ಕುವೆಂಪು ವಿಶ್ವವಿದ್ಯಾಲಯದಿಂದ ಕೋಡಿ ಶ್ರೀಗಳಿಗೆ ಗೌರವ ಡಾಕ್ಟರೇಟ್
ಶಿವಮೊಗ್ಗ, ಫೆಬ್ರವರಿ 13: ಕುವೆಂಪು ವಿಶ್ವ ವಿದ್ಯಾಲಯದಲ್ಲಿರುವ ಜ್ಞಾನ ಸಹ್ಯಾದ್ರಿಯ ಹೊಸ ಸಭಾಂಗಣದಲ್ಲಿ ಫೆ.15 ರಂದು 29ನೇ ಘಟಿಕೋತ್ಸವ ನಡೆಯಲಿದೆ ಎಂದು ವಿವಿಯ ಕುಲಪತಿ ಪ್ರೊ.ಜೋಗನ್ ಶಂಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ರಾಜ್ಯಪಾಲ ವಜುಭಾಯಿ ರೂಢಭಾಯಿ ವಾಲಾರವರು ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಬೇಕಿತ್ತು.ಆದರೆ ಕಾರಣಾಂತರದಿಂದ ರಾಜ್ಯಪಾಲರು ಬಾರದೇ ಇರುವ ಹಿನ್ನಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ ಬೆಂಗಳೂರಿನ ನಿರ್ದೇಶಕ ಡಾ.ಎಸ್.ಸಿ.ಶರ್ಮಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಪದವಿ ಪಡೆದವರ ಅಂಕಿ ಅಂಶ
ಪ್ರಸಕ್ತ ಸಾಲಿನ 2018-19 ರ ಸಾಲಿನ ಪಿಹೆಚ್ ಡಿ ಪದವಿಯನ್ನು 150 ಪುರುಷರು, 55 ಮಹಿಳೆಯರು ಸೇರಿ 205 ಜನರು ಅರ್ಹರಾಗಿದ್ದಾರೆ. ಪದವಿ ಪಡೆಯುವವರು 12,096 ವಿದ್ಯಾರ್ಥಿ, ವಿದ್ಯಾರ್ಥಿನಿಯರು, ದೂರ ಶಿಕ್ಷಣದಲ್ಲಿ 15,351 ಜನ ಪದವಿ ಪಡೆದುಕೊಂಡಿದ್ದು, ಅವರನ್ನು ಗೌರವಿಸಿ ಪದವಿ ಪ್ರಧಾನ ಮಾಡಲಾಗುವುದು ಎಂದರು.

ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳು
ಪ್ರೋತ್ಸಾಹ ನೀಡುವ ಸಲುವಾಗಿ 112 ಸ್ವರ್ಣ ಪದಕಗಳು ಇದ್ದು, ಇದರಲ್ಲಿ 15 ಜನರು ಪುರುಷರು, 49 ಮಹಿಳೆಯರು ಸೇರಿ ಒಟ್ಟು 64 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. ಇದರಲ್ಲಿ ಚಿಕ್ಕಮಗಳೂರು ಐಡಿಎಸ್ ಜಿ ಕಾಲೇಜಿನ ಕನ್ನಡದಲ್ಲಿ ಎಂ.ಎ ಮಾಡಿದ ನೇತ್ರಾವತಿ ಕೆ.ಎ.ಅತಿ ಹೆಚ್ಚು ಅಂದರೆ 7 ಸ್ವರ್ಣ ಪದಕಗಳು, 1 ನಗದು ಬಹುಮಾನ ಪಡೆದಿದ್ದಾರೆ.
ರಸಾಯನ ಶಾಸ್ತ್ರದಲ್ಲಿ ಅಲಿ ಅಹಮದ್ ಎನ್. 5 ಸ್ವರ್ಣ ಪದಕ, ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಅನುಷಾ ಎಚ್.ವಿ 4 ಸ್ವರ್ಣಪದಕಗಳು ಹಾಗೂ 1 ನಗದು ಬಹುಮಾನ ಪಡೆದಿದ್ದಾರೆ ಎಂದರು.

ಕೋಡಿ ಶ್ರೀಗಳಿಗೆ ಗೌರವ ಡಾಕ್ಟರೇಟ್
ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಅವರಿಗೆ ಘಟಿಕೋತ್ಸವದ ಸಂದರ್ಭದಲ್ಲಿ ಗೌರವ ಡಾಕ್ಟರ್ ಪದವಿ ಪ್ರಧಾನ ನೀಡಲಾಗುವುದು ಎಂದ ಕುಲಪತಿಗಳು, ಅವರ ಸಾಮಾಜಿಕ ಕಳಕಳಿ, ದಾಸೋಹ ಕಾರ್ಯಕ್ರಮ, ಮಠದ ವತಿಯಿಂದ ಗ್ರಾಮೀಣ ಭಾಗದಲ್ಲಿ ನಡೆಸುತ್ತಿರುವ ಶಾಲೆಗಳಿಂದ ನಡೆದಿರುವ ಶಿಕ್ಷಣದ ಜಾಗೃತಿ, ಕೋಮು ಸೌಹಾರ್ದದಲ್ಲಿ ಅವರ ಕಳಕಳಿಯ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದರು.












Click it and Unblock the Notifications