ನಡು ರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡು ಶಾಸಕ ಕುಮಾರ್ ಬಂಗಾರಪ್ಪ ಅವಾಜ್; ಪರವಿರೋಧದ ಚರ್ಚೆ
ಶಿವಮೊಗ್ಗ, ಜುಲೈ 24: ಶಿವಮೊಗ್ಗದ ಸೊರಬ ಪಟ್ಟಣದಲ್ಲಿ ಖಾಸಗಿ ಸಿಮೆಂಟ್ ಅಂಗಡಿಯ ಮುಂದೆ ರಸ್ತೆಗೆ ಅಡಲಾಗಿ ವಾಹನ ನಿಲ್ಲಿಸಿದ್ದಕ್ಕೆ ಸೊರಬ ಶಾಸಕ ಕುಮಾರ್ ಬಂಗಾರಪ್ಪ ವಾಹನ ಮಾಲೀಕರಿಗೆ ಹಾಗೂ ಸಿಮೆಂಟ್ ಅಂಗಡಿಯ ಮಹಿಳೆಯೊಬ್ಬರಿಗೆ ತರಾಟೆ ತೆಗೆದುಕೊಂಡ ಘಟನೆ ನಿನ್ನೆ ನಡೆದಿದ್ದು, ಶಾಸಕರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಸೊರಬ ಸಾಗರ ರಸ್ತೆಯಲ್ಲಿರುವ ಖಾಸಗಿ ಸಿಮೆಂಟ್ ಅಂಗಡಿಯೊಂದರಲ್ಲಿ ಅಡ್ಡಲಾಗಿ ವಾಹನ ನಿಲ್ಲಿಸಲಾಗಿತ್ತು. ಇದೇ ರಸ್ತೆಯಲ್ಲಿ ಕುಮಾರ್ ಬಂಗಾರಪ್ಪ ಸಾಗುವಾಗ ವಾಹನದಿಂದ ಇಳಿದು ನಡು ರಸ್ತೆಯಲ್ಲಿ ವಾಹನ ನಿಲ್ಲಿಸಿದ್ದೀಯಾ, ಇಡೀ ರಸ್ತೆಗೆ ಫುಲ್ ಬ್ಲಾಕ್ ಮಾಡಿದ್ದೀಯಾ ಎಂದು ರೇಗಾಡಿದ್ದಾರೆ.

ಯಾರ್ರೀ ಈಡಿಯಟ್, ಬಂದಾಗೆಲ್ಲಾ ಇದೇ ಆಯ್ತು ನಿಮ್ದು ಎಂದು ಅವಾಜ್ ಹಾಕಿದ್ದಾರೆ. ಮಹಿಳೆಯು, ವಾಹನ ನಿಲ್ಲಿಸುವುದು ಚಾಲಕನ ಕೆಲಸ ನಮ್ಮದಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಶಾಸಕರು, ಪುರಸಭಾ ಮುಖ್ಯಾಧಿಕಾರಿ ಸ್ಥಳಕ್ಕೆ ಬರಲು ಹೇಳಿ ಅಂಗಡಿಯ ಲೈಸೆನ್ಸ್ ರದ್ದು ಮಾಡಿ ಎಂದಿದ್ದಾರೆ. ಆದರೆ ಇಷ್ಟೆಲ್ಲಾ ಹೇಳಿದ ಶಾಸಕರೇ ತಮ್ಮ ವಾಹನವನ್ನು ಅರ್ಧ ಗಂಟೆಗೂ ಹೆಚ್ಚುಕಾಲ ನಡು ರಸ್ತೆಯಲ್ಲಿ ನಿಲ್ಲಿಸಿದ್ದಾರೆ. ಅಷ್ಟು ಹೊತ್ತಿಗೆ ಅವರ ಹಿಂದೆ ವಾಹನಗಳು ಟ್ರಾಫಿಕ್ ಜಾಮ್ ನಿಂದ ಸಾಲುಗಟ್ಟಿ ನಿಂತಿವೆ. ಸ್ವಲ್ಪ ತಾಳ್ಮೆ ತೆಗೆದುಕೊಂಡಿದ್ದರೆ ಆಗುತ್ತಿತ್ತು. ಮಹಿಳೆಗೆ ಬೈದಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದು ಟೀಕೆಗಳು ವ್ಯಕ್ತಗೊಂಡಿವೆ.
ಈ ವಿಡಿಯೋವನ್ನು ಶಾಸಕರೇ ತಮ್ಮ ಫೇಸ್ ಬುಕ್ ನಲ್ಲಿ ವೈರಲ್ ಮಾಡಿದ್ದಾರೆ. ಇದರ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳು ಬರುತ್ತಿವೆ.












Click it and Unblock the Notifications