Shivamogga Airport Video; ಡ್ರೋನ್ ಕಣ್ಣಲ್ಲಿ ಕಂಡ ವಿಮಾನ ನಿಲ್ದಾಣ
ಶಿವಮೊಗ್ಗ ವಿಮಾನ ನಿಲ್ದಾಣ ಫೆಬ್ರವರಿ 27ರಂದು ಉದ್ಘಾಟನೆಯಾಗಲಿದೆ. ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ವಿಮಾನ ನಿಲ್ದಾಣದ ವಿಡಿಯೋವನ್ನು ಸಂಸದ ಬಿ. ವೈ. ರಾಘವೇಂದ್ರ ಟ್ವೀಟ್ ಮಾಡಿದ್ದಾರೆ.
ಶಿವಮೊಗ್ಗ, ಫೆಬ್ರವರಿ 23; ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಮಲೆನಾಡು ಭಾಗದ ಜನರ ದಶಕಗಳ ಕನಸು ನನಸಾಗಿದೆ. ಫೆಬ್ರವರಿ 27ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. ದೆಹಲಿಯಿಂದ ಆಗಮಿಸುವ ನರೇಂದ್ರ ಮೋದಿ ಅವರ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ.
ಶಿವಮೊಗ್ಗದ ವಿಮಾನ ನಿಲ್ದಾಣದ ಲೋಕಾರ್ಪಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಜಿಲ್ಲಾಡಳಿತ ಕಾರ್ಯಕ್ರಮದ ಅಂತಿಮ ಹಂತದ ಕೆಲಸಗಳನ್ನು ಮಾಡುತ್ತಿದೆ. ಈಗಾಗಲೇ ವಾಯುಪಡೆಯ ಬೋಯಿಂಗ್ 737 ಮಾದರಿಯ ವಿಮಾನ ಮಂಗಳವಾರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಮತ್ತು ಟೇಕಾಫ್ ಆಗಿದೆ.

ಗುರುವಾರ ವಾಯು ಸೇನೆಯ 2ನೇ ವಿಮಾನ ಪರೀಕ್ಷಾರ್ಥ ಹಾರಾಟದ ಸಲುವಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ ಯಶಸ್ವಿಯಾಗಿ ಲ್ಯಾಂಡ್ ಆಯಿತು. ವಿಮಾನ ನಿಲ್ದಾಣದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಶಿವಮೊಗ್ಗದ ಬಿಜೆಪಿ ಸಂಸದ ಬಿ. ವೈ. ರಾಘವೇಂದ್ರ ಸಹ ವಿಮಾನ ನಿಲ್ದಾಣದ ವಿಡಿಯೋಗಳನ್ನು ಟ್ವೀಟ್ ಮಾಡಿದ್ದಾರೆ. ಆ ಮೂಲಕ ನಿಲ್ದಾಣದ ಉದ್ಘಾಟನೆಗೆ ಬಗ್ಗೆ ಎಂದು ಜನರಿಗೆ ಆಹ್ವಾನ ನೀಡಿದ್ದಾರೆ.
The dream of an airport at Shivamogga is coming true!
— B Y Raghavendra (@BYRBJP) February 23, 2023
The Shivamogga Airport will establish itself as not merely an airport, but as the gateway of Malnad region's journey to transformation. 1/3#ShivamoggaAirport #Shivamogga@narendramodi @narendramodi_in @PMOIndia pic.twitter.com/9Yy9jHXAW4
ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾದ ಶಿವಮೊಗ್ಗ ವಿಮಾನ ನಿಲ್ದಾಣದ ವಿಡಿಯೋವನ್ನು ಬಿ. ವೈ. ರಾಘವೇಂದ್ರ ಗುರುವಾರ ಟ್ವೀಟ್ ಮಾಡಿದ್ದಾರೆ. 'ಈ ವಿಮಾನ ನಿಲ್ದಾಣ ಕೇವಲ ಶಿವಮೊಗ್ಗ ಜಿಲ್ಲೆಯ ಜನರ ಬೇಡಿಕೆಯಾಗಿರಲಿಲ್ಲ. ಇದು ಮಧ್ಯ ಕರ್ನಾಟಕ ಭಾಗದ ಜನರ ಕನಸಾಗಿತ್ತು. ಇದರಿಂದಾಗಿ ಲಕ್ಷಾಂತರ ಯುವಕರ ಕನಸು ನನಸಾಗಲಿದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ" ಎಂದು ಸಂಸದರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಅತಿ ಉದ್ದದ ರನ್ ವೇ ನಿರ್ಮಾಣ; ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆಯ ಆರಂಭದಲ್ಲಿ 2050 ಮೀಟರ್ ರನ್ ವೇ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಏರ್‌ಬಸ್ ಸೇರಿದಂತೆ ದೊಡ್ಡ ವಿಮಾನಗಳು ಇಳಿಯಲು ಅನುಕೂಲವಾಗುವಂತೆ ರನ್ ವೇ ಉದ್ದವನ್ನು 3200 ಮೀಟರಿಗೆ ಹೆಚ್ಚಿಸಲು ಬಳಿಕ ಅನುಮೋದನೆ ನೀಡಲಾಗಿತ್ತು. ಇದರಿಂದಾಗಿ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 75 ಕೋಟಿ ರೂಪಾಯಿ ವೆಚ್ಚವಾಯಿತು.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಿಟ್ಟರೆ ಕರ್ನಾಟಕದಲ್ಲಿ ಅತಿ ಉದ್ದದ ರನ್ ವೇ ಹೊಂದಿರುವ ವಿಮಾನ ನಿಲ್ದಾಣ ಎಂಬ ಖ್ಯಾತಿ ಶಿವಮೊಗ್ಗ ವಿಮಾನ ನಿಲ್ದಾಣದ್ದಾಗಿದೆ. ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಉಡಾನ್ ಯೋಜನೆ ವ್ಯಾಪ್ತಿಯಲ್ಲಿ ಒಳಪಡಿಸುವ ಕುರಿತು ಈಗಾಗಲೇ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಇದರಿಂದ ಜನಸಾಮಾನ್ಯರಿಗೂ ಸಹ ವಿಮಾನಯಾನ ಮಾಡಲು ಅನುಕೂಲವಾಗಲಿದೆ.

ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಬಳಿಕ ಮಾತನಾಡಿದ್ದ ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, "ವಿಮಾನ ನಿಲ್ದಾಣ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಿಂದ ಭೂಮಿ ಕಳೆದುಕೊಂಡ ಪ್ರತಿಯೊಬ್ಬರಿಗೂ ಸಮರ್ಪಕವಾದ ಪರಿಹಾರವನ್ನು ಒದಗಿಸಲಾಗುವುದು" ಎಂದು ಹೇಳಿದ್ದರು.
ಆದರೆ ಶಿವಮೊಗ್ಗ ನಗರದಲ್ಲಿ ಗುರುವಾರ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ಶಿವಮೊಗ್ಗ ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿವೆ. ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದವರಿಗೆ ಸರಿಯಾದ ಪರಿಹಾರ ನೀಡಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಕಷ್ಟ ಆಲಿರುವ ಕೆಲಸ ಆಗಿಲ್ಲ" ಎಂದು ಕರ್ನಾಟಕದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಿಂದಾಗಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಅಭಿವೃದ್ಧಿಗೆ ವೇಗ ದೊರೆಯುವ ನಿರೀಕ್ಷೆ ಇದೆ. ಈ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಆರಂಭಿಸಲು ಇದು ಪೂರಕವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಶಿವಮೊಗ್ಗಕ್ಕೆ ಸಮೀಪದಲ್ಲಿರುವ ವಿಮಾನ ನಿಲ್ದಾಣಗಳು ಹುಬ್ಬಳ್ಳಿ, ಮಂಗಳೂರು ಆಗಿತ್ತು. ಈಗ ಮಲೆನಾಡು ಭಾಗಕ್ಕೆ ವಿಮಾನ ಸೇವೆ ದೊರೆಯಲಿದ್ದು, ಜನರಿಗೆ ದೇಶ, ರಾಜ್ಯದ ವಿವಿಧ ನಗರಗಳಿಗೆ ಸಂಚಾರ ನಡೆಸಲು ಅನುಕೂಲವಾಗಲಿದೆ.












Click it and Unblock the Notifications