'ಅವರ್ಯಾರು ನಮ್ಮನೇನು ಕೊಂಡುಕೊಂಡಿದ್ದಾರಾ' - ಸಿಪಿವೈ ಹೇಳಿಕೆಗೆ ಶಾಸಕಿ ಶಾರದಾ ಪೂರ್ಯನಾಯ್ಕ್ ತಿರುಗೇಟು
ಶಿವಮೊಗ್ಗ ನವೆಂಬರ್ 26: ಅವರ್ಯಾರು ನಮ್ಮನೇನು ಕೊಂಡುಕೊಂಡಿದ್ದಾರಾ, ಅವರನ್ನು ನಂಬಿಕೊಂಡು ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿದ್ದೀವಾ ನಾವು, ಅವರನ್ನ ನಂಬಿಕೊಂಡು ನಾವು ರಾಜಕಾರಣ ಮಾಡುತ್ತಿದ್ದೇವಾ ಎಂದು ಶಾಸಕ ಯೋಗೇಶ್ವರ್ ಹೇಳಿಕೆಗೆ ಜೆಡಿಎಸ್ ಶಾಸಕಿ ಶಾರದಾ ಪೂರ್ಯನಾಯ್ಕ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ ಗೆ ಕರೆತರುತ್ತೇನೆ ಎಂಬ ಶಾಸಕ ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಶಾರದಾ ಪೂರ್ಯನಾಯ್ಕ ಅವರು 'ಅವರ್ಯಾರು ಎಲ್ಲರನ್ನ ಕೊಂಡುಕೊಳ್ಳುತ್ತೇನೆ ಎನ್ನುವ ರೀತಿಯಲ್ಲಿ ಮಾತನಾಡಲು, ಶಾಸಕರಾಗಿ ಗೌರವಯುತವಾಗಿ ನಡೆದುಕೊಳ್ಳುವುದನ್ನು ಕಲಿತುಕೊಳ್ಳಬೇಕು, ನಮಗೆ ಟಾಸ್ಕ್ ಕೊಟ್ಟರೆ ಅವರನ್ನು ಸೆಳೆಯುತ್ತೇವೆ, ಇವರನ್ನು ಕರೆದುಕೊಂಡು ಬರುತ್ತೇವೆ ಎನ್ನುವುದನ್ನು ಬಿಡಬೇಕು' ಎಂದರು.

ಇನ್ನು 'ಅವರಿಗೆ ಇದನ್ನೇ ಮಾಡಿ ಅಭ್ಯಾಸ ಹಾಗಾಗಿ ಅವರು ಇದನ್ನೇ ಹೇಳುತ್ತಾರೆ. ಎಲ್ಲಿ ಹೋದ ಕಡೆಯಲ್ಲಿ ಅದನ್ನೇ ನೆನಪಿಸಿಕೊಳ್ಳುತ್ತಾರೆ. ಅಹಂ ಇರುತ್ತಲ್ಲ ಹಾಗಾಗಿ ಈ ರೀತಿ ಹೇಳಿಕೆ ಕೊಡುತ್ತಾರೆ. ಯೋಗೇಶ್ವರ್ ಯಾರು ನಮ್ಮ ಪಕ್ಷದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು, ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ, ಯೋಗೇಶ್ವರ್ ಅವರು ಅವರ ಪಾರ್ಟಿಯನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗಿ ನಿಂತು ಗೆದ್ದಿರುವರು, ಅವರು ನಮ್ಮ ಬಗ್ಗೆ ಏನು ಹೇಳ್ತಾರೆ' ಎಂದು ಕಿಡಿಕಾರಿದ್ದಾರೆ.
