ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಲೆಟರ್ ವೈರಲ್; ಕಾಂಗ್ರೆಸ್‌ಗೆ ಬಿಸಿತುಪ್ಪವಾದ ಮುಸುಕಿನ ಗುದ್ದಾಟ
ಶಿವಮೊಗ್ಗ, ಸೆಪ್ಟೆಂಬರ್ 25: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ನಡುವೆ ಮುನಿಸು ಹೊಸತೇನಲ್ಲ. ಈಗ ಇಬ್ಬರು ಒಂದೇ ಪಕ್ಷದಲ್ಲಿದ್ದಾರೆ. ಆರೋಪ, ಪ್ರತ್ಯಾರೋಪಗಳು ಮುಸುಕಿನ ಗುದ್ದಾಟವಾಗಿ ಮಾರ್ಪಾಡಾಗಿದೆ. ಕಿಮ್ಮನೆ ರತ್ನಾಕರ್ ಬಹಿರಂಗ ಪತ್ರ ಈ ಗುದ್ದಾಟದ ತೀವ್ರತೆಗೆ ಸಾಕ್ಷಿಯಾಗಿದೆ.
ವೈರಲ್ ಆಯ್ತು ಕಿಮ್ಮನೆ ಲೆಟರ್
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬಹಿರಂಗ ಪತ್ರ ಬರೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇದು ತೀರ್ಥಹಳ್ಳಿಯಲ್ಲಿ ವೈರಲ್ ಆಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಲೆನೋವು ತಂದೊಡ್ಡಿದೆ.
ಲೆಟರ್ ಬರೆಯೋಕೆ ಕಾರಣವೇನು?
ಮುಳುಗಡೆ ರೈತರು, ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಆರ್.ಎಂ. ಮಂಜುನಾಥಗೌಡ ನೇತೃತ್ವದಲ್ಲಿ ಪಾದಯಾತ್ರೆ ಆಯೋಜಿಸಲಾಗಿದೆ. ಮಂಡಗದ್ದೆ ಹೋಬಳಿಯ ಕಲ್ಲುಕೊಪ್ಪದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆಯ ನಡೆಯಲಿದೆ. ಇದರ ಕರಪತ್ರಗಳಲ್ಲಿ ಕಾಂಗ್ರೆಸ್ ಮುಖಂಡರ ಭಾವಚಿತ್ರಗಳನ್ನು ಬಳಕೆ ಮಾಡಿಕೊಂಡು, ಪಕ್ಷದ ಚಿಹ್ನೆ ಇಲ್ಲದೆ ಖಾಸಗಿ ಕಾರ್ಯಕ್ರಮದಂತೆ ನಡೆಸಲಾಗುತ್ತಿದೆ. ಇದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ಬಹಿರಂಗ ಪತ್ರ ಬರೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಬಹಿರಂಗ ಪತ್ರದಲ್ಲಿ ಏನಿದೆ?
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬರೆದ ಪತ್ರದಲ್ಲಿ ಆರ್.ಎಂ. ಮಂಜುನಾಥಗೌಡ ವಿರುದ್ದ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. "ಕಾಂಗ್ರೆಸ್ ಪಕ್ಷಕ್ಕೆ ಬಂದ ಐದು ತಿಂಗಳಲ್ಲಿ, ಗುಂಪುಗಾರಿಕೆ ಮಾಡುತ್ತಿರುವುದು ಮತ್ತು ಖಾಸಗಿಯಾಗಿ ಸಭೆಗಳನ್ನು ಆಯೋಜಿಸುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹೀಗೆ ಮುಂದುವರೆದರೆ ಪಕ್ಷದಿಂದ ಹೊರಗೆ ಹಾಕುವ ಅನಿವಾರ್ಯತೆ," ಕುರಿತು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ನಲ್ಲಿ ತಳಮಳ
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ನಡುವಿನ ಮುಸುಕಿನ ಗುದ್ದಾಟ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿದೆ.
"ಕಿಮ್ಮನೆ ರತ್ನಾಕರ್ ಮಾಜಿ ಸಚಿವರು ಮತ್ತು ಕೆಪಿಸಿಸಿಯ ವಕ್ತಾರರು. ಹಾಗಾಗಿ ಅದು ರಾಜ್ಯಮಟ್ಟದ ನಾಯಕರು ಮಾತನಾಡುತ್ತಾರೆ. ನಾಯಕರು ನಮ್ಮನ್ನು ಕೇಳಿದಾಗ ನಾವು ತಿಳಿಸುತ್ತೇವೆ. ಪಾದಯಾತ್ರೆಗೆ ನಮ್ಮನ್ನು ಕರೆದಿದ್ದಾರೆ. ಕಾಗೋಡು ತಿಮ್ಮಪ್ಪರನ್ನೂ ಕರೆದಿದ್ದಾರೆ. ಕೆಲವು ಸಂಘಟನೆಗಳು ಇದನ್ನು ಮಾಡುತ್ತಿದ್ದು, ಆಹ್ವಾನದ ಮೇರೆಗೆ ನಾನು ಹೋಗುತ್ತಿದ್ದೇನೆ," ಎಂದು ಮಂಜುನಾಥಗೌಡ ತಿಳಿಸಿದ್ದಾರೆ.

ಈ ವಿಚಾರವಾಗಿ, "ಪಕ್ಷದ ಚಿಹ್ನೆ ಅಡಿ ಹೋರಾಟ ಮಾಡಬೇಕಿದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ, ಇಬ್ಬರೊಂದಿಗೂ ಚರ್ಚಿಸುತ್ತೇನೆ,'' ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ತಿಳಿಸಿದ್ದಾರೆ.
ಇಬ್ಬರು ನಾಯಕರ ನಡುವಿನ ಮುಸುಕಿನ ಗುದ್ದಾಟ ತೀರ್ಥಹಳ್ಳಿ ಕಾಂಗ್ರೆಸ್ ಘಟಕದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಚುನಾವಣೆಗಳ ಹೊಸ್ತಿಲಲ್ಲಿ ಈ ಗೊಂದಲ, ಕಾರ್ಯಕರ್ತರ ಉತ್ಸಾಹಕ್ಕೆ ತೊಡಕಾಗಬಹುದು ಎಂಬ ಆತಂಕವು ಎದುರಾಗಿದೆ.












Click it and Unblock the Notifications