BJP List: ಅಭಿಮಾನಿಗಳ ಸಭೆ ಕರೆದ ಕೆಎಸ್ ಈಶ್ವರಪ್ಪ!
ಬೆಂಗಳೂರು, ಮಾರ್ಚ್ 13: ಲೋಕಸಭೆ ಚುನಾವಣೆ 2024ಕ್ಕೆ ಕರ್ನಾಟಕ ಬಿಜೆಪಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. 9 ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದೆ. ಉಡುಪಿ-ಚಿಕ್ಕಮಗಳೂರು ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ ಕ್ಷೇತ್ರವೇ ಬದಲಾಗಿದೆ.
ಬುಧವಾರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಶಿವಮೊಗ್ಗ ಕ್ಷೇತ್ರಕ್ಕೆ ಬಿ. ವೈ. ರಾಘವೇಂದ್ರ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಕ್ಷೇತ್ರದ ಹಾಲಿ ಸಂಸದರು ಅವರು. ಕಾಂಗ್ರೆಸ್ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಚುನಾವಣಾ ಚಿತ್ರಣ ಸ್ಪಷ್ಟವಾಗಿದೆ.

ಆದರೆ, ಹಾವೇರಿ ಕ್ಷೇತ್ರದಲ್ಲಿ ಹಾಲಿ ಸಂಸದ ಶಿವಕುಮಾರ ಉದಾಸಿಗೆ ಟಿಕೆಟ್ ಮಿಸ್ ಆಗಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಮನಿಸಿಕೊಂಡಿದ್ದಾರೆ.
ಪುತ್ರ ಕಾಂತೇಶ್ ಈಶ್ವರಪ್ಪಗೆ ಹಾವೇರಿಯ ಟಿಕೆಟ್‌ಗಾಗಿ ಈಶ್ವರಪ್ಪ ಪಟ್ಟು ಹಿಡಿದಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರದ ಟಿಕೆಟ್ ಈಶ್ವರಪ್ಪ ಕೈ ತಪ್ಪಿತ್ತು. ಈಗ ಪುತ್ರನಿಗೆ ಲೋಕಸಭೆ ಟಿಕೆಟ್ ಕೈತಪ್ಪಿದ್ದು, ಈಶ್ವರಪ್ಪ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಸಭೆ ಕರೆದ ಈಶ್ವರಪ್ಪ: ಪುತ್ರ ಕಾಂತೇಶ್‌ಗೆ ಹಾವೇರಿ ಲೋಕಸಭೆ ಟಿಕೆಟ್ ಕೈತಪ್ಪಿದರೆ ಕೆ. ಎಸ್. ಈಶ್ವರಪ್ಪ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಈಗ ಕಾಂತೇಶ್‌ಗೆ ಟಿಕೆಟ್ ಸಿಕ್ಕಿಲ್ಲ. ಆದ್ದರಿಂದ ಈಶ್ವರಪ್ಪ ನಡೆ ಏನು?.
ಬುಧವಾರ ಸಂಜೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ಬಳಿಕ ಕೆ. ಎಸ್. ಈಶ್ವರಪ್ಪ ಅಭಿಮಾನಿಗಳ ಸಭೆಯನ್ನು ಕರೆದಿದ್ದಾರೆ. ಮಾರ್ಚ್ 15ರಂದು ಈ ಸಭೆ ಶಿವಮೊಗ್ಗದಲ್ಲಿ ನಡೆಯಲಿದೆ. ಬಿಜೆಪಿ ವರಿಷ್ಠರ ವಿರುದ್ಧ ಸಿಡಿದು ನಿಂತು ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಲಿದ್ದಾರೆಯೇ? ಕಾದು ನೋಡಬೇಕಿದೆ.
2023ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಚುನಾವಣಾ ರಾಜಕೀಯಕ್ಕೆ ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದ್ದರು. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅವರ ಬೆಂಬಲಿಗರಾದ ಚನ್ನಬಸಪ್ಪಗೆ ಪಕ್ಷ ಟಿಕೆಟ್ ನೀಡಿತು. ಅವರು ಚುನಾವಣೆಯಲ್ಲಿ ಗೆದ್ದು ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಟ್ಟರು.
ಆಗಲೇ ಈಶ್ವರಪ್ಪ ಲೋಕಸಭೆ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕಾಂತೇಶ್ ಈಶ್ವರಪ್ಪ ಹಾವೇರಿಯಿಂದ ಸ್ಪರ್ಧಿಸುವ ಆಲೋಚನೆ ತಲೆಕೆಳಗಾಗಿದೆ.
ಹಾವೇರಿಯ ಹಾಲಿ ಸಂಸದ ಶಿವಕುಮಾರ್ ಉದಾಸಿ 2019ರ ಚುನಾವಣೆಯಲ್ಲಿ 683,660 ಮತಗಳನ್ನು ಪಡೆದುದ ಜಯಗಳಿಸಿದ್ದರು. 2014ರ ಚುನಾವಣೆಯಲ್ಲಿ 566,790 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಆದರೆ 2024ರ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದ್ದರಿಂದ ಕೆ. ಎಸ್. ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿ ಎಂದು ಬೇಡಿಕೆ ಇಟ್ಟಿದ್ದರು.
"ಹಾವೇರಿ ಟಿಕೆಟ್ ಬಗ್ಗೆ ಏನೂ ಹೇಳಲ್ಲ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು" ಎಂದು ಮಂಗಳವಾರ ಕೊಲ್ಲೂರಿನಲ್ಲಿ ಕೆ. ಎಸ್. ಈಶ್ವರಪ್ಪ ಹೇಳಿದ್ದರು. ಆದರೆ ಇಂದು ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಮಾರ್ಚ್ 15ರಂದು ಅಭಿಮಾನಿಗಳ ಸಭೆಯನ್ನು ಅವರು ಕರೆದಿದ್ದಾರೆ.
ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ಇರುವುದರಿಂದ ಪುತ್ರನಿಗೆ ಈಶ್ವರಪ್ಪ ಹಾವೇರಿಯಲ್ಲಿ ಟಿಕೆಟ್ ಕೇಳಿದ್ದರು. ಆದರೆ ಈಗ ಹಾವೇರಿ ಟಿಕೆಟ್ ಬಸವರಾಜ ಬೊಮ್ಮಾಯಿ ಪಾಲಾಗಿದೆ. ಈ ಕಡೆ ಈಶ್ವರಪ್ಪಗೆ ಶಿವಮೊಗ್ಗದ ಟಿಕೆಟ್ ಇಲ್ಲ, ಪುತ್ರನಿಗೆ ಹಾವೇರಿ ಟಿಕೆಟ್ ಸಹ ಇಲ್ಲ ಎಂಬಂತಾಗಿದೆ.












Click it and Unblock the Notifications