ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಬ್ಬರ: ಕೃಷಿ ಚಟುವಟಿಕೆ ಚುರುಕು
ಶಿವಮೊಗ್ಗ, ಜುಲೈ 14: ಕಳೆದ ಮೂರು ದಿನದಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ವರ್ಷಧಾರೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನದಿ, ಹಳ್ಳ, ಕೊಳ್ಳಗಳಲ್ಲಿ ಮತ್ತೆ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ತಾಲ್ಲೂಕಿನಲ್ಲಿ 18 ಮಿ.ಮೀ ಮಳೆಯಾಗಿದೆ. ಭದ್ರಾವತಿಯಲ್ಲಿ 48.20 ಮಿ.ಮೀ, ತೀರ್ಥಹಳ್ಳಿಯಲ್ಲಿ 79.60 ಮಿ.ಮೀ, ಸಾಗರದಲ್ಲಿ 70.80 ಮಿ.ಮೀ, ಶಿಕಾರಿಪುರದಲ್ಲಿ 27 ಮಿ.ಮೀ, ಸೊರಬದಲ್ಲಿ 29.20 ಮಿ.ಮೀ, ಹೊಸನಗರದಲ್ಲಿ 142.40 ಮಿ.ಮೀ ಮಳೆಯಾಗಿದೆ. ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 59.31 ಮಿ.ಮೀ ಮಳೆಯಾಗಿದೆ.

ಮಳೆ ಪ್ರಮಾಣ ಹೆಚ್ಚಳ ಆಗಿರುವುದರಿಂದ ನದಿಗಳ ನೀರಿನ ಹರಿವು ಹೆಚ್ಚಳವಾಗಿದೆ. ಜಲಾಶಯಗಳ ಒಳ ಹರಿವು ಪ್ರಮಾಣದಲ್ಲಿ ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 33,331 ಕ್ಯೂಸೆಕ್ ಒಳ ಹರಿವು ಇದೆ. ಹಾಗಾಗಿ ಜಲಾಶಯದ ನೀರಿನ ಮಟ್ಟ 1786.05 ಅಡಿಗೆ ಏರಿಕೆಯಾಗಿದೆ.

ಭದ್ರಾ ಜಲಾಶಯಕ್ಕೆ 7646 ಕ್ಯೂಸೆಕ್ ನೀರು ಒಳಹರಿವು ಇದೆ. ಸದ್ಯ ಡ್ಯಾಂನಲ್ಲಿ 157.40 ಮೀಟರ್ ನೀರಿನ ಸಂಗ್ರಹವಿದೆ. ಇನ್ನು ತುಂಗಾ ಜಲಾಶಯಕ್ಕೆ 11,456 ಕ್ಯೂಸೆಕ್ ಒಳ ಹರಿವು ಇದ್ದು, ಅಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.

ರೈತರ ಮೊಗದಲ್ಲಿ ಮಂದಹಾಸ
ಕಳೆದ ಮೂರು ದಿನದಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗುತ್ತಿರುವುದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಜೋಳ, ಶುಂಠಿ, ಭತ್ತದ ನಾಟಿ ಮಾಡಿದ್ದ ರೈತರು ಮಳೆಗಾಗಿ ಕಾದು ಕೂತಿದ್ದರು. ಹದಿನೈದು ದಿನಕ್ಕೂ ಹೆಚ್ಚು ಕಾಲ ಮಳೆ ಇಲ್ಲದ್ದರಿಂದ ಬೆಳ ಒಣಗುವ ಭೀತಿ ಇತ್ತು. ಈಗ ಮಳೆಯಾಗಿರುವುದರಿಂದ ರೈತರು ನಿರುಮ್ಮಳರಾಗಿದ್ದಾರೆ.












Click it and Unblock the Notifications