'ಎಲ್ಲರನ್ನ ಅವರದೇ ಲೆಕ್ಕದಲ್ಲಿ ತೆಗೆದುಕೊಂಡು ಹೋದರೆ ರಾಜಕಾರಣದಲ್ಲಿ ಯಾರು ಇರುವುದಿಲ್ಲ, ನಾವು ಒಂದು ತರ ಫಿಲಿಕ್ಸ್ ಹಕ್ಕಿ ಇದ್ದ ಹಾಗೆ ಮತ್ತೆ ಎದ್ದು ಬರುತ್ತೇವೆ, ಮತ್ತೆ ನಾವು ಎದ್ದು ಬರುತ್ತೇವೆ ಎನ್ನುವ ದೃಢವಾದ ನಂಬಿಕೆ ನಮ್ಮ ಬಳಿ ಇದೆ. ರಾಜಕಾರಣದಲ್ಲಿ ಜೆಡಿಎಸ್ ಗೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಭವಿಷ್ಯವಿದೆ. ನನ್ನ ಪ್ರಕಾರ ಜೆಡಿಎಸ್ ನಲ್ಲೆ ಎಲ್ಲರೂ ಇರುತ್ತಾರೆ ಎನ್ನುವ ನಂಬಿಕೆ ಇದೆ. 1-2 ಕೆಲವೊಂದು ಸರಿ ಹೇಳಲು ಆಗುವುದಿಲ್ಲ ಓವರ್ ಕಾನ್ಫಿಡೆನ್ಸ್ ಸಹ ಅಲ್ಲ. ಪಕ್ಷದಲ್ಲಿ ಇರುವರೆಲ್ಲರೂ ಗಟ್ಟಿಯಾಗಿ ಪಕ್ಷದಲ್ಲಿ ಇರುತ್ತಾರೆ' ಎಂದರು.
ಮಧು ಬಂಗಾರಪ್ಪ ಸಹ ಜೆಡಿಎಸ್ ಅಲ್ಲಿ ಇದ್ದು ಹೋದವರು. ಎಲ್ಲರನ್ನ ಎಳೆದುಕೊಂಡು ಹೋಗುತ್ತೇವೆ ಎನ್ನುವುದು ತಪ್ಪು, ಮಧು ಬಂಗಾರಪ್ಪ ನವರ ಮೇಲೆ ಗೌರವವಿದೆ. ಪಕ್ಷಾನೆ ಬೇರೆ ವಿಶ್ವಾಸನೇ ಬೇರೆ, ಪಕ್ಷ ಅಂತ ಬಂದಾಗ ನಮ್ಮ ಪಕ್ಷ ನಮಗೆ ಅವರ ಪಕ್ಷ ಅವರಿಗೆ, ಪಕ್ಷದ ವಿಚಾರ ಬಂದಾಗ ಅವರ ಪಕ್ಷ ಅವರಿಗೆ ನಮ್ಮ ಪಕ್ಷ ನಮಗೆ ಎಂದರು.
ಸಿಪಿವೈ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕಿಡಿ
ಕಾಂಗ್ರೆಸ್ ಪಕ್ಷ ತಮಗೆ ಟಾಸ್ಕ್ ನೀಡಿದರೆ ಒಂದು ತಿಂಗಳೊಳಗೆ ಜೆಡಿಎಸ್ ವಿಭಜಿಸಿ ಕಾಂಗ್ರೆಸ್‌ನೊಳಗೆ ಸೇರುವಂತೆ ಮಾಡುತ್ತೇನೆ. ಆ ಸಾಮರ್ಥ್ಯ ತಮಗಿದೆ ಎಂದು ಚನ್ನಪಟ್ಟಣ ಶಾಸಕ ಸಿಪಿ ಯೋಗೇಶ್ವರ್ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜೆಡಿಎಸ್ ಶಾಸಕರು ಕಾಂಗ್ರೆಸ್ ಬರುವ ಬಗ್ಗೆ ನನ್ನೊಂದಿಗೆ ಯಾರೂ ಚರ್ಚಿಸಿಲ್ಲ ಎಂದಿದ್ದಾರೆ. ಇನ್ನೂ ಈ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕಾಂಗ್ರೆಸ್ ಗೆ ಅಂತಹ ಅಗತ್ಯವಿಲ್ಲ ಎಂದರೆ, ನಮಗೆ ಅಂತಹ ದುರ್ಗತಿ ಬಂದಿಲ್ಲ ಎಂದು ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ನಿಷ್ಠುರವಾಗಿ ಹೇಳಿದ್ದಾರೆ.












Click it and Unblock the Notifications