ಶಿವಮೊಗ್ಗ: ಮುಸ್ಲಿಮರ ಮತಗಳು ಬಿಜೆಪಿಗೆ ಬೇಕಾಗಿಲ್ಲ ಎಂದ ಶಾಸಕ ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ, ಏಪ್ರಿಲ್. 24: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಶಿವಮೊಗ್ಗ ನಗರದ ಸುಮಾರು 60 ಸಾವಿರ ಮುಸ್ಲಿಂ ಜನರ ಮತ ಕೇಳುವ ಅಗತ್ಯವಿಲ್ಲ ಎಂದು ಮಾಜಿ ಸಚಿವ, ಹಾಲಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ವೀರಶೈವ - ಲಿಂಗಾಯತ ಸಮುದಾಯವನ್ನುದ್ದೇಶಿಸಿ ಮಾತನಾಡಿದ ವೇಳೆ ಈ ಹೇಳಿಕೆ ನೀಡಿದ್ದಾರೆ.
ಏಪ್ರಿಲ್ 24 ರಂದು ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯಡಿಯೂರಪ್ಪ ಅವರ ನಿವಾಸದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ವೀರಶೈವ - ಲಿಂಗಾಯತ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು 'ಎಲ್ಲಾ ಸಮುದಾಯದ ಜನರೊಂದಿಗೆ ಸಂವಾದ ನಡೆಸೋಣ ಮತ್ತು ಬಿಜೆಪಿ ಆಡಳಿತದಲ್ಲಿ ಅವರು ಪಡೆದ ಪ್ರಯೋಜನಗಳ ಬಗ್ಗೆ ವಿಚಾರಿಸೋಣ. ಬಿಜೆಪಿಯಿಂದ ಪ್ರತಿಯೊಂದು ಸಮುದಾಯಕ್ಕೂ ಅನುಕೂಲವಾಗಿದೆ" ಎಂದು ಹೇಳಿದ್ದಾರೆ.

" ಶಿವಮೊಗ್ಗ ನಗರದಲ್ಲಿ ಸುಮಾರು 60,000 ಮಂದಿ ಮುಸ್ಲಿಮರಿದ್ದಾರೆ. ಅವರ ಮತಗಳು ನಮಗೆ ಬೇಡ. ಸಹಜವಾಗಿ ತಮಗೆ ಅಗತ್ಯವಿರುವಾಗ ನಮ್ಮ ಸಹಾಯವನ್ನು ಪ್ರತ್ಯೇಕವಾಗಿ ಸ್ವೀಕರಿಸಿರುವ ಮುಸ್ಲಿಮರು ಇದ್ದಾರೆ ಅವರು ನಮಗೆ ಮತ ಹಾಕುತ್ತಾರೆ. ರಾಷ್ಟ್ರೀಯವಾದಿ ಮುಸಲ್ಮಾನರು ಖಂಡಿತಾ ಬಿಜೆಪಿಗೆ ಮತ ಹಾಕುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರು. ಯಾರೂ ಹಿಂದೂಗಳ ಮೇಲೆ ದಾಳಿ ಮಾಡುವ ಧೈರ್ಯ ಮಾಡಲಿಲ್ಲ. ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದರೆ ಸಾರ್ವಜನಿಕರಲ್ಲಿ ಭದ್ರತೆ ಇಲ್ಲ ಎಂಬ ಭಾವನೆ ಇದೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೀರಶೈವ - ಲಿಂಗಾಯತರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ, ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ವೀರೇಂದ್ರ ಪಾಟೀಲರನ್ನು ಅಗೌರವದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಮೂಲಕ ಕಾಂಗ್ರೆಸ್ ಲಿಂಗಾಯತ ಸಮುದಾಯವನ್ನು ಅವಮಾನಿಸಿದೆ. ಅದನ್ನು ನಾವು ಮರೆಯಬಾರದು ಎಂದು ಹೇಳಿದ್ದಾರೆ.
ಸಬೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಸಮಾಜದ ಮುಖಂಡರಾದ ಡಾ.ಧನಂಜಯ್ ಸರ್ಜಿ ಮತ್ತು ಜ್ಯೋತಿ ಪ್ರಕಾಶ್ ಭಾಗವಹಿಸಿದ್ದರು.
ಈ ಹಿಂದೆಯೂ 2022 ರ ಜೂನ್‌ನಲ್ಲಿ ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಇದೇ ರೀತಿ ಮಾತನಾಡಿದ್ದರು, ಶಿವಮೊಗ್ಗ ನಗರದಲ್ಲಿ ಮುಸ್ಲಿಮರ ಮತ ಕೇಳಲು ಯಾವತ್ತೂ ಬೀದಿಗೆ ಹೋಗಿಲ್ಲ ಮತ್ತು ಮುಂದೆಯೂ ಹೋಗುವುದಿಲ್ಲ. ಬಹುತೇಕ ಕಡೆಗಳಲ್ಲಿ ಬಿಜೆಪಿ ಗೆಲ್ಲಲು ಮುಸ್ಲಿಂ ಮತಗಳ ಮೇಲೆ ಅವಲಂಬಿತವಾಗಿಲ್ಲ. ಶಿವಮೊಗ್ಗ ನಗರದಲ್ಲಿ ನಾನು ಮುಸ್ಲಿಮರ ಬೀದಿಗೆ ಹೋಗಿಲ್ಲ ಮತ್ತು ಹೋಗುವುದಿಲ್ಲ ಎಂದು ಹೇಳಿದ್ದರು.












Click it and Unblock the Notifications