ಕರ್ನಾಟಕ ಚುನಾವಣೆ 2023; ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳು
2023ರ ಚುನಾವಣೆ ಹಲವು ಕಾರಣಗಳಿಗೆ ಕುತೂಹಲಕ್ಕೆ ಕಾರಣವಾಗಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿಯ ಚುಣಾವಣೆಯಲ್ಲಿ ಹಲವು ಲೆಕ್ಕಾಚಾರಗಳು ನಡೆಯುತ್ತಿವೆ. ಅದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ.
ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ ಮತ್ತು ಸಾಗರ ವಿಧಾನಸಭಾ ಕ್ಷೇತ್ರಗಳಿವೆ. ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳದ್ದು ಒಂದು ಲೆಕ್ಕಾಚಾರ. ಆದರೆ ಭದ್ರಾವತಿಯ ರಾಜಕೀಯವೇ ಬೇರೆ. ಯಡಿಯೂರಪ್ಪ, ಕೆ. ಎಸ್. ಈಶ್ವರಪ್ಪ, ಬಿ. ವೈ. ರಾಘವೇಂದ್ರ ಅವರಂತಹ ನಾಯಕರು ಇದ್ದರೂ ಸಹ ಬಿಜೆಪಿ ಭದ್ರಾವತಿಯಲ್ಲಿ ಬಾವುಟ ಹಾರಿಸಲು ಸಾಧ್ಯವಾಗಿಲ್ಲ.

ಬಿ. ಎಸ್. ಯಡಿಯೂರಪ್ಪ ಮತ್ತು ಕೆ. ಎಸ್. ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದ್ದರಿಂದ ಈ ಬಾರಿಯ ಶಿವಮೊಗ್ಗದ ಚುನಾವಣೆ ಮೇಲೆ ರಾಜ್ಯದ ಜನರ ಕಣ್ಣಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದು, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದು, ಪಕ್ಷದ ಮೇಲೆ ಹೇಗೆ ಪ್ರಭಾವ ಬೀರಲಿದೆ? ಎಂದು ಕಾದು ನೋಡಲಾಗುತ್ತಿದೆ.
ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಕಾಂಗ್ರೆಸ್ ಸೇರಿದ್ದು, ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದೆ. ಆದ್ದರಿಂದ ಜಿಲ್ಲೆಯಲ್ಲಿ ಜೆಡಿಎಸ್ ಚುನಾವಣೆಯಲ್ಲಿ ಎಷ್ಟು ಪ್ರಭಾವ ಹೊಂದಿದೆ? ಎಂದು ತಿಳಿಯಬೇಕಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇರುವ ಜನರ ಅಸಮಾಧಾನದ ಲಾಭ ಕಾಂಗ್ರೆಸ್ ಪಕ್ಷಕ್ಕೋ?, ಜೆಡಿಎಸ್ ಪಕ್ಷಕ್ಕೋ? ಕಾದು ನೋಡಬೇಕಿದೆ.
ಈ ಬಾರಿಯ ಚುನಾವಣೆಗೆ ಮೂರು ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಬಿ. ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿರುವುದರಿಂದ ಶಿಕಾರಿಪುರಕ್ಕೆ ಬಿ. ವೈ. ವಿಜಯೇಂದ್ರ ಅಭ್ಯರ್ಥಿ ಎಂದು ಬಿಜೆಪಿ ಪ್ರಕಟ ಮಾಡಿದೆ. ಈ ಮೂಲಕ ಯಡಿಯೂರಪ್ಪ ತವರು ಕ್ಷೇತ್ರಕ್ಕೆ ಉತ್ತರಾಧಿಕಾರಿ ಸಿಕ್ಕಿದ್ದಾರೆ. ಯಡಿಯೂರಪ್ಪ ಮತ್ತೊಬ್ಬ ಪುತ್ರ ಅಧಿಕೃತವಾಗಿ ಚುನಾವಣಾ ರಾಜಕೀಯ ಆರಂಭಿಸಿದ್ದಾರೆ.
ಯಡಿಯೂರಪ್ಪ, ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದು ಶಿವಮೊಗ್ಗ ಜಿಲ್ಲಾ ಬಿಜೆಪಿಯ ಅಧ್ಯಾಯವೊಂದು ಅಂತ್ಯಗೊಂಡಿದೆ. ಬಿಜೆಪಿ ಶಿವಮೊಗ್ಗ ನಗರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಪಕ್ಷದ ಪಟ್ಟಿಯಲ್ಲಿ ಅಂತಹ ಅಚ್ಚರಿಗಳು ಕಂಡುಬಂದಿಲ್ಲ.
