತ್ತಾರೆ. ಆದ್ದರಿಂದ, ಮಾದರಿ ನೀತಿ ಸಂಹಿತೆಯ ಸಮಯದಲ್ಲಿ ಸಾರ್ವಜನಿಕರ ಮೇಲೆ ನೇರವಾಗಿ ಪ್ರಭಾವ ಬೀರುವ ಕಾರಣ, ಮೇ 13 ರವರೆಗೆ ಅವರ ಚಲನಚಿತ್ರಗಳು ಮತ್ತು ಜಾಹೀರಾತುಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಬೇಕೆಂದು ನಾನು ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇನೆ" ಎಂದಿದ್ದಾರೆ.
ಇನ್ನು, ಸುದೀಪ್ ಅವರು ಬಿಜೆಪಿಗೆ ಬೆಂಬಲ ನೀಡಿರುವುದು ರಾಜಕೀಯದಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಸುದೀಪ್ ಬೆಂಬಲದಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಹೇಳಿವೆ. '6.5 ಕೋಟಿ ಕನ್ನಡಿಗರು ಕರ್ನಾಟಕ ಚುನಾವಣೆಯನ್ನು ನಿರ್ಧರಿಸುತ್ತಾರೆ. ಸಿನಿಮಾ ನಟರಲ್ಲ' ಎಂದು ಕಾಂಗ್ರೆಸ್ ಸಂಸದ ರಣದೀಪ್ ಸುರ್ಜೇವಾಲಾ ಟೀಕಿಸಿದ್ದಾರೆ.
'ಬಿಜೆಪಿ ಯಾರ ಮೇಲೂ ಪ್ರಭಾವ ಬೀರಬಹುದು. ಅವರು ಪ್ರಭಾವ ಬೀರಲಿ. ಕರ್ನಾಟಕ ಚುನಾವಣೆಯನ್ನು 6.5 ಕೋಟಿ ಕನ್ನಡಿಗ ಸಹೋದರ ಸಹೋದರಿಯರು ನಿರ್ಧರಿಸುತ್ತಾರೆಯೇ ಹೊರತು ಸಿನಿಮಾ ನಟರಲ್ಲ' ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಇತ್ತ, ಜೆಡಿಎಸ್ ಮುಖಂಡ, ಮಾಜಿ ಸಿಎಂ ಎಚ್,ಡಿ ಕುಮಾರಸ್ವಾಮಿ ಕೂಡ, ನಟ ಸುದೀಪ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸುವುದಾಗಿ ಹೇಳಿರುವುದು ಅವರ ವೈಯಕ್ತಿಕ ವಿಚಾರ. ಆದರೆ, ಇದರಿಂದ ಯಾವುದೇ ದೊಡ್ಡ ಪ್ರಯೋಜನವಾಗುವುದಿಲ್ಲ. ಬಿಜೆಪಿಯವರು ಅಭಿವೃದ್ಧಿ ವಿಚಾರದಲ್ಲಿ ವೈಫಲ್ಯ ಕಂಡಿದ್ದು, ಇಂಥ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಇದರಿಂದ ಪ್ರಯೋಜನವಾಗದು ಎಂದು ಹೇಳಿದ್ದಾರೆ.
ಬುಧವಾರ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಿಚ್ಚ ಸುದೀಪ್, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಆದರೆ ಚುನಾವಣೆಯಲ್ಲಿ ಗೆಲ್ಲಲು ಬೊಮ್ಮಾಯಿ ಅವರಿಗೆ ಸಹಾಯ ಮಾಡುತ್ತೇನೆ. ನಾನು ರಾಜಕಾರಣಿಯಲ್ಲ ಆದರೆ ನಟ. ನನ್ನ ಕಷ್ಟದ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತ ವ್ಯಕ್ತಿಯನ್ನು ಬೆಂಬಲಿಸಲು ನಾನು ಇಲ್ಲಿದ್ದೇನೆ. ಅಂತಹವರಿಗೆ ಜೀವನದಲ್ಲಿ ಕೃತಜ್ಞತೆ ಸಲ್ಲಿಸುವ ಸಮಯ ಬಂದಿದೆ ಎಂದು ಹೇಳಿದ್ದರು.












Click it and Unblock the Notifications