ಸೊರಬದಲ್ಲಿ ಸಹೋದರರ ಸವಾಲ್; ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಬಾರಿಯ ಚುನಾವಣೆ ಎದುರಾದಾಗಲೂ ಸೊರಬ ಕ್ಷೇತ್ರ ಗಮನ ಸೆಳೆಯುತ್ತದೆ. ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಪುತ್ರರು ಇಲ್ಲಿ ಎದುರಾಳಿಗಳಾಗುತ್ತಾರೆ. ಈ ಬಾರಿ ಸೊರಬದ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿ ಅಭ್ಯರ್ಥಿ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದು ಸೋತಿದ್ದ ಮಧು ಬಂಗಾರಪ್ಪ ಈ ಬಾರಿ ಕಾಂಗ್ರೆಸ್ ಸೇರಿದ್ದು, ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ಜಿಲ್ಲೆಯಲ್ಲಿ ಜೆಡಿಎಸ್ ಪ್ರಭಾವ ಹೊಂದಿರುವ ಕ್ಷೇತ್ರಗಳು ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡಿದೆ. ಭದ್ರಾವತಿ ಕ್ಷೇತ್ರಕ್ಕೆ ಮಾಜಿ ಶಾಸಕ ದಿ. ಅಪ್ಪಾಜಿ ಗೌಡ ಪತ್ನಿ ಶಾರದಾ ಅಪ್ಪಾಜಿ ಗೌಡ ಅಭ್ಯರ್ಥಿಯಾಗಿದ್ದಾರೆ. ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ತೊರೆದಿದ್ದು, ಕ್ಷೇತ್ರದ ಅಭ್ಯರ್ಥಿ ಯಾರು? ಕಾದು ನೋಡಬೇಕು.
ಪಕ್ಷದ ಅಭ್ಯರ್ಥಿಗಳ ವಿವರ
| ಕ್ಷೇತ್ರ | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರರು |
| ತೀರ್ಥಹಳ್ಳಿ | ಆರಗ ಜ್ಞಾನೇಂದ್ರ | ಕಿಮ್ಮನೆ ರತ್ನಾಕರ್ | ರಾಜಾರಾಮ್ | ಘೋಷಣೆಯಾಗಿಲ್ಲ |
| ಸಾಗರ | ಹರತಾಳು ಹಾಲಪ್ಪ | ಬೇಳೂರು ಗೋಪಾಕೃಷ್ಣ | ಘೋಷಣೆಯಾಗಿಲ್ಲ | ಘೋಷಣೆಯಾಗಿಲ್ಲ |
| ಭದ್ರಾವತಿ | ಮಂಗೋಟಿ ರುದ್ರೇಶ್ | ಸಂಗಮೇಶ್ವರ ಬಿ.ಕೆ. | ಶಾರದಾ ಅಪ್ಪಾಜಿ ಗೌಡ | ಘೋಷಣೆಯಾಗಿಲ್ಲ |
| ಸೊರಬ | ಕುಮಾರ್ ಬಂಗಾರಪ್ಪ | ಮಧು ಬಂಗಾರಪ್ಪ | ಘೋಷಣೆಯಾಗಿಲ್ಲ | ಘೋಷಣೆಯಾಗಿಲ್ಲ |
| ಶಿವಮೊಗ್ಗ ಗ್ರಾಮಾಂತರ | ಕೆ. ಬಿ. ಅಶೋಕ ನಾಯಕ್ | ಘೋಷಣೆಯಾಗಿಲ್ಲ | ಶಾರದಾ ಪೂರ್ಯಾ ನಾಯ್ಕ್ | ಘೋಷಣೆಯಾಗಿಲ್ಲ |
| ಶಿವಮೊಗ್ಗ ನಗರ | ಘೋಷಣೆಯಾಗಿಲ್ಲ | ಘೋಷಣೆಯಾಗಿಲ್ಲ | ಘೋಷಣೆಯಾಗಿಲ್ಲ | ಘೋಷಣೆಯಾಗಿಲ್ಲ |












Click it and Unblock the Notifications